ನಾಲ್ಕನೇ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ

ಬೆಳ್ತಂಗಡಿ: ಫೆ.9ರಿಂದ 18ರವರೆಗೆ ಧರ್ಮಸ್ಥಳದಲ್ಲಿ ನಡೆಯುವ ನಾಲ್ಕನೇ ಮಹಾಮಸ್ತಕಾಭಿಷೇಕಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು 50 ಸಾವಿರದಿಂದ 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಈಗಾಗಲೇ ನೇತ್ರಾವತಿಯಿಂದ ಬಾಹುಬಲಿ ಬೆಟ್ಟ ಹಾಗೂ ನೇತ್ರಾವತಿ ಸುತ್ತ ರಸ್ತೆ ವಿಸ್ತರಣಾ ಕಾರ್ಯ ಭರದಿಂದ ಸಾಗುತ್ತಿದೆ.

ಮಹಾಮಸ್ತಕಾಭಿಷೇಕಕ್ಕೆ ಬರುವ ಭಕ್ತರಿಗೆ ತೊಂದರೆ ಆಗಬಾರದೆಂದು ಲೋಕೋಪಯೋಗಿ ಇಲಾಖೆ ಹಾಗೂ ಕಾಮಗಾರಿ ಗುತ್ತಿಗೆದಾರರು ರಸ್ತೆಯುದ್ದಕ್ಕೂ ಮರು ಡಾಂಬರು ಕಾಮಗಾರಿ ನಡೆಸುತ್ತಿದ್ದಾರೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಮಹಾಮಸ್ತಕಾಭಿಷೇಕದ ಪೂರ್ವಭಾವಿ ತಯಾರಿ ಕುರಿತು ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಧರ್ಮಸ್ಥಳದೊಂದಿಗೆ ನಿರಂತರ ಸಂಪರ್ಕ ಇರುವಂತೆ ಸೂಚನೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಿವಪ್ರಸಾದ್ ಅಜಿಲ ಅವರನ್ನು ಇಲಾಖೆಯ ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಅಟ್ಟಳಿಗೆ ನಿರ್ಮಾಣ: ಭಗವಾನ್ ಶ್ರೀ ಬಾಹುಬಲಿಯ ವಿಗ್ರಹದ ಹತ್ತಿರದಲ್ಲೇ ಬೃಹತ್ ಅಟ್ಟಳಿಗೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಾಣಿ ಸಮೀಪದ ಬುಡೋಳಿಯ ಮಹಾವೀರ ಪ್ರಸಾದ್ ಇಂಡಸ್ಟ್ರಿಯವರು ಅಟ್ಟಳಿಗೆ ನಿರ್ಮಾಣ ಕಾರ‌್ಯ ನಿರ್ವಹಿಸುತ್ತಿದ್ದಾರೆ. ಇದರ ಮಾಲೀಕ ಮಹಾಪದ್ಮಪ್ರಸಾದ್ ಹಾಗೂ ಮಹಾವೀರ ಸಹೋದರರ ನೇತೃತ್ವದಲ್ಲಿ 18 ಸಿಬ್ಬಂದಿ ನಿರ್ಮಾಣದ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಹೋದರರಿಗೆ ಇದು 3ನೇ ಮಹಾಮಸ್ತಕಾಭಿಷೇಕ ಅಟ್ಟಳಿಗೆ ನಿರ್ಮಾಣದ ಅನುಭವ. ವೇಣೂರು ಹಾಗೂ ಕಾರ್ಕಳದ ಹಿಂದಿನ ಮಹಾಮಸ್ತಕಾಭಿಷೇಕ ಅಟ್ಟಳಿಗೆಗಳನ್ನು ಇವರೇ ನಿರ್ಮಿಸಿದ್ದರು. ಅಟ್ಟಳಿಗೆ ನಿರ್ಮಾಣಕ್ಕೆ ಹೊಸ ಕಬ್ಬಿಣ ಖರೀದಿಸಿ, ಡಿ.1ರಿಂದಲೇ ಬುಡೋಳಿಯ ತಮ್ಮ ವರ್ಕ್‌ಶಾಪ್‌ನಲ್ಲಿ ಕೆಲಸ ಆರಂಭಿಸಿದ್ದರು. ಧರ್ಮಸ್ಥಳದಲ್ಲಿ ಜ.8ರಿಂದ ಅಟ್ಟಳಿಗೆ ಕಾಮಗಾರಿ ಆರಂಭಗೊಂಡಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ.

