ಹೊಸ ಮನೆಗೆ ‘ಚಾಲೆಂಜಿಂಗ್​ ಸ್ಟಾರ್​ ದರ್ಶನ್​’ ಹೆಸರಿಟ್ಟ ಚಿತ್ರದುರ್ಗದ ಅಭಿಮಾನಿ!

ಚಿತ್ರದುರ್ಗ: ಸ್ಯಾಂಡಲ್​ವುಡ್​ನಲ್ಲಿ ಮೂಡಿ ಬರಲಿರುವ ದುರ್ಗದ ಹುಲಿ ‘ಮದಕರಿ ನಾಯಕ’ ಜೀವನ ಆಧಾರಿತ ಚಿತ್ರದ ಬಗೆಗಿನ ನಿರೀಕ್ಷೆಗಳು ದೊಡ್ಡದಾಗುತ್ತಿವೆ. ಈಗಾಗಲೇ ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಕೋಟೆ ನಾಡಿಗೆ ಭೇಟಿ ನೀಡಿ ಮದಕರಿ ನಾಯಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಮಧ್ಯೆ ದುರ್ಗದಲ್ಲಿ ದರ್ಶನ್​ಗೆ​​ ವಿಶೇಷ ಅಭಿಮಾನಿಯೊಬ್ಬರಿದ್ದಾರೆ.

ದರ್ಶನ್​ ಎಲ್ಲೆಡೆ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದರ್ಶನ್​ರಲ್ಲೇ ತಮ್ಮ ನೆಚ್ಚಿನ ದೈವವನ್ನು ಕಾಣುವ ಅಭಿಮಾನಿಗಳು ದರ್ಶನ್​ ಹೆಸರಿನಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಹಲವರು ಮದುವೆ ಆಮಂತ್ರಣದಲ್ಲಿ ದರ್ಶನ್​ ಹೆಸರನ್ನು ನಮೂದಿಸಿರುವುದು ಅಭಿಮಾನದ ಪರಕಾಷ್ಠೆಯನ್ನು ತೋರುತ್ತದೆ. ಇದೀಗ ಚಿತ್ರದುರ್ಗದ ಅಭಿಮಾನಿಯೊಬ್ಬ ತಮ್ಮ ನಿವಾಸಕ್ಕೆ ‘ಚಾಲೆಂಜಿಂಗ್​ ಸ್ಟಾರ್’​ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

ಸದ್ಯ ಮದಕರಿ ನಾಯಕ ಪಾತ್ರದಲ್ಲಿ ಅಬ್ಬರಿಸಲು ಸಜ್ಜಾಗುತ್ತಿರುವ ದರ್ಶನ್​, ಪಾತ್ರಕ್ಕೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಮೊನ್ನೆಯಷ್ಟೇ ಕೋಟೆ ನಾಡಿನ ಮುರುಘಾ ಮಠಕ್ಕೆ ಭೇಟಿ ನೀಡಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದಾರೆ. ಒಂದೇ ಕತೆಯನ್ನಿಟ್ಟುಕೊಂಡು ಸುದೀಪ್​ ಹಾಗೂ ದರ್ಶನ್​ ಬೇರೆ ಬೇರೆ ಸಿನಿಮಾ ಮಾಡುತ್ತಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.(ದಿಗ್ವಿಜಯ ನ್ಯೂಸ್​)