More

    ವಯಸ್ಸು ಮತ್ತು ಆಯಸ್ಸು

    ಯಸ್ಸಿನ ಬಗ್ಗೆ ಇರುವ ಸುಭಾಷಿತವೊಂದು ಬಲು ಮಾರ್ವಿುಕವಾಗಿದೆ. ನೃಣರ ಆಯುಷ್ಯ ಶತವರ್ಷಕ್ಕೆ ಪರಿಮಿತವಾಗಿದೆ. ಅದರಲ್ಲಿಯೂ ಅರ್ಧಭಾಗ ರಾತ್ರಿಯಾಗಿ ಕಳೆದುಹೋಗುತ್ತದೆ. ಉಳಿದ ಐವತ್ತು ವರ್ಷದಲ್ಲಿ ಇಪ್ಪತೆôದು ವರ್ಷಗಳು ಬಾಲತ್ವ ಹಾಗೂ ವೃದ್ಧತ್ವದಲ್ಲಿ ಕರಗಿಹೋಗುತ್ತದೆ. ಉಳಿದಿರುವುದು ಕೇವಲ ಇಪ್ಪತೆôದೇ ವರ್ಷಗಳು. ಆ ಸಮಯದಲ್ಲಿ ವ್ಯಾಧಿಗಳು, ಬೇರ್ಪಡುವಿಕೆಯ ಬಾಧೆ, ದುಃಖಮಯ ವಿಚಾರಗಳು, ಅನ್ಯರ ಸೇವಾದಿ ಕಾರ್ಯಗಳಲ್ಲೇ ಹೋಗಿಬಿಡುತ್ತದೆ. ನೀರಿನ ಅಲೆಗಳಲ್ಲಿ ಹುಟ್ಟಿಕೊಂಡು ಕ್ಷಣಕಾಲದಲ್ಲಿ ಮತ್ತದೇ ನೀರಿನಲ್ಲಿ ಲೀನವಾಗುವ ಗುಳ್ಳೆಯಂತಿರುವ ಅಲ್ಪಕಾಲದ ಬದುಕಿನಲ್ಲಿ ಸುಖವೆಂಬುದು ಮನುಷ್ಯರಿಗೆ ಎಲ್ಲಿದೆ ಎಂದು ಪ್ರಶ್ನಿಸುವ ಸುಭಾಷಿತವು ಮಾನವನಿಗೆ ಆಯಸ್ಸಿನ ಅಲ್ಪತೆಯನ್ನು ಎಚ್ಚರಿಕೆಯ ಮೂಲಕ ತಿಳಿಹೇಳುತ್ತದೆ. ನೂರು ವಸಂತಗಳನ್ನು ಕಂಡವರ ಕಥೆಯೇ ಹೀಗೆಂದ ಮೇಲೆ ಪ್ರಾಯ ಎಪ್ಪತ್ತರ ಸುಮಾರಿಗೇ ಬದುಕು ಮುಗಿಸುವ ಇಂದಿನ ಜನಾಂಗದ ಪಾಡೇನು ಎಂಬುದು ಚಿಂತಿಸಬೇಕಾದ ವಿಷಯ.

    ವಯಸ್ಸು ಮತ್ತು ಆಯಸ್ಸುನಲವತ್ತು ವರ್ಷ ತುಂಬಿದೊಡನೆ ದೇಹವನ್ನು ಪೂರ್ತಿಯಾಗಿ ಪರೀಕ್ಷಿಸಿಕೊಳ್ಳಬೇಕು ಎಂಬ ಮಾತು ಇಂದು ಸರ್ವತ್ರ ಪ್ರಚಲಿತದಲ್ಲಿದೆ. ವರ್ಷ ನಲವತ್ತು ದಾಟಿದೊಡನೆ ಜೀವನದಲ್ಲಿ ಏನೋ ನಡೆಯಬಾರದ ವಿಪತ್ತು ಸಂಭವಿಸಿದೆ ಎಂಬಂತೆ ಪ್ರಯೋಗಾಲಯ, ತಪಾಸಣಾ ಕೇಂದ್ರಗಳ ಮುಂದೆ ದಂಬಾಲು ಬಿದ್ದು ನಡುಗುವವರನ್ನು ನೋಡುತ್ತೇವೆ. ಹೀಗೆ ಒಮ್ಮಿಂದೊಮ್ಮಲೇ ದೇಹದಲ್ಲೇನೂ ವಿಪತ್ತು ಸಂಭವಿಸುವುದಿಲ್ಲ, ರೋಗಗಳು ಬಡಿದಪ್ಪಳಿಸುತ್ತವೆಯೇ ಎಂದು ಚಾತಕಪಕ್ಷಿಗಳಂತೆ ಕಾದು ಕೂರುವ ಮನೋಧರ್ಮ ಸರಿಯಲ್ಲ. ಈ ರೀತಿಯಲ್ಲಿ ಭಯಭೀತಿಗೆ ಒಳಗಾದರೇ ರೋಗರುಜಿನಗಳು ದೇಹದೊಳಗೆ ಪ್ರವೇಶ ಗಿಟ್ಟಿಸಿಕೊಳ್ಳುವುದು. ಹಾಗೆಂದು ನಲವತ್ತರಲ್ಲಿ ಏನೂ ಬದಲಾವಣೆ ಆಗುವುದೇ ಇಲ್ಲವೆಂದಲ್ಲ. ಅದನ್ನೇ ಆಯುರ್ವೆದ ಬಹಳ ಕರಾರುವಕ್ಕಾಗಿ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದು. ಅದೇನೆಂದರೆ ವರ್ಷ ನಲವತ್ತರ ತನಕ ಬೆಳವಣಿಗೆಗಳು ಆಗಿ ಶರೀರದ ಸಂಪೂರ್ಣತಾ ಹಂತ ತಲುಪುತ್ತದೆ, ಆನಂತರದ್ದು ಪರಿಹಾನಿ ಅವಸ್ಥಾ! ಪ್ರಾಚೀನ ಚಿಂತನೆಯ ತಳಹದಿ ಎಷ್ಟೊಂದು ಸದೃಢವಾಗಿದೆ ಎಂದರಿಯಲು ಬೇರಿನ್ನೇನೂ ಬೇಕಿಲ್ಲ.

