ಗೇಲ್ ಪೈಪ್‌ಲೈನ್‌ನಿಂದ ಅಪಾಯ !

ಧನಂಜಯ ಗುರುಪುರ
ಮಂಗಳೂರಿನ ಎಂಆರ್‌ಪಿಎಲ್‌ನಿಂದ ಕೊಚ್ಚಿಗೆ ಧ್ರುವೀಕೃತ ಅನಿಲ ಪೂರೈಕೆ ಮಾಡಲಿರುವ ಗೇಲ್ ಇಂಡಿಯಾ ಕಂಪನಿ ಬೇಸಿಗೆಯಲ್ಲಿ ಗುರುಪುರದ ಕಾರಮೊಗರು, ಬಂಡಸಾಲೆ, ಕೊಳದಬದಿ, ದೋಣಿಂಜೆ, ಏತಮೊಗರು, ಅದ್ಯಪಾಡಿ, ಮರವೂರು ಮೊದಲಾದೆಡೆ ಭೂಮಿ ಅಗೆದು ಕೊಳವೆ ಅಳವಡಿಸುವ ಕಾಮಗಾರಿ ನಡೆಸಿದೆ. ಆದರೆ ಮಳೆಗಾಲ ಸನ್ನಿಹಿತವಾಗಿದ್ದರೂ ಈ ಪ್ರದೇಶಗಳಲ್ಲಿ ಕೊಳವೆ ಮೇಲೆ ಮಣ್ಣು ಸಮತಟ್ಟುಗೊಳಿಸದೆ ಹಾಗೆಯೇ ಬಿಟ್ಟಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ.

ಮಳೆಯೊಂದಿಗೆ ಫಲ್ಗುಣಿ ಉಕ್ಕೇರಿ ಹರಿದರೆ ಇಲ್ಲೆಲ್ಲ ಪ್ರವಾಹ ನೀರು ತುಂಬುತ್ತದೆ. ನೀರು ತುಂಬಿದರೆ ನಡೆದಾಡುವ ದಾರಿಯೂ ಕಾಣದಂತಾಗುತ್ತದೆ. ಪರಿಣಾಮ ಇಲ್ಲಿ ಮೇಯಲು ಹೋಗುವ ಜಾನುವಾರು ಮತ್ತು ಮಾರ್ಗದತ್ತ ಅತ್ತಿಂದಿತ್ತ ಸಂಚರಿಸುವ ಸ್ಥಳೀಯ ನಿವಾಸಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಗಾಲದಲ್ಲಿ ಮೃತ್ಯುಕೂಪವಾಗಿ ಪರಿಣಮಿಸಬಹುದು ಎಂದು ಬಂಡಸಾಲೆಯ ನಿವಾಸಿಗರೊಬ್ಬರು ಹೇಳಿದ್ದಾರೆ.
ಕೆಲವು ಕಡೆ ಬೃಹತ್ ಪರಂಬೋಕು ತೋಡು ಅಗೆದು ಕೊಳವೆ ಹಾಸಲಾಗಿದೆ. ಇಂತಹ ಜಾಗದಲ್ಲಿ ತೋಡುಗಳ ಪುನಃ ಸ್ಥಾಪನೆ ಮಾಡಿಲ್ಲ. ಇದರಿಂದ ಮಳೆಗಾಲದಲ್ಲಿ ಗುಡ್ಡದ ನೀರು ತೋಡಿನ ಬದಲು ನಾಡಿನಲ್ಲೇ ತುಂಬಲಿದೆ ಮತ್ತು ಸ್ಥಳೀಯ ನಿವಾಸಿಗರು ನಿತ್ಯವೂ ಪ್ರವಾಹ ಭೀತಿ ಎದುರಿಸಬೇಕಿದೆ ಎಂದು ಕೊಳದಬದಿ ನಿವಾಸಿ ನರಸಿಂಹ ಪೂಜಾರಿ ತಿಳಿಸಿದ್ದಾರೆ.

