ದರ್ಶನ್​-ನಿಖಿಲ್​ ಕುಮಾರಸ್ವಾಮಿ ಕುರುಕ್ಷೇತ್ರ ಸುದ್ದಿಗೋಷ್ಠಿಯಲ್ಲಿ ವೇದಿಕೆ ಹಂಚಿಕೊಳ್ತಾರಾ?

ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಂಡ್ಯದಲ್ಲಿ ಬದ್ಧ ರಾಜಕೀಯ ವೈರಿಗಳಂತೆ ಪರಸ್ಪರ ವಿರುದ್ಧ ವಾಗ್ದಾಳಿ ನಡೆಸಿದ್ದ ನಟ ದರ್ಶನ್​ ಮತ್ತು ನಿಖಿಲ್​ ಕುಮಾರಸ್ವಾಮಿ ಅವರು ಇಂದು ನಡೆಯಲಿರುವ ಕುರುಕ್ಷೇತ್ರ ಚಿತ್ರದ ಸುದ್ದಿಗೋಷ್ಠಿಯಲ್ಲಿ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇದೆ.

ಮಂಡ್ಯದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ದರ್ಶನ್​ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಮತ್ತು ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜತೆಗೆ ಸಾಲಮನ್ನಾ ಕುರಿತು ಅವರು ತಮ್ಮ ಭಾಷಣದಲ್ಲಿ ಟಾಂಗ್​ ನೀಡಿದ್ದರು. ಜತೆಗೆ ಕುರುಕ್ಷೇತ್ರ ಚಿತ್ರದಲ್ಲಿ ಹೀರೋ ದುರ್ಯೋಧನನ ಪಾತ್ರಕ್ಕಿಂತಲೂ ಅಭಿಮನ್ಯು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ದರ್ಶನ್​ ಬೇಸರ ಮಾಡಿಕೊಂಡಿದ್ದರು ಎಂದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ನಡುವಿನ ವೈಮನಸ್ಸನ್ನು ಮರೆತು ಇಬ್ಬರೂ ಒಂದೇ ವೇದಿಕೆ ಹಂಚಿಕೊಳ್ಳುತ್ತಾರಾ ಎಂಬ ಕುತೂಹಲ ಮನೆ ಮಾಡಿದೆ.

ಶಾಸಕ ಮುನಿರತ್ನ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕುರುಕ್ಷೇತ್ರ ಚಿತ್ರ ಜೂನ್​ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಲಾಗುತ್ತಿದೆ. ಚಿತ್ರದಲ್ಲಿ ದರ್ಶನ್​ ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಖಿಲ್​ ಕುಮಾರಸ್ವಾಮಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದಾರೆ.