ಗೌತಮ ಪಂಚ ಮಹಾರಥೋತ್ಸವ ವೈಭವ


ಪ್ರತಾಪ್ ಟಿ.ಕೋಡಿನರಸೀಪುರ ನಂಜನಗೂಡು
ವಿಶ್ವವಿಖ್ಯಾತ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಗೌತಮ ಪಂಚ ಮಹಾರಥೋತ್ಸವ ಎರಡೂವರೆ ತಾಸು ವಿಳಂಬದ ನಡುವೆಯೂ ಲಕ್ಷಾಂತರ ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು.

100 ಟನ್ ಭಾರವಿರುವ 95 ಅಡಿ ಎತ್ತರದ ಗೌತಮ ರಥಕ್ಕೆ ಪ್ರಾತಃಕಾಲ 6.40 ರಿಂದ 7 ಗಂಟೆ ನಡುವೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಮನ್ಮಹಾಗೌತಮ ರಥಾರೋಹಣ ನೆರವೇರಿಸಲಾಯಿತು. ಬಳಿಕ ರಥಕ್ಕೆ ಪೂಜೆ ಸಲ್ಲಿಸಿ ಚಕ್ರಗಳಿಗೆ ಈಡುಗಾಯಿ ಒಡೆದು ರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ನಿಗದಿತ ಅವಧಿಯಲ್ಲಿ ಚಾಲನೆಗೊಂಡ ರಥೋತ್ಸವಕ್ಕೆ ಆರಂಭದಲ್ಲಿ ಹಗ್ಗ ತುಂಡಾಗಿ ವಿಘ್ನ ಎದುರಾಯಿತು. ನಂತರ ಹೊಸ ಹಗ್ಗ ಕಟ್ಟಿ ರಥ ಎಳೆದಾಗ ಕಟ್ಟಿದ್ದ ಹಗ್ಗ ಮತ್ತೆ 3-4 ಬಾರಿ ತುಂಡಾಗತೊಡಗಿತು. ಕೊನೆಗೂ ಎರಡೂವರೆ ಗಂಟೆ ಬಳಿಕ ಹಗ್ಗವನ್ನು ಭದ್ರವಾಗಿ ಕಟ್ಟಿ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ರಥ ನಿರ್ವಿಘ್ನವಾಗಿ ಸಾಗಿತು. ಈ ವೇಳೆ ಭಕ್ತ ಸಮೂಹ ಶ್ರೀಕಂಠೇಶ್ವರ ಮಹಾರಾಜ್ ಕೀ ಜೈ, ಉಘೇ ನಂಜುಂಡೇಶ್ವರ ಎಂದು ಹರ್ಷೋದ್ಘಾರ ಮೊಳಗಿಸಿದರು.

ಮೊದಲಿಗೆ ಗಣಪತಿ ರಥ ಸಾಗಿತು. ಅದರ ಬಳಿಕ ಗೌತಮ ರಥ, ಬಳಿಕ ಸುಬ್ರಹ್ಮಣ್ಯೇಶ್ವರ ಹಾಗೂ ಚಂಡಿಕೇಶ್ವರ ರಥಗಳು ಹಿಂಬಾಲಿಸಿದವು. ಕೊನೆಯಲ್ಲಿ ಪಾರ್ವತಿದೇವಿ ರಥ ರಥಬೀದಿಯಲ್ಲಿ ಸಾಗಿ ಸ್ವಸ್ಥಾನಕ್ಕೆ ಮರಳಿತು.
ಈ ಬಾರಿ ತುಂಬಾ ಕಾಡಿಸಿದ ಗೌತಮ ರಥ ಪೂರ್ವಾಭಿಮುಖವಾಗಿ ಸಾಗಿ ದೇವಾಲಯದ ಬಲಭಾಗದಲ್ಲಿ ಕೆಲ ಸಮಯ ಮತ್ತೆ ಕಾಡಿಸಿತು. ನಂತರ ರಾಘವೇಂದ್ರಸ್ವಾಮಿ ಮೂಲಮಠ, ರಾಕ್ಷಸ ಮಂಟಪ ವೃತ್ತದ ಮೂಲಕ ಪಾಠ ಶಾಲಾ ಬೀದಿ, ಶಿವರಾತ್ರಿರಾಜೇಂದ್ರ ವೃತ್ತದ ಮಾರ್ಗವಾಗಿ ಸ್ವಸ್ಥಾನಕ್ಕೆ ಮರಳಲು 2 ಗಂಟೆ 20 ನಿಮಿಷ ಕಾಲಾವಕಾಶ ಪಡೆಯಿತು. ಪಾರ್ವತಿ ದೇವಿ ರಥ ಒಂದು ತಾಸು ಸಮಯ ತೆಗೆದುಕೊಂಡಿತು.

ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ರಥೋತ್ಸವ ಕಣ್ತುಂಬಿಕೊಳ್ಳಲು ರಥಬೀದಿಯ ಇಕ್ಕೆಲಗಳು ಹಾಗೂ ಬಹುಮಹಡಿ ಕಟ್ಟಡಗಳ ಛಾವಣಿ ಏರಿ ಭಕ್ತರು ಕಾದು ನಿಂತಿದ್ದ ದೃಶ್ಯಗಳು ಕಂಡುಬಂತು.

ಮುನ್ನೆಚ್ಚರಿಕೆ ಕ್ರಮವಾಗಿ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದ ಏಳು ಗ್ರಾಮಗಳ 98 ಜನ ಹಾಗೂ ರಥ ನಿಯಂತ್ರಿಸುವ 14 ಜನ ನುರಿತ ರಕ್ಷಕರಿಗೆ ಮಾತ್ರ ರಥದ ಬಳಿಯಿರಲು ಅವಕಾಶ ಕಲ್ಪಿಸಲಾಗಿತ್ತು. ರಥದ ಹಿಂದೆ ಜೆಸಿಬಿ, ತುರ್ತುವಾಹನ, ಅಗ್ನಿಶಾಮಕ ವಾಹನ, ಒಂದು ಕ್ರೇನ್, ಹೈಡ್ರೋಲಿಕ್ ವೈರ್ ವಾಹನ ಹಿಂಬಾಲಿಸಿದವು. ರಥಗಳು ಸಾಗುವ ವೇಳೆ ದೇವಾಲಯದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ಧಾರ್ಮಿಕ ಕೈಂಕರ್ಯ: ರಥೋತ್ಸವಕ್ಕೂ ಮುನ್ನ ತಡರಾತ್ರಿ 2 ಗಂಟೆಯಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಸಾಂಗವಾಗಿ ನೆರವೇರಿತು. ಗಣಪತಿ ಮತ್ತು ನವಗ್ರಹ ಪೂಜೆ ನಂತರ ದೇವಾಲಯದ ಸುತ್ತಲೂ ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು.

ಶ್ರೀಕಂಠ ಮುಡಿಯನ್ನು ಧರಿಸಿದ ಶ್ರೀಗಳವರ ಉತ್ಸವಮೂರ್ತಿಯನ್ನು ಋತ್ವೀಕರ ತಂಡ ಪಲ್ಲಕ್ಕಿಯಲ್ಲಿ ಹೊತ್ತು ದೇವಾಲಯದ ಸುತ್ತಲೂ ಮೆರವಣಿಗೆ ಮಾಡಿ ಬರಮಾಡಿಕೊಂಡಿತು. ಗರ್ಭಗುಡಿಯಲ್ಲಿ ಮೊದಲ ಪೂಜೆ ನೆರವೇರಿಸಿದ ನಂತರ ದೇವಾಲಯದ ಪ್ರವೇಶ ದ್ವಾರದ ಬಲ ಭಾಗದಲ್ಲಿರುವ ಮಂಟಪದಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವಮೂರ್ತಿ ಕೂರಿಸಿ ಪೂಜೆ ನೆರವೇರಿಸಲಾಯಿತು. ತರುವಾಯ ರತ್ನಖಚಿತ ಶ್ರೀಕಂಠಮುಡಿಯನ್ನು ತೆರವುಗೊಳಿಸಿ ದೈನಂದಿನ ಉತ್ಸವದಲ್ಲಿ ಬಳಸಲಾಗುವ ಕಿರೀಟವನ್ನು ಧರಿಸಲಾಯಿತು. ಪಾರ್ವತಿದೇವಿ, ಗಣಪತಿ, ಚಂಡಿಕೇಶ್ವರ ಹಾಗೂ ಸುಬ್ರಹ್ಮಣ್ಯೇಶ್ವರ ಉತ್ಸವಮೂರ್ತಿಗಳಿಗೂ ಪೂಜೆ ಸಲ್ಲಿಸಲಾಯಿತು.