    ಇದಕ್ಕೆಲ್ಲ ಪರಿಹಾರ ರೂಪವಾಗಿ ಬರಿಯ ತಪಾಸಣೆಗಳನ್ನು ಮಾಡಿದರೆ ದೇಹದಲ್ಲೇನೂ ಬದಲಾವಣೆಗಳು ಸಂಭವಿಸುವುದಿಲ್ಲ. ಅದಕ್ಕಾಗಿ ಆಯುರ್ವೆದ ತೆರೆದಿಟ್ಟ ಉಪಾಯಗಳು ಮನೋಜ್ಞವಾಗಿವೆ. ವಯಃಸ್ಥಾಪನ ಚಿಕಿತ್ಸೆ, ಜೀವನೀಯ ಚಿಕಿತ್ಸೆ, ಬೃಂಹಣ ಚಿಕಿತ್ಸೆ, ರಸಾಯನ ಚಿಕಿತ್ಸೆ, ವಾಜೀಕರಣ ಚಿಕಿತ್ಸೆ, ಬಲ್ಯಚಿಕಿತ್ಸೆ, ಸತ್ವಾವಜಯ ಚಿಕಿತ್ಸೆಗಳೆಂಬ ಅನುಪಮ ವಿಧಾನಗಳನ್ನೆಲ್ಲ ಹೇಳಿದ್ದು ಮಾನವ ಸಂಕುಲಕ್ಕೆ ಆಯುರ್ವೆದ ನೀಡಿದ ಸಾರ್ವಕಾಲಿಕ ಕೊಡುಗೆಗಳ ಸಾಲಿನಲ್ಲಿ ನಿಲ್ಲುತ್ತದೆ. ರಸಾಯನಾದಿ ಕ್ರಮಗಳಿಂದ ಆಯಸ್ಸನ್ನು ವರ್ಧಿಸಬೇಕೇ ಹೊರತು ಕೇವಲ ವರ್ಷಗಳಿಂದಲ್ಲ. ಅನಾರೋಗ್ಯದಿಂದ ಹೆಚ್ಚು ಕಾಲ ಬಾಳಿದರೆ ಅನ್ಯರಿಗೆ ಹೊರೆಯಾಗುತ್ತೇವೆಯೇ ಹೊರತು ಅದೇನೂ ಸಾಧನೆಯಾಗುವುದಿಲ್ಲ. ಜೀವನಕ್ಕೆ ಹಿತವಾದುದೇ ಜೀವನೀಯ ಎಂಬ ಮಾತು ಚರಕಸಂಹಿತೆಯಲ್ಲಿದೆ. ಶರೀಯ, ಇಂದ್ರಿಯ, ಸತ್ವ, ಆತ್ಮಗಳಿಗೆ ಯೋಗ್ಯವಾದ ಜೀವಿತಾವಧಿ ಹೆಚ್ಚಿಸಿದರೆ ಮಾತ್ರ ಆಯಸ್ಸಿಗೆ ಅರ್ಥವಿದೆ, ಬಾಳಿಗೆ ಬಲವಿದೆ, ಬದುಕಿಗೆ ಬೆಂಬಲವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts