ರಾಜ್ಯದ ಎಟಿಎಂಗಳಲ್ಲಿ ಡೇಂಜರ್ ಸೈರನ್!

ಬೆಂಗಳೂರು: ಹಳ್ಳಿಯಿಂದ ದಿಲ್ಲಿವರೆಗೆ ಬ್ಯಾಂಕ್ ಅಲೆದಾಟ ತಪ್ಪಿಸಿ, ಕೋಟ್ಯಂತರ ಗ್ರಾಹಕರ ಕೈಗೆ ಬೇಕೆಂದ ಕಡೆ ದಿನನಿತ್ಯ ಹಣ ನೀಡುತ್ತಿರುವ ಎಟಿಎಂಗಳೀಗ ಆಲ್​ಟೈಮ್ ಡೇಂಜರ್ ಕೇಂದ್ರಗಳಾಗಿ ಬದಲಾಗುತ್ತಿವೆ. ಮಿತವ್ಯಯ ಉದ್ದೇಶದಿಂದ ಎಟಿಎಂ ಘಟಕಗಳಿಗೆ ಬ್ಯಾಂಕ್​ಗಳು ಬೀಗ ಜಡಿಯುತ್ತಿರುವ ಪರಿಣಾಮ ಗ್ರಾಹಕರು ಕಿಲೋಮೀಟರ್​ಗಟ್ಟಲೆ ಅಲೆಯುವುದು ಒಂದೆಡೆಯಾದರೆ, ಹಣ ಡ್ರಾಮಾಡಿದ ಬಳಿಕ ಬೆನ್ನತ್ತುವ ಕಳ್ಳಕಾಕರು ಮಾರಣಾಂತಿಕ ದಾಳಿ ನಡೆಸುತ್ತಿರುವ ಪ್ರಕರಣ ಹೆಚ್ಚುತ್ತಿರುವುದು ಕಂಗಾಲಾಗುವಂತೆ ಮಾಡಿದೆ. ಎಟಿಎಂ ಭದ್ರತೆ, ಬೂತ್​ಗಳಲ್ಲಿ ಹಣ ಲಭ್ಯತೆ ಕುರಿತಂತೆ ರಾಜಧಾನಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಗ್ರಾಹಕರ ಹತ್ತಾರು ಸಂಕಷ್ಟಗಳು ಅನಾವರಣಗೊಂಡಿವೆ.

ಜ್ಯೋತಿ ಕೇಸ್ ನಿದರ್ಶನ: 2013ರ ನ.19ರಂದು ಕಾಪೋರೇಷನ್ ಸರ್ಕಲ್​ನ ಸೆಕ್ಯುರಿಟಿ ಗಾರ್ಡ್ ಇಲ್ಲದ ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ ಬ್ಯಾಂಕ್ ಅಧಿಕಾರಿ ಜ್ಯೋತಿ ಉದಯ್ ಮೇಲೆ ದಾಳಿ ನಡೆಸಿದ ದುಷ್ಕರ್ವಿು ಮಚ್ಚಿನಿಂದ ಹಲ್ಲೆ ನಡೆಸಿ ಹಣ ಹಾಗೂ ಕಾರ್ಡ್ ಕಸಿದು ಪರಾರಿಯಾಗಿದ್ದ. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಹಲ್ಲೆಕೋರ ಮಧುಕರ್ ರೆಡ್ಡಿಯನ್ನು ಬಂಧಿಸಲು 3 ವರ್ಷಗಳು ಬೇಕಾಯಿತು.

ಆದೇಶಕ್ಕೂ ಕಿಮ್ಮತ್ತಿಲ್ಲ: ಜ್ಯೋತಿ ಉದಯ್ ಘಟನೆ ಬಳಿಕ ಪೊಲೀಸರು ಮತ್ತು ಬ್ಯಾಂಕ್ ಅಧಿಕಾರಿಗಳು ಒಟ್ಟಿಗೆ ಸೇರಿ ಎಟಿಎಂ ಮತ್ತು ಗ್ರಾಹಕರ ಭದ್ರತೆ ಸಲುವಾಗಿ 24 ಗಂಟೆಗಳ ಕಾಲ ಸೆಕ್ಯುರಿಟಿ ಗಾರ್ಡ್ ನೇಮಿಸಲು ನಿರ್ಧರಿಸಿದ್ದರು. ಕಾವಲುಗಾರ ಇಲ್ಲದ ಎಟಿಎಂಗೆ ಬೀಗ ಜಡಿದು ಪೊಲೀಸರು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಸಿದ್ದರು. ಇದರಿಂದ ಎಟಿಎಂಗಳಲ್ಲಿ ಸಾರ್ವಜನಿಕ ವಲಯದಲ್ಲಿ ಭದ್ರತೆಯ ಭರವಸೆ ಮೂಡಿಸಿದ್ದರು. ಇದೀಗ ಬ್ಯಾಂಕ್​ಗಳು, ಎಟಿಎಂ ಬೂತ್​ಗಳಲ್ಲಿ ಕಾವಲಿಗಿದ್ದ ಭದ್ರತಾ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.

