ಆರೋಗ್ಯಕ್ಕೆ ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್​ಗಳು ಪೋಷಕಾಂಶಗಳಿಂದ ಭರಿತವಾಗಿದ್ದು, ದೇಹದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುವಂತಹ ಆಹಾರಪದಾರ್ಥಗಳಾಗಿವೆ. ಬಾಲ್ಯದಿಂದಲೂ ಚಾಕಲೇಟ್ ತಿನ್ನಬಾರದು, ಹಲ್ಲು ಹಾಳಾಗುತ್ತದೆಂದು ಕೇಳುತ್ತ, ಹೇಳುತ್ತ ಬಂದ ನಮಗೆ ಚಾಕಲೇಟ್​ನ ಸಿಹಿ ನಾಲಗೆಗೆ ಮಾತ್ರವಲ್ಲ; ಆರೋಗ್ಯಕ್ಕೆ ಎಂದು ಗೊತ್ತಾಗಲು ಅನೇಕ ಸಂಶೋಧನಾಪೂರ್ವಕ ಸಾಕ್ಷಿಗಳು ಒದಗಿಬರಬೇಕಾದವು. ಆದ್ದರಿಂದ ಇಲ್ಲಿಯ ತನಕ ಡಾರ್ಕ್ ಚಾಕಲೇಟ್​ಗಳಿಗೆ ಇಲ್ಲದ ಖ್ಯಾತಿ ಈಗ ಸಿಗಲು ಸಾಧ್ಯವಾಗುತ್ತಿದೆ.

ಅನೇಕ ಬಗೆಯ ಚಾಕಲೇಟ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಬೇರೆ ರೀತಿಯ ಚಾಕಲೇಟ್​ಗಳು ದೇಹದ ಮೇಲೆ ದುಷ್ಪರಿಣಾಮವನ್ನು ಒಡ್ಡುತ್ತವೆಯಾದರೂ ಡಾರ್ಕ್ ಚಾಕಲೇಟ್ ಅದರಿಂದ ಹೊರತಾದದ್ದು. ಈ ಅಂಕಣದಲ್ಲಿ ನಾವು ತಿಳಿದುಕೊಳ್ಳುತ್ತಿರುವ ವಿಷಯವು ಡಾರ್ಕ್ ಚಾಕಲೇಟ್​ಗಳಿಗೆ ಮಾತ್ರ ಮೀಸಲಾಗಿರುತ್ತದೆ.

ಕೋಕೊವಾ ಮರಗಳ ಬೀಜಗಳಿಂದ ಡಾರ್ಕ್ ಚಾಕಲೇಟ್ ತಯಾರಿಸಲಾಗುತ್ತದೆ. ಇದು ಇಡೀ ಭೂಮಂಡಲದಲ್ಲಿನ ಉತ್ತಮ ಆಂಟಿ ಆಕ್ಸಿಡೆಂಟ್​ಗಳ ಆಗರ. ಸಕ್ಕರೆರಹಿತವಾದಂತಹ ಡಾರ್ಕ್ ಚಾಕಲೇಟ್​ಗಳು ಆರೋಗ್ಯವೃದ್ಧಿಗೆ ಕಾರಣವಾಗಬಲ್ಲದು ಮತ್ತು ಹೃದಯಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಬಲ್ಲದು ಎಂಬುದು ಅಧ್ಯಯನಗಳಿಂದ ಸಾಬೀತಾಗಿ ವರದಿಯಾಗಿದೆ.

ನೀರಿನಲ್ಲಿ ಕರಗುವ ನಾರಿನಂಶ, ಜೊತೆಯಲ್ಲಿ ಖನಿಜ ಪದಾರ್ಥಗಳಿಂದ ತುಂಬಿದೆ. 100 ಗ್ರಾಂ ಡಾರ್ಕ್ ಚಾಕಲೇಟ್​ನಲ್ಲಿ 11 ಗ್ರಾಂ ನಾರಿನಂಶವಿದೆ. ದೇಹದ 67 ಪ್ರತಿಶತ ಕಬ್ಬಿಣ, 58 ಪ್ರತಿಶತ ಮೆಗ್ನೇಷಿಯಂ, 89 ಪ್ರತಿಶತ ತಾಮ್ರ, 98 ಪ್ರತಿಶತ ಮ್ಯಾಂಗನೀಸ್ ಬೇಡಿಕೆಯನ್ನು ಇದು ಪೂರೈಸುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ, ಪಾಸ್ಪರಸ್, ಝಿಂಕ್, ಸೆಲೆನಿಯಂ ಹೊಂದಿದೆ. ಮುಂದಿನ ಅಂಕಣದಲ್ಲಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

One Reply to “ಆರೋಗ್ಯಕ್ಕೆ ಡಾರ್ಕ್ ಚಾಕಲೇಟ್”

  1. ಡಾರ್ಕ್ ಚಾಕಲೇಟ್ ಅಂದ್ರೆ ಯಾವುವು? ದಯವಿಟ್ಟು ತಿಳಿಸಿ

Comments are closed.