6:40 ರಿಂದ 7ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮಂಗಳವಾದ್ಯದೊಂದಿಗೆ ಉತ್ಸವಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ತಂದು ಪಂಚರಥಗಳಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವ ಬಳಿಕ ಹಂಸಾರೋಹಣ ಹಾಗೂ ನಟೇಶೋತ್ಸವ ಕೈಗೊಳ್ಳಲಾಯಿತು.

ಪ್ರಮೋದಾದೇವಿ ಒಡೆಯರ್ ಪೂಜೆ: ಯದುವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪಂಚ ಉತ್ಸವಮೂರ್ತಿಗಳ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಕಂಠೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ರಥದ ಬಳಿವರೆಗೆ ಬಿಟ್ಟು ಬಂದ ಪ್ರಮೋದಾದೇವಿ, ನಂತರ ದೇವಾಲಯದ ಮೊಗಸಾಲೆಯಲ್ಲಿ ಕುಳಿತು ರಥೋತ್ಸವ ಕಣ್ತುಂಬಿಕೊಂಡರು.

ಜಿಲ್ಲಾ ಎಸ್ಪಿ ಅಮಿತ್‌ಸಿಂಗ್ ಮಾರ್ಗದರ್ಶನದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 12 ವಾಚರ್ ಟವರ್ ಹಾಗೂ 65 ಕಡೆ ಸಿಸಿ ಕ್ಯಾಮರಾ ಮೂಲಕ ಚಿತ್ರೀಕರಿಸಲಾಯಿತು.

ಗೌತಮ ರಥ ಸಾಗಿದ ಸಮಯ
ಬೆ.9.20- ಆರಂಭ
ಬೆ.10.30- ರಾಘವೇಂದ್ರಸ್ವಾಮಿ ಮೂಲ ಮಠ
ಬೆ.10.50-ರಾಕ್ಷಸ ಮಂಟಪ
ಬೆ.11.05- ಶಿವರಾತ್ರಿರಾಜೇಂದ್ರ ವೃತ್ತ
ಬೆ.11.20- ಚಿನ್ನಿವಾರಕಟ್ಟೆ ಬೀದಿ

ಬೆ.11.40- ಸ್ವಸ್ಥಾನ:ಹಗ್ಗ ತುಂಡು, ಅಧ್ವಾನ; ಅಧಿಕಾರಿಗಳ ಬೇಜವಾಬ್ದಾರಿ
ಗೌತಮ ರಥಕ್ಕೆ ಕಳೆದ ವರ್ಷ ಬಳಸಿದ್ದ ಹಗ್ಗವನ್ನೇ ಈ ಬಾರಿಯೂ ಬಳಸಲು ಮುಂದಾದ ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ರಥೋತ್ಸವದ ಆರಂಭದಲ್ಲೇ ಅಧ್ವಾನ ಉಂಟಾಯಿತು.

ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಕಳೆದ ವರ್ಷ ಮಂಗಳೂರು ಮೂಲದಿಂದ ಎರಡು ಹಗ್ಗದ ಉಂಡೆಯನ್ನು ಖರೀದಿಸಲಾಗಿತ್ತು. ಒಂದು ಬಳಕೆ ಮಾಡಿ ಮತ್ತೊಂದನ್ನು ಇಡಲಾಗಿತ್ತು. ಅದನ್ನು ಈ ಬಾರಿ ಬಳಸಿದ್ದರೆ ಯಾವುದೇ ವಿಘ್ನವಿಲ್ಲದೇ ರಥೋತ್ಸವ ಮುಗಿಯುತ್ತಿತ್ತು. ಆದರೆ ಹಗ್ಗ ಉಳಿತಾಯ ಮಾಡುವ ಚೌಕಾಸಿಗೆ ಮುಂದಾಗಿ ಎಡವಟ್ಟಿಗೆ ಎಡೆಮಾಡಿಕೊಟ್ಟರು. ಸವೆದು ಹೋಗಿದ್ದ ಹಗ್ಗವನ್ನು ಆರಂಭದಲ್ಲಿ ಎಳೆಯುತ್ತಿದ್ದಂತೆ ತುಂಡಾಯಿತು. ಬಳಿಕ ಜನ ಸಾಗರದ ಮಧ್ಯೆ ಹಗ್ಗ ಕಟ್ಟುವ ಸಾಹಸದ ಕೆಲಸ ಮೂರ‌್ನಾಲ್ಕು ಬಾರಿ ವಿಫಲತೆಯ ನಡುವೆಯೇ ಕಡೆಗೂ ಗಟ್ಟಿಯಾಗಿ ಕಟ್ಟಿ ರಥ ಮುನ್ನಡೆಸಲಾಯಿತು. ಹೊಸ ಹಗ್ಗ ಎಳೆದು ತರುವ ಸಂದರ್ಭದಲ್ಲಿ ನಿಂತಿದ್ದ ಮಹಿಳೆಯರು, ಮಕ್ಕಳು ನೆಲಕ್ಕುರುಳಿ ಬಿದ್ದು ಗಾಯಗೊಂಡರು.

