ಯೂಟ್ಯೂಬ್​ನಲ್ಲಿ ದಾಖಲೆ ಬರೆದ ಯಜಮಾನ ಚಿತ್ರದ ಐಟಂ ಸಾಂಗ್​!

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಯಜಮಾನ ಚಿತ್ರದ ‘ಶಿವನಂದಿ’ ಹಾಗೂ ‘ಒಂದು ಮುಂಜಾನೆ’ ಲಿರಿಕಲ್​​ ಸಾಂಗ್​ ವಿಡಿಯೋ ಈಗಾಗಲೇ ಯೂಟ್ಯೂಬ್​ನಲ್ಲಿ ಸಾಕಷ್ಟು ಹವಾ ಸೃಷ್ಟಿಸಿದೆ. ಇದೀಗ ಮೂರನೇ ಸಾಂಗ್​ ಬಿಡುಗಡೆಯಾಗಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಯೋಗರಾಜ್​ ಭಟ್​ ಗೀತರಚನೆ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಸಂಯೋಜನೆಯಲ್ಲಿ ಮೂಡಿ ಬಂದಿರುವ ಬಸಣ್ಣಿ ಬಾ..ಬಸಣ್ಣಿ ಬಾ… ಬಜಾರು ನಮ್ದೆ ಇವತ್ತು ಬಸಣ್ಣಿ ಬಾ ಎಂಬ ಉತ್ತರ ಕರ್ನಾಟಕ ಭಾಷಾ ಶೈಲಿಯ ಲಿರಿಕಲ್​ ವಿಡಿಯೋ ಸಾಂಗ್ ಇಂದು ಬಿಡುಗಡೆಯಾಗಿದೆ.​

ದರ್ಶನ್​ ಅಭಿಮಾನಿಗಳಿಗೆ ಗಣರಾಜ್ಯೋತ್ಸವದ ಉಡುಗೊರೆಯನ್ನಾಗಿ ಈ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ 5 ಗಂಟೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಣೆ ಮಾಡಿದ್ದಾರೆ. ಮಾಸ್​​​ ಆಗಿರುವ ಐಟಂ ಸಾಂಗ್​​ ಅದ್ಧೂರಿಯಾಗಿ ಮೂಡಿ ಬಂದಿದ್ದು, ದಚ್ಚು ಸ್ಟೈಲಿಶ್​​​ ಲುಕ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲ್ಯಾಮರ್ ಗೊಂಬೆ ತಾನ್ಯಾ ಹೋಪ್ ಜತೆ ದಚ್ಚು ಮಸ್ತ್ ಸ್ಟೆಪ್ಸ್​ ಹಾಕಿದ್ದಾರೆ.

ದರ್ಶನ್​ ವೃತ್ತಿ ಬದುಕಿನ ಮಹತ್ವದ ಚಿತ್ರವಾಗಿರುವ ಯಜಮಾನ ಚಂದನವನದಲ್ಲಿ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿಸಿದೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಪಕಿ ಶೈಲಾಜನಾಗ್, ಬಿ. ಸುರೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪಿ.ಕುಮಾರ್ ಜೊತೆ ವಿ.ಹರಿಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ‌ಫೆಬ್ರವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. (ದಿಗ್ವಿಜಯ ನ್ಯೂಸ್​)