ಭತ್ತ ಬೆಳೆದವರಿಗೆ ಕತ್ತಲೆಭಾಗ್ಯ

ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಜನರ ಹೊಟ್ಟೆ ತುಂಬಿಸುತ್ತಿರುವ ‘ಅನ್ನಭಾಗ್ಯ’ ಅನ್ನ ಬೆಳೆದ ರೈತರ ಹೊಟ್ಟೆಯ ಮೇಲೇ ತಣ್ಣೀರ ಬಟ್ಟೆ ಹಾಕಿದೆ! ಅಚ್ಚರಿ ಆದರೂ ಇದು ಸತ್ಯ. ಅನ್ನಭಾಗ್ಯ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಂದಾಗಿ ಭತ್ತದ ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಅನ್ನಭಾಗ್ಯ ಯೋಜನೆಯಡಿ ಖರ್ಚಾಗದೆ ಅಥವಾ ಅಕ್ರಮವಾಗಿ ಉಳಿಯುವ ಅಕ್ಕಿ ಪಾಲಿಶ್ ರೂಪ ಪಡೆದು ದುಬಾರಿ ಬೆಲೆಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಪರಿಣಾಮ ಭತ್ತದ ಬೆಲೆ ಕುಸಿತ ಕಾಣುತ್ತಿರುವುದು ರೈತರನ್ನು ಕಂಗಾಲಾಗಿಸಿದೆ.

ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯ ಜತೆಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯನ್ನೂ ಹೆಚ್ಚಿನ ಬೆಲೆ ಕೊಟ್ಟು ಖರೀದಿಸಲಾಗುತ್ತಿದೆ. ಇದರಿಂದಾಗಿ ಭತ್ತಕ್ಕೆ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ಯೋಜನೆಗೆ ರಾಜ್ಯದ ಭತ್ತವನ್ನೇ ಖರೀದಿಸಿ ಅದರ ಮೂಲಕ ಯೋಜನೆಗೆ ಅಕ್ಕಿಯನ್ನು ಪಡೆಯಬೇಕೆಂಬುದು ಅನ್ನದಾತರ ಬೇಡಿಕೆಯಾಗಿದೆ.

ಕೇಳುವವರೇ ಇಲ್ಲ: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ 200 ರೂ. ಪ್ರೋತ್ಸಾಹಧನ ಘೋಷಿಸಿದೆ. ಅದೂ ಸೇರಿದರೆ ಕನಿಷ್ಠ ಬೆಂಬಲ ಬೆಲೆ 1550-1590 ರೂ.ಗಳಾಗಬೇಕಾಗಿತ್ತು. ಕಳೆದ ವರ್ಷ ಪ್ರತಿ ಕ್ವಿಂಟಾಲ್​ಗೆ 2000 ರೂ.ಗಳಿಗೂ ಹೆಚ್ಚಿತ್ತು. ಆದರೆ ಈ ವರ್ಷ 1000 ದಿಂದ 1300 ರೂ.ಗಳಿಗೆ ಇಳಿದಿದೆ.

ಭತ್ತಕ್ಕೆ ಈಗ ಸಿಗುತ್ತಿರುವ ಬೆಂಬಲ ಬೆಲೆ ಉತ್ಪಾದನಾ ವೆಚ್ಚಕ್ಕೆ ಪರಿಗಣಿಸಿದರೆ ತುಂಬಾ ಕಡಿಮೆ ಇದೆ. ಇನ್ನಾದರೂ ಸರ್ಕಾರ ವೈಜ್ಞಾನಿಕವಾದ ಬೆಂಬಲ ಬೆಲೆ ನಿಗದಿ ಮಾಡಬೇಕು. ಆಗಷ್ಟೇ ರೈತರಿಗೆ ಅನುಕೂಲವಾಗುತ್ತದೆ.

| ಜಿ. ನಾಗರಾಜ್ ರೈತ ಹೋರಾಟಗಾರ, ಗಂಗಾವತಿ

ಭತ್ತದ ಉತ್ಪಾದನೆ ಎಷ್ಟು?

ರಾಜ್ಯದಲ್ಲಿ ಸುಮಾರು 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಪ್ರತಿ ವರ್ಷ 50 ಲಕ್ಷ ಟನ್​ಗೂ ಹೆಚ್ಚಿನ ಉತ್ಪಾದನೆಯಾಗುತ್ತದೆ. ಗಂಗಾವತಿ ಭಾಗದಲ್ಲಿ ಮಾತ್ರ ಸೋನಾಮಸೂರಿ ಭತ್ತ ಬೆಳೆಯಲಾಗುತ್ತದೆ. ಮಂಡ್ಯ, ಶಿವಮೊಗ್ಗ ಮೊದಲಾದ ಕಡೆ ಸ್ವಲ್ಪ ದಪ್ಪ ಇರುವ ವಿವಿಧ ತಳಿಯ ಭತ್ತ ಬೆಳೆಯಲಾಗುತ್ತದೆ. ಮಳೆಯ ಕೊರತೆಯಿಂದಾಗಿ ಈ ವರ್ಷ 40 ಲಕ್ಷ ಟನ್ ಸಹ ಉತ್ಪಾದನೆಯಾಗಿಲ್ಲ.