ಇಒ ಗಂಗಯ್ಯಗೆ ಗಾಯ: ಹಗ್ಗ ತುಂಡಾದ ಸಂದರ್ಭ ಸ್ಥಳದಲ್ಲಿದ್ದ ದೇವಾಲಯದ ಇಒ ಗಂಗಯ್ಯ ಅವರ ಮುಖಕ್ಕೆ ಹಗ್ಗ ರಭಸವಾಗಿ ವಾಪಸ್ ಬಡಿದಿದ್ದರಿಂದ ಗಾಯಗೊಂಡರು. ಕೂಡಲೇ ಅವರಿಗೆ ಆಂಬುಲೆನ್ಸ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಇದೇ ಜಾಗದಲ್ಲಿದ್ದ ಶಾಸಕ ಬಿ.ಹರ್ಷವರ್ಧನ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಅತೀವ ಆತ್ಮವಿಶ್ವಾಸ: ಪ್ರತಿ ವರ್ಷ ದೊಡ್ಡಜಾತ್ರಾ ಮಹೋತ್ಸವಕ್ಕೆ ರಥಬೀದಿಯದ್ದೆ ಚಿಂತೆಯಾಗಿತ್ತು. ಪ್ರತಿ ಬಾರಿಯೂ ಎಲ್ಲಾದರೂ ರಥ ಹೂತುಕೊಲ್ಳುತ್ತಿತ್ತು. ಕಳೆದ ವರ್ಷ 10 ಕೋಟಿ ರೂ. ವೆಚ್ಚದಲ್ಲಿ ರಥಬೀದಿಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಕಳೆದ ವರ್ಷ ಒಂದು ಗಂಟೆ ಅವಧಿಯಲ್ಲಿ ರಥ ಸಾಗಿ ಸ್ವಸ್ಥಾನಕ್ಕೆ ಮರಳಿತ್ತು. ಈ ಬಾರಿಯೂ ಹಾಗೇ ಆಗಲಿದೆ ಎಂಬ ಅಧಿಕಾರಿಗಳ ಅತೀವ ಆತ್ಮವಿಶ್ವಾಸ, ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದಾಗಿ ಈ ಬಾರಿ ಎರಡೂವರೆ ತಾಸು ವಿಳಂಬಕ್ಕೆ ಕಾರಣವಾಗಿದೆ.

ರಥೋತ್ಸವ ಮುನ್ನ ದಿನ ಸಂಚಾರಕ್ಕೆ ರಥಬೀದಿ ಹಾಗೂ ರಥಗಳ ತಯಾರಿ ಗುಣಮಟ್ಟ ಪರಿಶೀಲನೆ ನಡೆಸಿ ಲೋಕೋಪಯೋಗಿ ಇಲಾಖೆ ಎಇಇ ದೃಢೀಕರಣ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಬಳಿಕವಷ್ಟೆ ರಥೋತ್ಸವಕ್ಕೆ ಅನುಮತಿ ನೀಡಲಾಗುತ್ತದೆ. ಸವೆದು ಹೋಗಿದ್ದ ಹಗ್ಗ ಬಳಸಲು ಮುಂದಾಗಿದ್ದ ದೇವಾಲಯ ಆಡಳಿತ ಮಂಡಳಿ ವೈಫಲ್ಯವನ್ನು ಎತ್ತಿ ಹಿಡಿಯುವಲ್ಲಿ ಲೋಕೋಪಯೋಗಿ ಇಲಾಖೆಯೂ ಬೇಜವಾಬ್ದಾರಿ ತೋರಿರುವುದು ಸ್ಪಷ್ಟವಾಗಿದೆ.