ಅಟ್ಟಳಿಗೆಗೆ 80 ಟನ್ ಕಬ್ಬಿಣ: ಮಸ್ತಕಾಭಿಷೇಕಕ್ಕಾಗಿ 62 ಅಡಿ ಎತ್ತರದ ಅಟ್ಟಳಿಗೆ ನಿರ್ಮಾಣಗೊಳ್ಳುತ್ತಿದ್ದು, ಕೊನೆಯ ಮೂರು ಅಂತಸ್ತುಗಳಲ್ಲಿ ಅಭಿಷೇಕಕ್ಕೆ ಅವಕಾಶವಿದೆ. ಎರಡು ಕಡೆಗಳಲ್ಲಿ ಪ್ರತ್ಯೇಕ ಮೆಟ್ಟಿಲುಗಳ ವ್ಯವಸ್ಥೆ ಇರುತ್ತದೆ. ಒಟ್ಟು ಕಾರ್ಯಕ್ಕೆ 80 ಟನ್ ಕಬ್ಬಿಣದ ಅವಶ್ಯವಿದೆ. ಜತೆಗೆ ಹಿಂಬದಿಯಲ್ಲಿ 2 ಲಿಫ್ಟ್‌ಗಳ ವ್ಯವಸ್ಥೆಯೂ ಬರಲಿದ್ದು, ಅದನ್ನು ಬೆಂಗಳೂರಿನ ತಂಡ ನಿರ್ವಹಿಸಲಿದೆ. ಪ್ರತಿ ಅಂತಸ್ತುಗಳಲ್ಲಿಯೂ 1500 ಚದರ ಅಡಿಗಳಷ್ಟು ಸ್ಥಳಾವಕಾಶವಿರುತ್ತದೆ. ಅಂತಸ್ತುಗಳಿಗೆ ಫ್ಲೈವುಡ್ ಶೀಟ್‌ಗಳ ಬಳಕೆಯಾಗಲಿದ್ದು, ಇದಕ್ಕಾಗಿ 5500 ಚ.ಅಡಿಯ ಫ್ಲೈವುಡ್‌ಗಳು ಬಳಕೆಯಾಗಲಿದೆ. ಎರಡು ಕ್ರೇನ್‌ಗಳು ಕೂಡ ಇಲ್ಲಿ ಕಾರ್ಯನಿರತವಾಗಿವೆ. ಈ ಎಲ್ಲ ನಿರ್ಮಾಣ ಕಾರ್ಯಗಳು ಮಂಗಳೂರಿನ ವಿಮಲ್ ಅನಿಲ್ ಸಂಸ್ಥೆ ಇಂಜಿನಿಯರ್‌ಗಳ ಪ್ಲಾನಿಂಗ್‌ನ ಆಧಾರದಲ್ಲಿ ನಡೆಯಲಿದೆ.

ಗ್ಯಾಲರಿ ನಿರ್ಮಾಣ: ಬಾಹುಬಲಿ ವಿಗ್ರಹದ ಅಭಿಷೇಕದ ವೀಕ್ಷಣೆಗಾಗಿ ಎದುರು ಭಾಗದ ಎರಡೂ ಕಡೆ ಒಟ್ಟು 20 ಅಡಿ ಎತ್ತರದಲ್ಲಿ ಎರಡು ಅಂತಸ್ತಿನ ಗ್ಯಾಲರಿ ನಿರ್ಮಾಣವಾಗಲಿದೆ. ಅದಕ್ಕೆ ಮೇಲ್ಛಾವಣಿ ವ್ಯವಸ್ಥೆ ಇರಲಿದ್ದು, ಕಬ್ಬಿಣ ಹಾಗೂ ಫ್ಲೈವುಡ್ ಮೂಲಕ ನಿರ್ಮಾಣಗೊಳ್ಳಲಿದೆ. ಎರಡು ಬದಿಯ ಗ್ಯಾಲರಿಗಳಲ್ಲಿ ಒಂದನ್ನು ಈ ಸಹೋದರರೇ ನಿರ್ವಹಿಸಿದರೆ, ಮತ್ತೊಂದನ್ನು ಮಂಗಳೂರಿನವರು ನಿರ್ಮಿಸಲಿದ್ದಾರೆ.

