ಬೆಂಗಳೂರು: ಈ ಹಿಂದೆ “ಕೋಮ’ ಎಂಬ ಚಿತ್ರ ನಿರ್ದೇಶಿಸಿದ್ದ ರವಿ ಕಿರಣ್ ಮತ್ತು ಚೇತನ್ ಆ್ಯಕ್ಷನ್&ಕಟ್ ಹೇಳಿರುವ ಡಾರ್ಕ್ ನೆಟ್ ಕಥಾಹಂದರದ ಸಿನಿಮಾ “ಕಪಟಿ’. ಸುಕೃತಾ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇತ್ತೀಚೆಗಷ್ಟೆ ನಟ ಡಾರ್ಲಿಂಗ್ ಕೃಷ್ಣ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.
ನಿರ್ದೇಶಕ ದಯಾಳ್ ಪದ್ಮನಾಭನ್ “ಕಪಟಿ’ಯನ್ನು ನಿರ್ಮಿಸುತ್ತಿದ್ದು, “ನಾನು 10 ಕನ್ನಡ, ಎರಡು ತಮಿಳು ಚಿತ್ರಗಳು ಸೇರಿ 12 ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಅದರಲ್ಲಿ 11 ಚಿತ್ರಗಳನ್ನು ನಾನೇ ನಿರ್ದೇಶಿಸಿದ್ದೇನೆ. ಆದರೆ ರವಿಕಿರಣ್ ಮತ್ತು ಚೇತನ್ ಹೇಳಿದ ಕಥೆ ಇಷ್ಟವಾಗಿ ಈ ಚಿತ್ರವನ್ನು ನಿರ್ಮಿಸಿದ್ದೇನೆ. “ಗುಳ್ಟೂ’ ಚಿತ್ರದ ನಂತರ ಕನ್ನಡದಲ್ಲಿ ಮೂಡಿಬಂದಿರುವ ಡಾರ್ಕ್ ನೆಟ್ ಜಾನರ್ ಚಿತ್ರವಿದು’ ಎಂದು ಮಾಹಿತಿ ನೀಡಿದರು.
“ಕಪಟಿ’ ಇದೇ ತಿಂಗಳ 23ರಂದು ರಿಲೀಸ್ ಆಗಲಿದ್ದು, ನಾಯಕಿ ಸುಕೃತಾ ವಾಗ್ಲೆ, “ನಾನು ಚಿತ್ರರಂಗ ಬಿಟ್ಟು ಉಡುಪಿಯಲ್ಲಿ ನೆಲೆಸಿದ್ದೆ. ನಿರ್ದೇಶಕರು ಹೇಳಿದ ಈ ಕಥೆ ಇಷ್ಟವಾದ ಕಾರಣ ಬಹುದಿನಗಳ ಬಳಿಕ ಮತ್ತೆ ನಟಿಸಿದ್ದೇನೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಹೇಳಿಕೊಂಡರು.