More

  ಎಲ್ರೂ ಕೇಳಿದ್ರಿಂದ್ಲೇ ಆಯ್ತು ಮತ್ತೆ ಉದ್ಭವ; ಟ್ರೇಲರ್ ರಿಲೀಸ್ ಮಾಡಿದ ದರ್ಶನ್

  ‘ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳಾದವು. ಈ 3 ದಶಕದಲ್ಲಿ ಹೆಚ್ಚೂಕಮ್ಮಿ 30 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆದರೆ ನಾನು ಎಲ್ಲಿಗೇ ಹೋದರೂ ಎಲ್ಲರೂ ನೀವು ಮತ್ತೊಂದು ‘ಉದ್ಭವ’ ಮಾಡಿ ಎನ್ನುತ್ತಿದ್ದರು. ‘ಯಾರಿಗೂ ಹೇಳ್ಬೇಡಿ’ ಎಂದು ಅಂಥದ್ದೇ ಇನ್ನೊಂದು ಸಿನಿಮಾ ಮಾಡಿದ್ದರೂ ಯಾರೂ ಅದನ್ನು ಕೇಳುತ್ತಿರಲಿಲ್ಲ. ಮತ್ತೊಂದು ‘ಉದ್ಭವ’ ಮಾಡಿ ಎಂದೇ ಹೇಳುತ್ತಿದ್ದರು. ಹೀಗಾಗಿ ‘ಮತ್ತೆ ಉದ್ಭವ’ ಎಂದು ಈ ಸಿನಿಮಾ ಮಾಡಿದೆ’ ಎಂಬುದಾಗಿ ಹೇಳಿದರು ನಿರ್ದೇಶಕ ಕೋಡ್ಲು ರಾಮಕೃಷ್ಣ.

  ಅವರ ನಿರ್ದೇಶನದ ‘ಮತ್ತೆ ಉದ್ಭವ’ ಸಿನಿಮಾದ ಟ್ರೇಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ‘ಇತ್ತೀಚೆಗಷ್ಟೇ ‘ಜನುಮದ ಜೋಡಿ’ ಸಿನಿಮಾ ನೋಡುತ್ತ ಅದರಲ್ಲಿನ ‘ಮಣಿ ಮಣಿ’ ಹಾಡು ಕೇಳಿ ನಿಮ್ಮನ್ನು ನೆನಪಿಸಿಕೊಂಡೆ. ಅಂಥದ್ದೇ ಮ್ಯಾಜಿಕ್ ಇಲ್ಲಿ ಮಾಡಿರುತ್ತೀರಿ ಎಂಬ ಭರವಸೆ ಇದೆ’ ಎಂದು ಸಂಗೀತ ನಿರ್ದೇಶಕ ವಿ.ಮನೋಹರ್ ಬಗ್ಗೆ ದರ್ಶನ್ ಮೆಚ್ಚುಗೆ ಸೂಚಿಸಿದರು. ‘ಉದ್ಭವ’ ಸಿನಿಮಾದಲ್ಲಿ ಅನಂತನಾಗ್ ಮಾಡಿದ್ದ ಪಾತ್ರಕ್ಕೆ ಇಬ್ಬರು ಮಕ್ಕಳು. ಅದರಲ್ಲಿ ಒಬ್ಬ ಮಗನನ್ನೇ ಹೀರೋ ಆಗಿಸಿ ಈ ಸಿನಿಮಾ ಮಾಡಿದ್ದು, ಪ್ರಮೋದ್ ಆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಪ್ರೀಮಿಯರ್ ಪದ್ಮಿನಿ’ ಸಿನಿಮಾದಲ್ಲಿ ಪ್ರಮೋದ್ ನಟನೆ ಇಷ್ಟವಾಗಿ ಅವರನ್ನೇ ಹೀರೋ ಮಾಡಲು ನಿರ್ಧರಿಸಿದೆ’ ಎಂದರು ನಿರ್ದೇಶಕರು. ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ನಾನು ಮುಗ್ಧ ಹಳ್ಳಿ ಹುಡುಗನ ಪಾತ್ರ ಮಾಡಿದ್ದೆ. ಇಲ್ಲಿ ಒಂಥರ ಕಿರಾತಕನ ಪಾತ್ರ. ಅಂದು ಅನಂತನಾಗ್ ಮಾಡಿದ ಪಾತ್ರದ ಮಗನ ಪಾತ್ರದಲ್ಲಿ ಕಾಣಿಸಿದ್ದೇನೆ. ಮೂರು ಲೇಯರ್ ಕಥೆ ಇದೆ. ಅಂದು ‘ಕರಿಯ’ ಸಿನಿಮಾ ಬಿಡುಗಡೆ ಆದ ಸಂದರ್ಭ ನಮ್ಮೂರು ಮದ್ದೂರಿನಲ್ಲಿ ದರ್ಶನ್ ಅವರನ್ನು ಅಭಿಮಾನಿಗಳು ಸನ್ಮಾನಿಸಿದ್ದನ್ನು ನೋಡಿದ್ದೆ. ಅಂದು ನನಗೆ ಸ್ಪೂರ್ತಿಯಾದವರೇ ಇಂದು ನನ್ನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ತುಂಬ ಖುಷಿ ನೀಡಿತು’ ಎಂದರು ನಾಯಕ ಪ್ರಮೋದ್. ‘ಇದು ವಿಭಿನ್ನ ಪಾತ್ರಗಳಿರುವ ಸಿನಿಮಾ. ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಾನಿಲ್ಲಿ ನಟಿ ಹಾಗೂ ರಾಜಕಾರಣಿ ಎರಡೂ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ’ ಎಂದರು ನಾಯಕಿ ಮಿಲನಾ ನಾಗರಾಜ್. ‘ನನಗೆ ಹಲವು ವರ್ಷಗಳಿಂದ ವಿಡಂಬನಾತ್ಮಕವಾಗಿ ಸಂಗೀತ ನೀಡುವಂತಹ ಸಿನಿಮಾ ಸಿಕ್ಕಿರಲಿಲ್ಲ. ‘ಮತ್ತೆ ಉದ್ಭವ’ ಮೂಲಕ ಆ ಆಸೆ ಈಡೇರಿದೆ’ ಎಂದರು ಸಂಗೀತ ನಿರ್ದೇಶಕ ವಿ.ಮನೋಹರ್. ‘ನಾನಿಲ್ಲಿ ಸಂಭಾಷಣೆ ಬರೆಯುವ ಜತೆಗೆ ಒಬ್ಬ ಕಳ್ಳ ಸ್ವಾಮಿಯ ಪಾತ್ರವನ್ನೂ ಮಾಡಿದ್ದೇನೆ ಎಂದರು ಎಸ್.ಮೋಹನ್.

  ನಿತ್ಯಾನಂದ ಭಟ್, ಸತ್ಯ, ಮಹೇಶ್ ಮುದ್ಗಲ್, ರಾಜೇಶ್ ನಿರ್ಮಾಪಕರಾಗಿ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಮುದ್ರಾಡಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ಸಾಹಿತಿ ಟಿ.ಎನ್.ಸೀತಾರಾಮ್ ಮುಂತಾದವರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts