ಸದ್ದು ಮಾಡಿದ ದರ್ಶನ್ ಡಿ53 ಪೋಸ್ಟರ್

ನಟ ದರ್ಶನ್ ಕಡೆಯಿಂದ ದೀಪಾವಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ತಮ್ಮ 53ನೇ ಸಿನಿಮಾದ ಥೀಮ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಮುಂದಿನ ಸಿನಿಮಾದಲ್ಲಿ ಯಾವ ರೀತಿಯ ಕಂಟೆಂಟ್ ಇರಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ‘ಚೌಕ’ ನಂತರ ತರುಣ್ ಸುಧೀರ್ ಆಕ್ಷನ್-ಕಟ್ ಹೇಳುತ್ತಿರುವ ಈ ಸಿನಿಮಾಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಅದಕ್ಕೂ ಮೊದಲು ಥೀಮ್ ಪೋಸ್ಟರ್ ಬಿಡುವ ಮೂಲಕ ಕುತೂಹಲ ಹೆಚ್ಚಿಸಿದೆ.

‘ಈ ಪೋಸ್ಟರ್​ನಲ್ಲಿ ನಿಮಗೆ ಏನೇನು ಅಂಶಗಳು ಕಾಣಿಸಲಿವೆಯೋ, ಅವೆಲ್ಲ ಸಿನಿಮಾದಲ್ಲಿ ಇರಲಿವೆ. ಕಥಾನಾಯಕ ಮತ್ತು ಮಗು ಈ ಸಿನಿಮಾದ ಮುಖ್ಯ ಪಾತ್ರಧಾರಿಗಳಾಗಿರುತ್ತಾರೆ. ಕಮರ್ಷಿಯಲ್ ಆಗಿ ಮೂಡಿಬರಲಿರುವ ಎಮೋಷನಲ್ ಕಥೆ ಇದಾಗಿದೆ’ ಎಂದು ಮಾಹಿತಿ ನೀಡುತ್ತಾರೆ ತರುಣ್. ಈ ಪೋಸ್ಟರ್​ನಲ್ಲಿ ‘ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು’ ಎಂಬ ಡೈಲಾಗ್ ಇದ್ದು, ಸದ್ಯ ಸಖತ್ ಟ್ರೆಂಡಿಂಗ್​ನಲ್ಲಿದೆ. ಈ ಬಗ್ಗೆಯೂ ಮಾಹಿತಿ ನೀಡುವ ತರುಣ್, ‘ನಮ್ಮ ಚಿತ್ರದ ಹೀರೋ ಎಂತಹ ವ್ಯಕ್ತಿತ್ವಗಳ ಮುಂದೆ ಸೋಲುತ್ತಾನೆ ಹಾಗೂ ಎಂತಹ ವ್ಯಕ್ತಿತ್ವಗಳ ಎದುರು ಗೆಲ್ಲುತ್ತಾನೆ ಎಂಬುದನ್ನು ಈ ಸಂಭಾಷಣೆಯ ಮೂಲಕ ತಿಳಿಸಿದ್ದೇವೆ. ಡಿಸೆಂಬರ್​ನಲ್ಲಿ ಫೋಟೋಶೂಟ್ ಮಾಡುವ ಪ್ಲಾನ್ ಇದೆ. ಫೆಬ್ರವರಿ ವೇಳೆಗೆ ಶೂಟಿಂಗ್ ಶುರುವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಅವರು.

ಇನ್ನು, ಮಗು ಪಾತ್ರವನ್ನು ದರ್ಶನ್ ಪುತ್ರ ವಿನೀಶ್ ಮಾಡಲಿದ್ದಾರೆಯೇ? ‘ಇಲ್ಲ. ಅದು ಐದರಿಂದ ಏಳು ವರ್ಷದ ಚಿಕ್ಕ ಹುಡುಗನ ಪಾತ್ರ. ಅದಕ್ಕಾಗಿ ಬಾಲನಟನ ಹುಡುಕಾಟ ನಡೆದಿದೆ’ ಎಂಬ ಸ್ಪಷ್ಟನೆ ನೀಡುತ್ತಾರೆ ತರುಣ್. ‘ಹೆಬ್ಬುಲಿ’ ನಿರ್ವಪಕ ಉಮಾಪತಿ ಶ್ರೀನಿವಾಸ್ ಈ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದಾರೆ.

ಮತ್ತೆ ಒಂದಾದ ತಾರಕ್ ಜೋಡಿ

ದರ್ಶನ್ ನಟನೆಯ ‘ತಾರಕ್’ ಚಿತ್ರಕ್ಕೆ ‘ಮಿಲನ’ ಪ್ರಕಾಶ್ ನಿರ್ದೇಶನ ಮಾಡಿದ್ದರು. ಅದು ದರ್ಶನ್ ನಟನೆಯ 49ನೇ ಚಿತ್ರವಾಗಿತ್ತು. ಆನಂತರ ಬೇರೆ ಬೇರೆ ಸಿನಿಮಾಗಳಲ್ಲಿ ಅವರು ಬಿಜಿಯಾದರು. ಇದೀಗ ದರ್ಶನ್ ಅಭಿನಯದ ಹೊಸ ಸಿನಿಮಾಕ್ಕೆ ಪ್ರಕಾಶ್ ಆಕ್ಷನ್-ಕಟ್ ಹೇಳಲಿದ್ದಾರೆ ಎಂಬ ನ್ಯೂಸ್ ಹೊರಬಿದ್ದಿದೆ. ಸದ್ಯ ‘ಕುರುಕ್ಷೇತ್ರ’, ‘ಯಜಮಾನ’ ಚಿತ್ರಗಳ ಕೆಲಸವನ್ನು ಮುಗಿಸಿರುವ ದರ್ಶನ್, ಡಿಸೆಂಬರ್ 10ರಿಂದ ‘ಒಡೆಯ’ ಸೆಟ್ ಸೇರಿಕೊಳ್ಳಲಿದ್ದಾರೆ. ಅಲ್ಲದೆ, ರಾಕ್​ಲೈನ್ ವೆಂಕಟೇಶ್ ನಿರ್ವಣದ ಮದಕರಿ ನಾಯಕ ಕುರಿತ ಸಿನಿಮಾದಲ್ಲೂ ಅವರು ನಟಿಸಬೇಕಿದೆ. ತರುಣ್ ನಿರ್ದೇಶನದ ಹೊಸ ಸಿನಿಮಾ ಕೂಡ ಲಿಸ್ಟ್​ನಲ್ಲಿದೆ. ಇದೆಲ್ಲ ಮುಗಿದ ಮೇಲೆ ಪ್ರಕಾಶ್ ಜತೆಗಿನ ಸಿನಿಮಾಕ್ಕೆ ಚಾಲನೆ ಸಿಗಲಿದೆ ಎನ್ನಲಾಗುತ್ತಿದೆ.