ಪಚ್ಚನಾಡಿಯಲ್ಲಿ ದಟ್ಟ ಹೊಗೆ

ಮಂಗಳೂರು: ನಗರದ ಹೊರವಲಯದ ಪಚ್ಚನಾಡಿ ತ್ಯಾಜ್ಯ ಸಂಗ್ರಹಣಾ ವಿಲೇವಾರಿ ಘಟಕದಲ್ಲಿ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದೆ. ಪರಿಣಾಮ ಸ್ಥಳೀಯರಿಗೆ ಉಸಿರುಗಟ್ಟುವ ಪರಿಸ್ಥಿತಿ ಇದ್ದು, ಹಲವು ಮಂದಿ ಸಂಬಂಧಿಕರ ಮನೆಗೆ ತೆರಳಿದ್ದಾರೆ.

ತ್ಯಾಜ್ಯ ಸಂಗ್ರಹಣಾ ಘಟಕದ ಸುತ್ತಮುತ್ತಲಿನ ಮಂಗಳನಗರ, ಸಂತೋಷ್‌ನಗರ, ಮಂದಾರ, ಕಂಜಿರಡಿ, ಪಚ್ಚನಾಡಿ ಗುಂಡಿ ಪರಿಸರದ ಸುಮಾರು 700ಕ್ಕೂ ಅಧಿಕ ಮನೆಗಳ 2500ಕ್ಕೂ ಅಧಿಕ ಜನ ಪ್ರತಿನಿತ್ಯ ಯಾತನೆಯ ಬದುಕು ನಡೆಸುವಂತಾಗಿದೆ. ಫ್ಯಾನ್ ಹಾಕಿದಾಗ ಮನೆಯೊಳಗೆ ಹೊಗೆ ತುಂಬಿಕೊಳ್ಳುತ್ತಿದೆ.
ವೃದ್ಧರು, ಗರ್ಭಿಣಿಯರು, ಎಳೆಯ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಈ ಭಾಗದ ಜನರದು ಯಾತನೆಯ ಬದುಕು. ಈ ವರ್ಷ ಜನವರಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಶಮನಗೊಂಡಿಲ್ಲ. ಆಗಾಗ ಭಾರಿ ಪ್ರಮಾಣದಲ್ಲಿ ಹೊತ್ತಿ ಉರಿಯುತ್ತದೆ. ಮಣ್ಣು ಹಾಕಿ ಬೆಂಕಿ ಶಮನ ಮಾಡುವ ಪ್ರಕ್ರಿಯೆ ಮುಂದುವರಿದಿದೆ.

ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡರೆ ಅದರ ಶಮನಕ್ಕೆ ಅಗ್ನಿಶಾಮಕದಳ ವಾಹನಗಳು ಬಂದರೂ, ಅಲ್ಲಿಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಬೆಂಕಿ ಶಮನ ಮಾಡಲು ಅಸಾಧ್ಯ. ಸೋಮವಾರದಿಂದ ಸ್ಥಳದಲ್ಲಿ ಅಗ್ನಿಶಾಮಕ ವಾಹನಗಳು ನಿಂತಿವೆ. ಆದರೆ ಅದರಿಂದ ಬೆಂಕಿ ಶಮನ ಸಾಧ್ಯವಾಗುತ್ತಿಲ್ಲ. ನೀರು ಹಾಕಿದಾಗ ಇನ್ನಷ್ಟು ಹೊಗೆ ಕಾಣಿಸಿಕೊಳ್ಳುತ್ತವೆ.

ಸೋಮವಾರ ಬೆಳಗ್ಗೆಯಿಂದ ಪಚ್ಚನಾಡಿ, ವಾಮಂಜೂರು ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದಷ್ಟು ಪ್ರಮಾಣದಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ವಾಮಂಜೂರು ಪೇಟೆ ತನಕ ಹೊಗೆ ವ್ಯಾಪಿಸಿತ್ತು. ವಾಸನೆಯಿಂದ ಕೂಡಿದ ಹೊಗೆಯಿಂದ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ರವೀಂದ್ರ ಭಟ್ ತಿಳಿಸಿದ್ದಾರೆ.

ಬೆಂಕಿ ಆಕಸ್ಮಿಕವಲ್ಲ: ಪಚ್ಚನಾಡಿ ತ್ಯಾಜ್ಯ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲುತ್ತಿಲ್ಲ. ದುಷ್ಕರ್ಮಿಗಳು ಉದ್ದೇಶಪೂರ್ವಕ ಬೆಂಕಿ ಹಚ್ಚುತ್ತಿದ್ದಾರೆ. ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರಿದಾಗ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಬೆಂಕಿಯಿಂದ ತ್ಯಾಜ್ಯ ಕರಗಿ ಹೋದರೆ ಪಾಲಿಕೆಗೆ ಒಳಿತಾಗುತ್ತದೆ. ಬೆಂಕಿ ಕೊಡುವುದರಲ್ಲಿ ಪಾಲಿಕೆ ಅಧಿಕಾರಿಗಳ ಕೈವಾಡವಿದೆ ಎಂದು ರವೀಂದ್ರ ಭಟ್ ಆರೋಪಿಸಿದ್ದಾರೆ.

ಬಾವಿಯಲ್ಲೂ ಕಪ್ಪು ನೀರು: ಡಂಪಿಂಗ್ ಯಾರ್ಡ್‌ನಿಂದ ತಗ್ಗು ಪ್ರದೇಶದಲ್ಲಿ ಮಂದಾರ, ಕಂಜಿರಡಿಯಲ್ಲಿ ಅಡಕೆ, ತೆಂಗು ಕೃಷಿ ಇದೆ. ಡಂಪಿಂಗ್ ಯಾರ್ಡ್‌ನಿಂದ ಗಬ್ಬು ವಾಸನೆಯಿಂದ ಕೂಡಿದ ಕಪ್ಪು ನೀರು ಹರಿದು ಬರುತ್ತಿದೆ. ಇಲ್ಲಿನ ಬಾವಿಗಳಲ್ಲೂ ಕಪ್ಪು ನೀರು ತುಂಬಿಕೊಂಡಿದೆ. ಆದ್ದರಿಂದ ಇಲ್ಲಿನ ನೀರು ಕುಡಿಯಲೂ ಅಯೋಗ್ಯವಾಗಿದೆ. ಕುದಿಸದೆ ನೇರವಾಗಿ ಕುಡಿಯಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.

ಶಾಸಕ ಡಾ.ವೈ.ಭರತ್ ಶೆಟ್ಟಿ ಭೇಟಿ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ.ವೈ.ಭರತ್ ಶೆಟ್ಟಿ ಮಂಗಳವಾರ ಪಚ್ಚನಾಡಿ, ಮಂಗಳನಗರ ಮೊದಲಾದ ಕಡೆ ಭೇಟಿ ನೀಡಿ ಪಚ್ಚನಾಡಿ ತ್ಯಾಜ್ಯ ಸಂಗ್ರಹಣಾ ಘಟಕದಿಂದ ಆಗಿರುವ ಸಮಸ್ಯೆ ಆಲಿಸಿದರು. ತ್ಯಾಜ್ಯ ಸಂಗ್ರಹಣಾ ಘಟಕದ ಒಳಗಡೆ ದುಷ್ಕರ್ಮಿಗಳು ಬಂದು ಬೆಂಕಿ ಹಚ್ಚುವುದನ್ನು ತಪ್ಪಿಸಬೇಕು. ಅದಕ್ಕಾಗಿ ಸಿಸಿ ಕ್ಯಾಮರಾ ಅಳವಡಿಸುವುದು, ಹೈಮಾಸ್ಟ್ ದೀಪ ಅಳವಡಿಸುವುದು, ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿ ನಿಗಾ ಇಡುವಂತೆ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಮನಪಾ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಪರಿಸರ ಅಭಿಯಂತರ ಮಧು ಮನೋಹರ್ ಮೊದಲಾದವರು ಉಪಸ್ಥಿತರಿದ್ದರು.

ಪಚ್ಚನಾಡಿ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಬೆಂಕಿ ಉರಿಯುತ್ತಿದ್ದು, ದಟ್ಟ ಹೊಗೆ ಕಾಣಿಸಿಕೊಂಡಿದೆ. ಅಗ್ನಿಶಾಮಕದಳ ಸಿಬ್ಬಂದಿ ನೀರು ಹಾಕಿ ಬೆಂಕಿ ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ. ನೀರಿನ ಕೊರತೆಯಿಂದ ಮಣ್ಣು ತಂದು ಹಾಕಿ ಬೆಂಕಿ ಶಮನ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.
|ಮಧು ಮನೋಹರ್ ಪರಿಸರ ಅಭಿಯಂತ ಮನಪಾ

ಪಚ್ಚನಾಡಿ ತ್ಯಾಜ್ಯ ಸಂಗ್ರಹಣಾ ಘಟಕ ಒಳಗಡೆ ಗುಜರಿ ಹೆಕ್ಕಲು ಹೊರಗಿನವರು ಬರುತ್ತಾರೆ. ಅವರು ತ್ಯಾಜ್ಯ ರಾಶಿಗೆ ಬೆಂಕಿ ಕೊಡುತ್ತಿದ್ದಾರೆ. ಭದ್ರತಾ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಸಿಸಿ ಕ್ಯಾಮರಾ ಅಳವಡಿಸುವ ಅಗತ್ಯವಿದೆ. ಹೊರಗಿನ ವಾಹನಗಳು ಬಂದು ಮಾಂಸ ತ್ಯಾಜ್ಯ ಎಸೆದು ಹೋಗುವುದನ್ನು ಪತ್ತೆ ಮಾಡಲು ಸಾಧ್ಯವಾಗಬಹುದು.
| ಅಜಯ್ ಸ್ಥಳೀಯ ನಿವಾಸಿ