ಬಂಡೀಪುರ ಕಾಡ್ಗಿಚ್ಚಿಗೆ ದರ್ಶನ್ ಮರುಕ

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬೆಂಕಿಯದ್ದೇ ಸುದ್ದಿ. ಸದ್ಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಪರಿಸರ ಸಂಪತ್ತು ನಾಶವಾಗಿದೆ. ಎಷ್ಟೋ ಪ್ರಾಣಿ-ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿವೆ, ಇನ್ನೆಷ್ಟೋ ಪ್ರಾಣಿಗಳು ಆಹಾರವಿಲ್ಲದೆ ಒದ್ದಾಡುತ್ತಿವೆ. ಈ ವಿಚಾರ ಕೇಳಿ ನಟ ದರ್ಶನ್ ಅವರಿಗೂ ತುಂಬ ನೋವಾಗಿದೆ. ಮೊದಲಿನಿಂದಲೂ ಅರಣ್ಯ, ಪ್ರಾಣಿ ಎಂದರೆ ಅವರಿಗೆ ಅಚ್ಚುಮೆಚ್ಚು. ‘ಸಾವಿರಾರು ಎಕರೆ ಅರಣ್ಯಕ್ಕೆ ಬೆಂಕಿ ಬಿದ್ದಿದೆ. ಈ ವಿಚಾರ ಕೇಳಿದಾಗಿನಿಂದಲೂ ತುಂಬ ನೋವುಂಟಾಗಿದೆ. ಕಾಡ್ಗಿಚ್ಚಿಗೆ ಮನುಷ್ಯರೇ ಕಾರಣ. ಅವರ ಮನಸ್ಥಿತಿ ಬದಲಾಗಬೇಕಿದೆ’ ಎಂದು ಬೇಸರಿಸಿಕೊಳ್ಳುತ್ತಾರೆ ದರ್ಶನ್.

ಆಗಾಗ ಅರಣ್ಯಕ್ಕೆ ಭೇಟಿ ನೀಡಿ, ಪ್ರಾಣಿ-ಪಕ್ಷಿಗಳ ಫೋಟೋ ತೆಗೆಯುವ ಹವ್ಯಾಸ ದರ್ಶನ್ ಅವರದ್ದು. ಹಾಗೆ ತೆಗೆದ ಫೋಟೋಗಳ ಪ್ರದರ್ಶನವನ್ನು ಮಾರ್ಚ್ 1ಕ್ಕೆ ಹಮ್ಮಿಕೊಂಡಿದ್ದಾರೆ ಕೂಡ. ‘ಕೆಲ ದಿನಗಳ ಹಿಂದಷ್ಟೇ ಬಂಡಿಪುರ ಕಾಡಿಗೆ ಹೋಗಿದ್ದೆ. ಹುಲಿ ಸೇರಿ ಹಲವು ಪ್ರಾಣಿಗಳ ಫೋಟೋ ತೆಗೆದಿದ್ದೆ. ಈಗ ಅವುಗಳನ್ನು ನೋಡಲು ಸಾಧ್ಯವಿಲ್ಲ. ಹಲವು ಪ್ರಾಣಿಗಳು ಬೆಂಕಿಯಲ್ಲಿ ಸಿಲುಕಿ ಪ್ರಾಣ ಬಿಟ್ಟಿವೆ’ ಎಂದು ನೊಂದುಕೊಳ್ಳುತ್ತಾರೆ ಅವರು. ಸದ್ಯ ಶೂಟಿಂಗ್​ನಲ್ಲಿ ಬಿಜಿ ಆಗಿರುವ ದರ್ಶನ್, ಮಾರ್ಚ್ ಮೊದಲ ವಾರ ಬಂಡಿಪುರಕ್ಕೆ ಭೇಟಿ ನೀಡಲಿದ್ದಾರಂತೆ. ‘ಇಂದು ಅಲ್ಲಿ ಎಲ್ಲಿ ನೋಡಿದರೂ ಬರೀ ಬೂದಿ ಇದೆ. ಆದರೆ, ಅರಣ್ಯ ಬೆಳೆಸುವುದು ತಮಾಷೆಯ ಮಾತಲ್ಲ. ಒಂದು ಮರ ಬೆಳೆಯುವುದಕ್ಕೆ ಎಷ್ಟು ವರ್ಷಗಳು ಬೇಕು ಗೊತ್ತ್ತ ಒಂದು ಸಸಿ ನೆಟ್ಟು ನಾವು ಅರಣ್ಯ ಬೆಳೆಸುತ್ತಿದ್ದೇವೆ ಎನ್ನುವುದೆಲ್ಲ ಭ್ರಮೆ. ಪ್ರಕೃತಿ ನೀಡಿರುವುದನ್ನೇ ಉತ್ತಮವಾಗಿ ನೋಡಿಕೊಳ್ಳಬೇಕು’ ಎಂಬುದು ದರ್ಶನ್ ಕಿವಿಮಾತು. ‘ಈಗತಾನೇ ಬೇಸಿಗೆ ಶುರುವಾಗಿದೆ. ಈಗಲೇ ಬೆಂಕಿ ಕಾಣಿಸಿಕೊಂಡಿರುವುದು ಆತಂಕ ಉಂಟು ಮಾಡಿದೆ. ಮುಂದಿನ ಮೂರು ತಿಂಗಳು ಬೇಸಿಗೆಯನ್ನು ಕಳೆಯುವುದು ಅಷ್ಟು ಸುಲಭದ ಮಾತಲ್ಲ. ಆ ಪ್ರಾಣಿಗಳ ಮೇವು ಸುಟ್ಟು ಹೋಗಿದೆ’ ಎಂದು ಆತಂಕ ವ್ಯಕ್ತಪಡಿಸುವ ದರ್ಶನ್, ಕಾಡ್ಗಿಚ್ಚು ನಂದಿಸಲು ಹೋಗಿರುವ ಸ್ವಯಂ ಸೇವಕರಿಗೆ, ಪರಿಸರ ಪ್ರೇಮಿಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಬೇಕಾದ ನೆರವನ್ನು ನೀಡಿದ್ದಾರೆ.

ಬೆಂಕಿ ಬಿದ್ದಾಗ ಎಷ್ಟೋ ಪ್ರಾಣಿಗಳು ಜೀವ ರಕ್ಷಣೆಗಾಗಿ ಅರಣ್ಯದಿಂದ ನಾಡಿನತ್ತ ಮುಖ ಮಾಡುತ್ತವೆ. ಆಗ ಪ್ರಾಣಿಗಳು ಮನುಷ್ಯರಿಗೆ ತೊಂದರೆ ಮಾಡಿದವು ಎಂಬ ಸುದ್ದಿ ಕೇಳುತ್ತೇವೆ. ವಿಪರ್ಯಾಸವೆಂದರೆ, ಮನುಷ್ಯರೇ ಪರಿಸರ ನಾಶ ಮಾಡಿ ಪ್ರಾಣಿಗಳಿಗೆ ತೊಂದರೆ ನೀಡುತ್ತಿದ್ದಾರೆ.

| ದರ್ಶನ್ ನಟ