ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಅಭಿಮಾನಿಯ ಕುಟುಂಬಕ್ಕೆ ನೆರವು ನೀಡಿದ ಸರಳತೆಯ ಸಾಮ್ರಾಟ ದರ್ಶನ್​

ಮಂಡ್ಯ: ಸರಳತೆಯ ಸಾಮ್ರಾಟ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ನಟ ದರ್ಶನ್​, ರೀಲ್​ ಮಾತ್ರವಲ್ಲ ನಿಜ ಜೀವನದಲ್ಲಿಯೂ ತಾವೊಬ್ಬ ಹೀರೊ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ​

ಅಪಘಾತದಲ್ಲಿ ಗಾಯಗೊಂಡಿದ್ದ ತಮ್ಮ ಅಭಿಮಾನಿಗೆ ದರ್ಶನ್ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ದರ್ಶನ್ ಆಪ್ತ ಇಂಡುವಾಳು ಸಚ್ಚಿದಾನಂದ ಎಂಬುವರ ಮೂಲಕ 1ಲಕ್ಷ ರೂ. ಆರ್ಥಿಕ ನೆರವು ನೀಡಿ ಅಭಿಮಾನಿಗಳ ಪಾಲಿನ ಆರಾಧ್ಯ ದೈವರಾಗಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಕಿರಣ್ ಕುಟುಂಬಕ್ಕೆ ದರ್ಶನ್ ಸಹಾಯ ಮಾಡಿದ್ದಾರೆ. ಮಂಡ್ಯ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನಾಮಪತ್ರ ಸಲ್ಲಿಸುವ ವೇಳೆ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಮನೆಗೆ ಹಿಂದಿರುಗುವಾಗ ಅಪಘಾತ ನಡೆದಿತ್ತು. ಘಟನೆಯಲ್ಲಿ ಕಿರಣ್​ ತೀವ್ರವಾಗಿ ಗಾಯಗೊಂಡಿದ್ದರು. ಇದನ್ನು ತಿಳಿದು ದರ್ಶನ್​ ಕಿರಣ್​ ಕುಟುಂಬಕ್ಕೆ ಸಹಾಯಾಸ್ತ ಚಾಚಿದ್ದಾರೆ.

ನೊಂದವರಿಗೆ ಸಹಾಯ ಮಾಡುವ ದರ್ಶನ್​ ಅವರ ಸಾಮಾಜಿಕ ಕಳಕಳಿ ಇದೇ ಮೊದಲೇನಲ್ಲ. ಹಲವು ಬಾರಿ ಅಭಿಮಾನಿಗಳ ಸಂಕಷ್ಟಕ್ಕೆ ಸ್ಪಂದಿಸಿರುವ ದರ್ಶನ್​ ರೋಗಕ್ಕೆ ತುತ್ತಾಗಿದ್ದವರಿಗೆ ಧನ ಸಹಾಯ ಮಾಡಿದ್ದಾರೆ. ಅಲ್ಲದೆ, ಪರಿಸರ ಕಾಳಜಿ ಹೊಂದಿರುವ ದರ್ಶನ್​ ಅರಣ್ಯ ಉಳಿವಿಗೆ ಪಣತೊಟ್ಟಿದ್ದಾರೆ. ಅರಣ್ಯದಲ್ಲಿ ಕೆಲಸ ಮಾಡುವ ಅರಣ್ಯ ಇಲಾಖೆ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿಗೆ 11 ಲಕ್ಷ ರೂ. ಕೊಡುಗೆ ನೀಡಿದ್ದಾರೆ. ಆಗಾಗ ಕಾಡಿಗೆ ಭೇಟಿ ನೀಡಿ, ಅಲ್ಲಿನ ಸುಂದರ ಪರಿಸರ ಹಾಗೂ ಪ್ರಾಣಿ ಪಕ್ಷಿಗಳನ್ನು ಸೆರೆಹಿಡಿದು, ಆ ಫೋಟೋಗಳನ್ನು ಮಾರಿ ಅರಣ್ಯ ಇಲಾಖೆಯ ನೆರವಿಗೆ ನೀಡುತ್ತಾರೆ. ಇಷ್ಟೆಲ್ಲ ಸಾಮಾಜಿಕ ಕಾರ್ಯ ಮಾಡುವ ನಟ ದರ್ಶನ್​ ಅವರನ್ನು ಅಭಿಮಾನಿಗಳು ಆರಾಧ್ಯ ದೈವನಂತೆ ಪೂಜಿಸುತ್ತಾರೆ. (ದಿಗ್ವಿಜಯ ನ್ಯೂಸ್​)

ತನ್ನ ಆಸೆಯಂತೆ ನಟ ದರ್ಶನ್​ ಕಣ್ತುಂಬಿಕೊಂಡು ಶಾಶ್ವತವಾಗಿ ಕಣ್ಮುಚ್ಚಿದ ಅಭಿಮಾನಿ

ಅರಣ್ಯ ಇಲಾಖೆ ಗುತ್ತಿಗೆ ನೌಕರರಿಗೆ ದರ್ಶನ್​ ಸಹಾಯ ಹಸ್ತ: ಕ್ಷೇಮಾಭಿವೃದ್ಧಿಗೆ 11 ಲಕ್ಷ ರೂ. ಕೊಡುಗೆ

Leave a Reply

Your email address will not be published. Required fields are marked *