ಜೋಡೆತ್ತು ಪದ ಟ್ರೆಂಡ್ ಆಗಿದ್ದು ಇದೇ ಹೆಸರಿನಲ್ಲಿ ಸಿನಿಮಾ ಮಾಡಿದರೆ ಯಶ್​ ಜತೆ ನಟಿಸ್ತೀರಾ ಪ್ರಶ್ನೆಗೆ ದರ್ಶನ್​ ಉತ್ತರ ಹೀಗಿತ್ತು…

ಬೆಂಗಳೂರು: ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಷ್​ ಅವರಿಗೆ ನಟರಾದ ಯಶ್​ ಹಾಗೂ ದರ್ಶನ್ ಬೆಂಬಲ ಸೂಚಿಸಿದಾಗಿನಿಂದ ಜೋಡೆತ್ತು ಎಂಬ ಪದ ಪ್ರಚಲಿತಕ್ಕೆ ಬಂದಿದೆ. ಎಲ್ಲಿ ನೋಡಿದರೂ ಜೋಡೆತ್ತು ಪದ ಮತದಾರರ ಕಿವಿ ಬಂದು ರಾಚುತ್ತಿದೆ. ಹೊಸ ಟ್ರೆಂಡ್​ ಸೃಷ್ಟಿ ಮಾಡಿರುವ ಈ ಪದದ ಮೇಲೆ ಸಿನಿಮಾ ಮಾಡುತ್ತೀರ ಎಂಬ ಪ್ರಶ್ನೆಗೆ ನಟ ದರ್ಶನ ವಿಶೇಷವಾಗಿ ಉತ್ತರ ನೀಡಿದ್ದಾರೆ.

ಜೋಡೆತ್ತುಗಳು ಪದ ತುಂಬಾ ಟ್ರೆಂಡ್ ಆಗಿದ್ದು ಒಂದು ವೇಳೆ ಈ ಜೋಡೆತ್ತು ಹೆಸರಿನಲ್ಲಿ ಸಿನಿಮಾ ಬಂದರೆ ಯಶ್ ಜತೆ ಸಿನಿಮಾ ಮಾಡುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ದರ್ಶನ್​, ಒಳ್ಳೆಯ ಡೈರೆಕ್ಟರ್ ಸಿಕ್ಕಿದರೆ ಖಂಡಿತ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್​ ಪರ ಪ್ರಚಾರದ ನಡುವೆ ಮಾತನಾಡಿದರು.

ಇದೆ ವೇಳೆ ಅಂಬರೀಷ್​ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದಿರುವ ದರ್ಶನ್, ಸುಮಲತಾ ಹಾಗೂ ಜೆಡಿಎಸ್ ನಡುವಿನ ಗಲಾಟೆ ಬಗ್ಗೆ ಮಾತನಾಡಿ ಶಾಂತಿಯುತವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಜೋಡೆತ್ತು ಪದ ಯಾವಾಗಿನಿಂದ ಚಾಲ್ತಿಗೆ ಬಂತು
ಸುಮಲತಾ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ದರ್ಶನ್​ ಹಾಗೂ ಯಶ್​ ನಾವು ಜೋಡೆತ್ತುಗಳು ಎಂದು ಹೇಳುವ ಮೂಲಕ ಬೆಂಬಲ ಸೂಚಿಸಿದ್ದರು. ಈ ಮಾತಿಗೆ ಸಿಎಂ ಕುಮಾರಸ್ವಾಮಿ ಮಾತನಾಡಿ ಅವರು ಜೋಡೆತ್ತುಗಳಲ್ಲ ಕಳ್ಳೆತ್ತುಗಳು ಎಂದು ಜರಿದಿದ್ದರು. ಅಂದಿನಿಂದ ಈ ಜೋಡೆತ್ತು ಪದ ಮಂಡ್ಯ ಮಾತ್ರವಲ್ಲದೆ, ಇಡೀ ರಾಜ್ಯವನ್ನೇ ಒಂದು ಸುತ್ತು ಸುತ್ತಿಬಂದಿದೆ. ಈಗ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಇದೇ ಹೆಸರಿನಲ್ಲಿ ಸಿನಿಮಾ ಬಂದರೆ ಅಚ್ಚರಿ ಪಡಬೇಕಾಗಿಲ್ಲ. (ದಿಗ್ವಿಜಯ ನ್ಯೂಸ್​)