ಧರ್ಮಸ್ಥಳ ನೀರಿನ ಅಭಾವಕ್ಕೆ 2 ಕಿಂಡಿ ಅಣೆಕಟ್ಟಿನ ಪರಿಹಾರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು/ಮಂಗಳೂರು

ಧರ್ಮಸ್ಥಳದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನೇತ್ರಾವತಿ ನದಿಗೆ ಎರಡು ಕಿಂಡಿ ಅಣೆಕಟ್ಟು ನಿರ್ಮಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು, ವಿಶೇಷವಾಗಿ ಧರ್ಮಸ್ಥಳ ಹಾಗೂ ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಭೆ ನಡೆಸಿ ಚರ್ಚಿಸಿದರು.

ಧರ್ಮಸ್ಥಳದಲ್ಲಿ ಈ ಬಾರಿ ನೇತ್ರಾವತಿ ನೀರು ಬತ್ತಿದ್ದರಿಂದ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಎರಡು ಕಿಂಡಿ ಅಣಿಕಟ್ಟು ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ 7ಕೋಟಿ ರೂ.ವೆಚ್ಚದಲ್ಲಿ ನೆರಿಯ ಹೊಳೆ ಹಾಗೂ ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಧರ್ಮಸ್ಥಳದ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸಿಎಂ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ ನೀರಿನ ಸಮಸ್ಯೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಎರಡು ಕಿಂಡಿ ಅಣೆಕಟ್ಟು ನಿರ್ಮಿಸಲು ಏಳು ಕೋಟಿ ರೂ. ಮೊತ್ತದ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದಾಗ ಪ್ರಸ್ತಾವನೆ ಅನುಮೋದಿಸಿ, ಕೂಡಲೇ ಕಿಂಡಿ ಅಣೆಕಟ್ಟು ನಿರ್ಮಿಸಲು ಕ್ರಮ ವಹಿಸಲು ಸಿಎಂ ಸೂಚಿಸಿದರು.

ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಮುಖ್ಯಮಂತ್ರಿಯವರ ಅಪರಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎ.ಬಿ. ಇಬ್ರಾಹಿಂ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಜಯರಾಮ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂಜುಂ ಪರ್ವೇಜ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಭೂಸ್ವಾಧೀನಕ್ಕೆ 130 ಕೋಟಿ ರೂ. ಬೇಡಿಕೆ:  ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡಿದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಮಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿದ್ದು, ತುಂಬೆ ಕಿಂಡಿ ಅಣೆಕಟ್ಟಿನಲ್ಲಿ 7 ಮೀ.ವರೆಗೆ ನೀರು ಸಂಗ್ರಹಿಸುವ ಅಗತ್ಯವಿದೆ. ಇದರಿಂದ ಹೆಚ್ಚುವರಿಯಾಗಿ 344 ಎಕರೆ ಭೂಮಿ ಜಲಾವೃತವಾಗಲಿದೆ. ಭೂ ಸ್ವಾಧೀನಕ್ಕೆ 130 ಕೋಟಿ ರೂ.ಅಗತ್ಯವಿದೆ ಎಂದರು. ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ತಿಳಿಸಿದರು. ಎಂಆರ್‌ಪಿಎಲ್ನಲ್ಲಿ ಸ್ಥಾಪಿಸಲಾಗುತ್ತಿರುವ ಉಪ್ಪುನೀರನ್ನು ಶುದ್ಧೀಕರಿಸುವ ಘಟಕದ ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಸೂಚಿಸಿದರು.

ಉಳ್ಳಾಲದಲ್ಲಿ ಕೊಡಗು ಮಾದರಿ ಪುನರ್ವಸತಿ:  ಉಳ್ಳಾಲ ಭಾಗದಲ್ಲಿ ಕಡಲ್ಕೊರೆತದಿಂದ ಬಾಧಿತರಾಗುವ 150 ಮನೆಗಳನ್ನು ಗುರುತಿಸಲಾಗಿದ್ದು, ಇವರಿಗೆ ಕೊಡಗು ಮಾದರಿಯಲ್ಲಿ ಪುನರ್ವಸತಿ ಕಲ್ಪಿಸಲು ಸಿಎಂ ತಿಳಿಸಿದರು.  ಉಳ್ಳಾಲದಲ್ಲಿ ಪ್ರತಿವರ್ಷ ಕಡಲ್ಕೊರೆತ ತಡೆಯಲು ಸಮುದ್ರ ತೀರದಲ್ಲಿ ಕಲ್ಲು ಹಾಕಲು ಕೋಟ್ಯಂತರ ರೂ.ವ್ಯಯಿಸಲಾಗುತ್ತಿದ್ದು, ಕಲ್ಲುಗಳು ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗುತ್ತವೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ಅಗತ್ಯವಿದೆ ಎಂದು ಸಚಿವ ಖಾದರ್ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಮಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತುರ್ತು ಕ್ರಮದ ಅವಶ್ಯಕತೆಯಿದೆ. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ಮಂಗಳೂರು ನಗರಕ್ಕೆ ಇನ್ನೂ 50-60 ಟ್ಯಾಂಕರ್‌ಗಳ ಅವಶ್ಯಕತೆಯಿದೆ. ಬಿಬಿಎಂಪಿ ಅಥವಾ ಬೇರೆ ಕಡೆಯಿಂದ ಟ್ಯಾಂಕರ್ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮಂಗಳೂರಲ್ಲಿರುವ 40 ಟ್ಯಾಂಕರ್ ನೀರು ಒದಗಿಸಲು ಸಾಕಾಗುತ್ತಿಲ್ಲ. ಖಾಸಗಿ ಟ್ಯಾಂಕರ್ ವಶಕ್ಕೆ ಪಡೆಯುವ ಬದಲು ಬೇರೆ ಕಡೆ ಇರುವ ಸರ್ಕಾರದ ಟ್ಯಾಂಕರ್ ಒದಗಿಸಲು ಕೇಳಿದ್ದೇವೆ.
-ಯು.ಟಿ.ಖಾದರ್, ನಗರಾಭಿವೃದ್ಧಿ ಇಲಾಖೆ ಸಚಿವ.

Leave a Reply

Your email address will not be published. Required fields are marked *