ಚಳ್ಳಕೆರೆ: ತಾಲೂಕಿನ ದೊಡ್ಡೇರಿ ಗ್ರಾಮದ ನೂತನ ಜಲಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಮಹಾಶಿವರಾತ್ರಿ ಅಂಗವಾಗಿ ಭಕ್ತರಿಗೆ ವಿಶೇಷ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಾಲಯ ನಿರ್ಮಾಣಕಾರ, ನಿವೃತ್ತ ಉಪನ್ಯಾಸಕ ಡಿ.ಎಸ್.ರಾಜಣ್ಣ ಮಾತನಾಡಿ, ಕುಟುಂಬದ ಹಿರಿಯರ ಧಾರ್ಮಿಕ ಪದ್ಧತಿಯಂತೆ ಪೂಜೆ ಆಯೋಜಿಸಲಾಗಿದೆ. ನಮ್ಮ ಹಿರಿಯರ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕುಟುಂಬದ ಮೂಲ ಜಾಗದಲ್ಲಿ ಜಲಕಂಠೇಶ್ವರ ದೇವಾಲಯ ಮತ್ತು ವೃದ್ಧಾಶ್ರಮ ಕಾರ್ಯ ಈಗಾಗಲೇ ಆರಂಭ ಮಾಡಲಾಗಿದೆ. ದೇವಸ್ಥಾನ ಆವರಣದಲ್ಲಿ ದೊಡ್ಡೇರಿ ಪಾಳೆಗಾರರ ಸಂಸ್ಥಾನದ ಶಿಲಾಶಾಸನಗಳು ಮತ್ತು ದೇವತಾ ವಿಗ್ರಹಗಳನ್ನು ಸಂಗ್ರಹಿಸಿ, ರಕ್ಷಿಸಲಾಗಿದೆ ಎಂದು ತಿಳಿಸಿದರು.
ಸುಮಾರು 9 ಅಡಿ ಎತ್ತರದ ಶಿವನ ವಿಗ್ರಹ ಸ್ಥಾಪಿಸಲಾಗಿದೆ. ಶಿವಲಿಂಗದ ಮೇಲೆ ನೀರಿನ ಕಾರಂಜಿ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ಸರ್ವರಿಗೂ ದರ್ಶನ ಇರುತ್ತದೆ ಎಂದು ಹೇಳಿದರು.
ನಮ್ಮ ತಂದೆ ಸ್ವಾತಂತ್ರ್ಯಯೋಧ ದಿ. ಶರಣಬಸವಯ್ಯ ಅವರ ಗೌರವಧನವನ್ನು ನಮ್ಮ ತಾಯಿ ಸರ್ವಮಂಗಳಮ್ಮ ಗ್ರಾಮದ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಬಳಸಿದ್ದಾರೆ. ಇಲ್ಲಿನ ಬಸವೇಶ್ವರ ದೇವಸ್ಥಾನವನ್ನು 12 ಲಕ್ಷ ರೂ. ವೆಚ್ಚದಲ್ಲಿ ಮರು ನಿರ್ಮಿಸಿದ್ದು, 5 ದೇಗುಲಗಳ ಜೀರ್ಣೋದ್ಧಾರ ಮಾಡಲಾಗಿದೆ ಎಂದರು.
ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಮತ್ತು ಪೂಜಾ ಆಚರಣೆಗೆ ಕುಟುಂಬಸ್ಥರಾದ ಶಿವಕುಮಾರ್, ಮಧುಮತಿ, ಶಂಕರ್, ವಿಜಯಮ್ಮ, ಡಿ.ಎಸ್.ರಾಜಣ್ಣ, ಅನುರಾಧಾ ಅವರ ಸಹಕಾರ ಇದೆ ಎಂದು ಹೇಳಿದರು.