ಗೇಲ್ ಕಂಪನಿ ಇಲ್ಲಿನ ಸಾಕಷ್ಟು ಗದ್ದೆ ಪ್ರದೇಶದಲ್ಲಿ ಕೊಳವೆ ಅಳವಡಿಸಲು ಭೂಮಿ ಅಗೆದಿದೆ. ಬಹುತೇಕ ಎಲ್ಲ ಕಡೆ ಕೊಳವೆ ಹಾಸಲಾಗಿದ್ದರೂ ಪಕ್ಕದಲ್ಲೇ ಅಗೆದು ಗುಡ್ಡೆ ಹಾಕಲಾದ ಮಣ್ಣು ಹಾಗೆಯೇ ಇದೆ. ಜಾಗ ಸಮತಟ್ಟುಗೊಳಿಸುವತ್ತ ಗೇಲ್ ಇನ್ನೂ ಮನಸ್ಸು ಮಾಡಿಲ್ಲ. ಜನರು ಮತ್ತು ಜಾನುವಾರು ಸಂಚರಿಸುವ ಜಾಗದಲ್ಲಿ ಅಗೆಯಲಾದ ಭೂಮಿಯೊಳಗೆ ಕೊಳವೆ ಅಳವಡಿಸಲಾಗಿದ್ದರೂ ಅಲ್ಲಲ್ಲಿ ಕೆಲವು ಕಡೆ ಕೊಳವೆ ಮೇಲೆ ಮಣ್ಣು ಹಾಕಿಲ್ಲ. ತಕ್ಷಣ ಮಳೆಯಾದರೆ ಈ ದೊಡ್ಡ ಹೊಂಡಗಳಲ್ಲಿ ತುಂಬಲಿರುವ ನೀರಿನಿಂದ ಅಪಾಯ ತಪ್ಪಿದ್ದಲ್ಲ.

ಭೂಮಿ ಅಗೆದು ಕೊಳವೆ ಹಾಸಲಾದ ಮೇಲೆ ಮಣ್ಣು ಹಾಕಿ ರೋಲರ್ ಮೂಲಕ ಜಾಗ ಸಮತಟ್ಟುಗೊಳಿಸಬೇಕು. ಇಲ್ಲವಾದರೆ ಹಸಿಯಾಗಿರುವ ಈ ಮಣ್ಣು ಮಳೆಗಾಲದಲ್ಲಿ ಹೂತು ಹೋಗಲಿದೆ. ಅಕಸ್ಮಾತ್ ಜನರು ಅಥವಾ ಜಾನುವಾರು ಇಲ್ಲಿ ನಡೆದಾಡಿದರೆ ಮಣ್ಣು ಹೂತು ಹೋಗಿ ಪ್ರಾಣಕ್ಕೆ ಅಪಾಯವಿದೆ. ಕಳೆದ ವರ್ಷ ಈ ಹೊತ್ತಿಗೆ ಮಳೆಯಾಗಿತ್ತು. ಆದ್ದರಿಂದ ಈ ಬಾರಿ ಮಳೆ ಬರುವುದಕ್ಕಿಂತ ಮುಂಚೆ ಕೊಳವೆ ಹೊಂಡ ಮುಚ್ಚಿ, ಗುಡ್ಡೆಯಂತೆ ರಾಶಿ ಹಾಕಲಾದ ಮಣ್ಣು ಸಮತಟ್ಟುಗೊಳಿಸಬೇಕು.
– ಪುರುಷೋತ್ತಮ ಮಲ್ಲಿ ಗುರುಪುರ ಕುಕ್ಕುದಕಟ್ಟೆ ನಿವಾಸಿ

ಮಳೆ ಬಂದರೆ ಸಮಸ್ಯೆ ಖಂಡಿತ. ತಕ್ಷಣ ಭೂಮಿ ಸಮತಟ್ಟು ಕೆಲಸ ಆರಂಭಿಸುತ್ತೇವೆ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸಲು ಕಾರ್ಯಪ್ರವೃತ್ತರಾಗಲಿದ್ದೇವೆ.
– ಅಶೋಕ್ ಕುಮಾರ್, ಗೇಲ್ ಇಂಡಿಯಾ ಕಂಪನಿ ಉಪ ಮಹಾಪ್ರಬಂಧಕ(ಡೆಪ್ಯೂಟಿ ಜನರಲ್ ಮ್ಯಾನೇಜರ್)

Leave a Reply

Your email address will not be published. Required fields are marked *