ಅನ್ನಭಾಗ್ಯ ಯೋಜನೆಯಲ್ಲಿ ಖರೀದಿಸಿದ ಅಕ್ಕಿಯನ್ನು ಪಾಲಿಶ್ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಅದಕ್ಕೆ ತಡೆ ಹಾಕಿ ರೈತರಿಂದಲೇ ಭತ್ತ ಖರೀದಿಸಿ ಅನ್ನಭಾಗ್ಯ ಯೋಜನೆಯಲ್ಲಿ ವಿತರಣೆ ಮಾಡಲಿ. ಅದರಿಂದ ರೈತರಿಗೆ ಅನುಕೂಲವಾಗುತ್ತದೆ.

| ಪ್ರೊ. ಸಿ. ನರಸಿಂಹಪ್ಪ ಕೃಷಿ ತಜ್ಞರು

ಅಕ್ಕಿಯ ಲೆಕ್ಕ

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ಪ್ರತಿ ತಿಂಗಳು 2 ಲಕ್ಷ ಟನ್ ಅಕ್ಕಿಯನ್ನು ಖರೀದಿಸುತ್ತದೆ. ಇದರಲ್ಲಿ ಶೇ. 70 ಅಕ್ಕಿಯನ್ನು ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿ ಒದಗಿಸುತ್ತದೆ. ಅದರ ದರ ಪ್ರತಿ ಕೆಜಿಗೆ 3 ರೂ. ಇದೆ. ರಾಜ್ಯದಲ್ಲಿ ಪಡಿತರ ಕಾರ್ಡ್​ಗಳ ಸಂಖ್ಯೆ 1.08 ಕೋಟಿ ಇರುವ ಕಾರಣ ಉಳಿದ ಶೇ. 30 ಅಕ್ಕಿಯನ್ನು ಪ್ರತಿ ಕೆಜಿಗೆ 28 ರಿಂದ 29 ರೂ. ಕೊಟ್ಟು ಖರೀದಿ ಮಾಡಲಾಗುತ್ತದೆ. ಅನೇಕ ಪಡಿತರ ಕಾರ್ಡ್​ದಾರರು ಅಕ್ಕಿ ಕೊಳ್ಳುವುದಿಲ್ಲ. ಇದರಿಂದಾಗಿ ಪ್ರತಿ ತಿಂಗಳು 3 ರಿಂದ 4 ಸಾವಿರ ಟನ್ ಉಳಿತಾಯವಾಗಿ ಮುಕ್ತ ಮಾರುಕಟ್ಟೆಗೆ ಹೋಗಿ ಪಾಲಿಶ್ ಆಗುತ್ತದೆ. ಅದನ್ನು ಇತ್ತೀಚೆಗೆ ಆಹಾರ ಇಲಾಖೆಯ ಅಧಿಕಾರಿಗಳೇ ಪತ್ತೆ ಹಚ್ಚಿದ್ದರು. 25 ಸಾವಿರ ಟನ್​ಗೂ ಹೆಚ್ಚಿನ ಆಹಾರ ಪದಾರ್ಥ ಗೋದಾಮುಗಳಲ್ಲಿಯೇ ಕೊಳೆಯುತ್ತಿತ್ತು.

ಆಂಧ್ರದವರೇ ಬರಬೇಕು

ರಾಜ್ಯದಲ್ಲಿ ಖರೀದಿ ಕೇಂದ್ರಗಳನ್ನು ತೆರೆದರೂ ಉತ್ತಮ ಬೆಲೆ ಇಲ್ಲದ ಕಾರಣ, ರೈತರು ಅಲ್ಲಿಗೆ ತೆರಳಲು ಬಯಸುವುದಿಲ್ಲ. ಹೀಗಾಗಿ ಆಂಧ್ರಪ್ರದೇಶದ ವ್ಯಾಪಾರಿಗಳು ಬಂದು ಖರೀದಿಸುವ ಸ್ಥಿತಿ ಇದೆ. ಅವರು ಸ್ವಲ್ಪ ಹೆಚ್ಚಿನ ಬೆಲೆಗೆ ಖರೀದಿಸಿದರಷ್ಟೇ ರೈತರ ಉತ್ಪನ್ನಕ್ಕೆ ಬೆಲೆ ಸಿಗುತ್ತದೆ. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಅನ್ನಭಾಗ್ಯಕ್ಕೆ 4500 ಕೋಟಿ ರೂ. ವೆಚ್ಚ ಮಾಡುತ್ತದೆ. ಹೆಚ್ಚುವರಿಯಾಗಿ 29 ರೂ. ನೀಡಿ ಅಕ್ಕಿ ಖರೀದಿಸುತ್ತಿದ್ದು, ಇದನ್ನು ರಾಜ್ಯದ ಭತ್ತದ ಬೆಳೆಗಾರರಿಗೆ ನೆರವಾಗಲು ಬಳಸ ಬಹುದಾಗಿದೆ ಎಂಬ ಅಭಿಪ್ರಾಯ ಇದೆ.