ಅಭಿಷೇಕ ವೀಕ್ಷಣೆಗೆ ಸುಗಮ ವ್ಯವಸ್ಥೆ: ಹಗಲು ಹೊತ್ತಿನಲ್ಲಿ ಅಭಿಷೇಕ ನಡೆಯಲಿರುವುದರಿಂದ ದೂರದಿಂದ ಬರುವ ಭಕ್ತರಿಗೆ ಅಭಿಷೇಕ ವೀಕ್ಷಿಸಲು ಪ್ರತ್ಯೇಕವಾಗಿ ಧರ್ಮದರ್ಶನ ಎಂಬ ಉಚಿತ ಸಾಲನ್ನು ವ್ಯವಸ್ಥೆಗೊಳಿಸಲಾಗಿದೆ. ಇದರಲ್ಲಿ ಜನ ನಿರಂತರ ಅಭಿಷೇಕ ವೀಕ್ಷಿಸಿ ಹೋಗಬೇಕಾಗುತ್ತದೆ. ಪ್ರವಚನ ಮಂಟಪ, ಬೆಟ್ಟದಲ್ಲಿ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಟಿ.ವಿ.ಪರದೆ ಅಳವಡಿಸುವ ಬಗ್ಗೆಯೂ ಸಮಿತಿ ಚಿಂತಿಸುತ್ತಿದೆ. ಎಲ್ಲರಿಗೂ ಮುಕ್ತ ಮತ್ತು ಸುಲಭವಾಗಿ ಅಭಿಷೇಕ ವೀಕ್ಷಣೆಗೆ ಅವಕಾಶ ನೀಡುವುದೇ ನಮ್ಮ ಉದ್ದೇಶ ಎಂದು ಡಾ. ಹೆಗ್ಗಡೆ ತಿಳಿಸಿದ್ದಾರೆ.

ಅತ್ಯಂತ ಅಪರೂಪ ಮತ್ತು ವಿಶೇಷವಾಗಿ ನಡೆಯುವ ನಾಲ್ಕನೇ ಮಹಾಮಸ್ತಕಾಬಿಷೇಕ ವೀಕ್ಷಿಸಲು ದೇಶ ವಿದೇಶಗಳಿಂದ ಅನೇಕ ಮಂದಿ ಕಾತುರರಾಗಿದ್ದಾರೆ. ಮಾಧ್ಯಮಗಳು ಅಭಿಷೇಕದ ವೈಶಿಷ್ಟೃವನ್ನು ಜನರಿಗೆ ತಿಳಿಸುವ ಕಾರ್ಯ ಮಾಡುತ್ತಿವೆ. ಜನರ ಕುತೂಹಲ, ಆಕಾಂಕ್ಷೆ ಈಡೇರಿಸುವ ಜವಾಬ್ದಾರಿ ನಮ್ಮದು. ಅದಕ್ಕೆ ತಕ್ಕಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
|ಡಾ.ಡಿ. ವೀರೇಂದ್ರ ಹೆಗ್ಗಡೆ, ಪ್ರತಿಷ್ಠಾಪಕರು

ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಿ.ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಕಾಮಗಾರಿ ನಿರ್ವಹಿಸುತ್ತಿದ್ದೇವೆ. ಇದು ನಮಗೆ ಮೂರನೇ ಅನುಭವ. ದೇವರ ದಯೆಯಿಂದ ಕಾರ್ಯ ಅಚ್ಚುಕಟ್ಟಾಗಿ ಸಾಗಿದೆ. ಸಿಬ್ಬಂದಿಯೂ ಸಹಕಾರ ನೀಡುತ್ತಿದ್ದಾರೆ.
|ಮಹಾಪದ್ಮಪ್ರಸಾದ್-ಮಹಾವೀರ ಸಹೋದರರು, ಮಾಣಿ