ಅಪಾಯಕಾರಿ ತ್ರಾಸಿ ಜಂಕ್ಷನ್

ಬಿ.ರಾಘವೇಂದ್ರ ಪೈ ಗಂಗೊಳ್ಳಿ
ಮಳೆಗಾಲ ಸಮೀಪಿಸುತ್ತಿದ್ದರೂ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಹಲವು ಕಡೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಆರೋಪ ಕೇಳಿ ಬಂದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು, ಈ ಬಾರಿ ಮಳೆಗಾಲದಲ್ಲಿ ಅವಾಂತರ ಸೃಷ್ಟಿಸುವ ಸಾಧ್ಯತೆಗಳಿವೆ. ತ್ರಾಸಿಯಿಂದ ಮರವಂತೆಗೆ ಸಾಗುವ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರೂ ತ್ರಾಸಿ ಜಂಕ್ಷನ್ ಪ್ರದೇಶದಲ್ಲಿ ಕೆಲಸ ಆಮೆನಡಿಗೆಯಲ್ಲಿ ಸಾಗುತ್ತಿದೆ.

ಕುಂದಾಪುರದಿಂದ ಬೈಂದೂರು, ಬೈಂದೂರಿನಿಂದ ಕುಂದಾಪುರಕ್ಕೆ ಸಾಗುವ ಈ ಮಾರ್ಗದಲ್ಲಿ ಗಂಗೊಳ್ಳಿಯಿಂದ ಕುಂದಾಪುರ ಮತ್ತು ಬೈಂದೂರು ಕಡೆಗೆ ಸಾವಿರಾರು ವಾಹನಗಳು ಪ್ರತಿನಿತ್ಯ ಹಗಲು ರಾತ್ರಿ ಸಂಚರಿಸುತ್ತಿವೆ. ನಾಲ್ಕು ರಸ್ತೆಗಳು ಸೇರುವ ತ್ರಾಸಿ ಜಂಕ್ಷನ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಅಪೂರ್ಣವಾಗಿದೆ. ರಾತ್ರಿ ವೇಳೆ ಈ ಪ್ರದೇಶ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದು, ರಸ್ತೆಯ ಎರಡೂ ದಿಕ್ಕುಗಳಲ್ಲಿ ನೀಡಲಾದ ಡೈವರ್ಶನ್ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್‌ಗಳು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಪ್ರಯಾಣಿಕರಿಗೆ ನಿಲ್ಲಲು ಸರಿಯಾದ ವ್ಯವಸ್ಥೆ ಇಲ್ಲ. ರಸ್ತೆ ಮಧ್ಯ ನಿರ್ಮಿಸಲಾಗಿರುವ ಡಿವೈಡರ್ ಕಿರಿದಾಗಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.

ಬೇಕಿದೆ ಅಂಡರ್‌ಪಾಸ್: ನಾಲ್ಕು ರಸ್ತೆ ಸೇರುವ, ಜನನಿಬಿಡ ತ್ರಾಸಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಈ ಸಂಬಂಧ ಮನವಿ ಸಲ್ಲಿಸಿರುವ ಸ್ಥಳೀಯರು, ತ್ರಾಸಿಯಲ್ಲಿ ಸುಸಜ್ಜಿತ ಅಂಡರ್‌ಪಾಸ್ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.

ತ್ರಾಸಿ ಜಂಕ್ಷನ್‌ನಲ್ಲಿ ಅನೇಕ ಕಾಮಗಾರಿ ಅಪೂರ್ಣವಾಗಿದ್ದು, ಸಂಬಂಧಿತ ಗುತ್ತಿಗೆದಾರರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ವಾಹನ ಚಾಲಕರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸೂಚನಾ ಫಲಕ ಅಳವಡಿಸಬೇಕು. ರಸ್ತೆಯ ಎರಡೂ ಬದಿ ಪ್ರಯಾಣಿಕರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ತಂಗುದಾಣ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕಿದೆ.
ಮಳೆಗಾಲದ ಆರಂಭಕ್ಕೂ ಮುನ್ನ ತ್ರಾಸಿ ಜಂಕ್ಷನ್ ಪ್ರದೇಶದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರ ಮತ್ತು ವಾಹನ ಚಾಲಕರ ಭದ್ರತೆಗೆ ಸಂಬಂಧಿತ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮುಂದಾಗಬೇಕಿದೆ.

ನಾಲ್ಕು ರಸ್ತೆಗಳು ಸೇರುವ, ಜನನಿಬಿಡ ತ್ರಾಸಿ ಜಂಕ್ಷನ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಪಘಾತವನ್ನು ಆಹ್ವಾನಿಸುತ್ತಿದೆ. ತ್ರಾಸಿಯಲ್ಲಿ ಸುಸಜ್ಜಿತ ಅಂಡರ್‌ಪಾಸ್ ನಿರ್ಮಿಸಬೇಕು ಮತ್ತು ಅತಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು.
ನಮೋ ಸದಾಶಿವ, ಕಂಚುಗೋಡು

ಮಳೆಗಾಲ ಸಮೀಪಿಸುತ್ತಿದ್ದರೂ ಕೆಲವು ಅತ್ಯಂತ ಪ್ರಮುಖ ಸ್ಥಳದಲ್ಲಿ ಕಾಮಗಾರಿ ಅಪೂರ್ಣವಾಗಿದೆ. ತ್ರಾಸಿ ಜಂಕ್ಷನ್‌ನಲ್ಲಿ ಕಾಮಗಾರಿ ಅಪೂರ್ಣಗೊಂಡಿದ್ದು, ಸ್ಥಳೀಯರ ಬೇಡಿಕೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮನ್ನಣೆ ನೀಡುತ್ತಿಲ್ಲ. ಸಂಸದರು ಹಾಗೂ ಶಾಸಕರು ಕಣ್ಮುಚ್ಚಿ ಕುಳಿತಿದ್ದು, ಪ್ರಯಾಣಿಕರ ಹಿತದೃಷ್ಟಿಯಿಂದ ಅಂಡರ್‌ಪಾಸ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು.
ಪ್ರವೀಣ ಪೂಜಾರಿ, ಪ್ರಯಾಣಿಕ, ತ್ರಾಸಿ

ಬಹುತೇಕ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣಗೊಂಡಿದ್ದು, ಅಪಾಯಕ್ಕೆ ಎಡೆಮಾಡಿ ಕೊಡುತ್ತಿದೆ. ತ್ರಾಸಿ-ಮರವಂತೆ ಕಡಲ ತೀರದಲ್ಲಿ ಹಾದು ಹೋಗುವ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ತ್ರಾಸಿ ಜಂಕ್ಷನ್ ಪ್ರದೇಶ ಇದಕ್ಕೆ ಅಪವಾದವೆನಿಸುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತ್ರಾಸಿ ಜಂಕ್ಷನ್ ಪ್ರದೇಶದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಸುಬ್ರಹ್ಮಣ್ಯ, ತ್ರಾಸಿ  

Leave a Reply

Your email address will not be published. Required fields are marked *