ಇ-ಸರ್ವಲೆನ್ಸ್ ಎಂದರೇನು?

ಎಲ್ಲ ಎಟಿಎಂಗಳಿಗೆ ಹಂತ ಹಂತವಾಗಿ ಇ-ಸರ್ವಲೆನ್ಸ್ ತಂತ್ರಜ್ಞಾನ ಅಳವಡಿಸಲು ಬ್ಯಾಂಕ್​ಗಳು ಮುಂದಾಗಿವೆ. ಸಿಸಿ ಕ್ಯಾಮರಾ ಮತ್ತು ಸೆನ್ಸರ್ ಹೊಂದಿದ್ದು, ಸೆಕ್ಯುರಿಟಿ ಏಜೆನ್ಸಿ, ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರ ಮೊಬೈಲ್​ಗೆ ಲಿಂಕ್ ಮಾಡಲಾಗುತ್ತದೆ. ದರೋಡೆಕೋರರು ಕಳ್ಳತನಕ್ಕೆ ಯತ್ನಿಸಿದಾಗ ತಕ್ಷಣ ಮೊಬೈಲ್​ಗಳಿಗೆ ಎಚ್ಚರಿಕೆ ಸಂದೇಶ ಹೋಗಲಿದೆ.

ಬ್ಯಾಂಕ್​ಗಳ ವಾದವೇನು?

# ಎಟಿಎಂನಿಂದ ಬ್ಯಾಂಕಿಗೆ ಲಾಭವಿಲ್ಲ. ವೆಚ್ಚ ತಗ್ಗಿಸಲು ಸೆಕ್ಯುರಿಟಿ ಗಾರ್ಡ್ ಸೇವೆ ಸ್ಥಗಿತ.

# 3 ಪಾಳಿಯಲ್ಲಿ ಗಾರ್ಡ್​ಗಳ ನೇಮಕಾತಿಗೆ ಕನಿಷ್ಠ 30 ಸಾವಿರ ರೂ. ಖರ್ಚಾಗುತ್ತದೆ.

# ಕೆಲವೆಡೆ ಗಾರ್ಡ್​ಗಳಿಂದಲೇ ಹಣ ದರೋಡೆ, ಬ್ಯಾಟರಿ ಕಳವು ಪ್ರಕರಣಗಳ ವರದಿ.

# ಕಡ್ಡಾಯವಾಗಿ ಸಮವಸ್ತ್ರ ಧರಿಸಿ, ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸದ ಆರೋಪ.

# ಗ್ರಾಹಕರ ಜತೆ ಒಳ್ಳೆಯ ಒಡನಾಟ ಇಟ್ಟುಕೊಳ್ಳದೆ ಅಸಭ್ಯ ವರ್ತನೆ, ಕಿರಿಕಿರಿ ಆರೋಪ.

ಸೆಕ್ಯುರಿಟಿ ಏಕೆ ಬೇಕು?

# ಜನಸಂದಣಿ ಹೆಚ್ಚಿರದ ಪ್ರದೇಶಗಳಲ್ಲಿ ದರೋಡೆಕೋರರು, ಕಳ್ಳರ ಕಾಟ ಇದೆ.

# ಸೆಕ್ಯುರಿಟಿ ಗಾರ್ಡ್ ಇದ್ದರೆ ಸ್ವಲ್ಪ ಪ್ರಮಾಣದಲ್ಲಿ ದಾಳಿ ನಡೆಸಲು ಹೆದರುತ್ತಾರೆ.

ಎಟಿಎಂನಿಂದ ಒಬ್ಬರೇ ಹಣ ಡ್ರಾ ಮಾಡುವಾಗ ಕಳ್ಳರು ದಾಳಿ ಮಾಡಿ ಜೀವಕ್ಕೂ ಆಪತ್ತು ತರಬಹುದು. ಕಾವಲುಗಾರ ಇದ್ದರೆ ಗ್ರಾಹಕರಿಗೆ ಧೈರ್ಯ, ಕಳ್ಳರಿಗೆ ಭಯ ಇರುತ್ತದೆ.

| ಆನಂದ್-ಬೆಂಗಳೂರು

ವಿಧಾನಸೌಧದಲ್ಲಿ ಇಂದು ಸಭೆ

ಎಟಿಎಂಗಳ ಭದ್ರತೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒತ್ತಡ ತಾಳಲಾರದೆ ಮಧ್ಯ ಪ್ರವೇಶಿಸುವಂತೆ ಬ್ಯಾಂಕುಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆಯುವ ಬ್ಯಾಂಕರ್​ಗಳ ಸಭೆಯಲ್ಲಿ ಈ ವಿಚಾರ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆಯಿದೆ.

ನಮಗೆ ಕಂಡಿದ್ದೇನು?

# ಎಟಿಎಂಗಳಿಗೆ ತಗಲುವ ಖರ್ಚು ಕಡಿತಕ್ಕಾಗಿ ಘಟಕಗಳೇ ಸ್ಥಗಿತ, ಬಹುತೇಕ ಕಡೆ ಎಟಿಎಂ ಕೇಂದ್ರಗಳೀಗೆ ಬೀಗ ಹಾಕಲಾಗಿದೆ, ಕೆಲವೆಡೆ ಎಟಿಎಂಗಾಗಿ 1-2 ಕಿ.ಮೀವರೆಗೆ ಓಡಾಡಬೇಕಾದ ಪರಿಸ್ಥಿತಿ.

# 24 ಗಂಟೆ ಕಾವಲಿಗೆ ನಿಯೋಜಿಸಿದ್ದ ಸೆಕ್ಯುರಿಟಿ ಗಾರ್ಡ್​ಗೆ ಗೇಟ್​ಪಾಸ್, ಗಾರ್ಡ್ ಬದಲು ಸಿಸಿ ಕ್ಯಾಮರಾ ಮತ್ತು ಸೆನ್ಸಾರ್ ವ್ಯವಸ್ಥೆ ಅಳವಡಿಕೆ

ಆರ್​ಬಿಐ ಮಾರ್ಗಸೂಚಿಯಲ್ಲಿ ಎಟಿಎಂಗಳಿಗೆ ಸೆಕ್ಯುರಿಟಿ ಗಾರ್ಡ್ ನೇಮಕ ಕಡ್ಡಾಯ ಎಂಬ ನಿಯಮವಿದೆ. ಆದರೆ ಕಾವಲುಗಾರರನ್ನು ತೆಗೆಯುತ್ತಿರುವುದು ಗಮನಕ್ಕೆ ಬಂದಿಲ್ಲ. ಆರ್​ಬಿಐ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರ ಸಭೆ ನಡೆಯಲಿದೆ. ಆಗ ಈ ವಿಚಾರ ಪ್ರಸ್ತಾಪಿಸಲಾಗುತ್ತದೆ.

| ಟಿ.ಸುನೀಲ್​ಕುಮಾರ್ ಬೆಂಗಳೂರು ಪೊಲೀಸ್ ಆಯುಕ್ತ

ಎಲ್ಲೆಲ್ಲಿ ರಿಯಾಲಿಟಿ ಚೆಕ್?

ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ಸೇರಿ ರಾಜ್ಯಾದ್ಯಂತ ಎಟಿಎಂ ಬೂತ್​ಗಳ ರಿಯಾಲಿಟಿ ಚೆಕ್ ಮಾಡಿದಾಗ ಬಹುತೇಕ ಕಡೆ ಸೆಕ್ಯುರಿಟಿ ಗಾರ್ಡ್​ಗಳೇ ಇಲ್ಲದಿರುವುದು ಬಯಲಾಗಿದೆ.

ರಾಜ್ಯದಲ್ಲಿ ಔಟ್ ಆಫ್ ಸರ್ವೀಸ್ ಎಟಿಎಂಗಳಲ್ಲಿ ಸ್ವಾಗತಿಸುತ್ತಿವೆ ನೋ ಕ್ಯಾಶ್ ಬೋರ್ಡ್

ಬೆಂಗಳೂರು: ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಬಹುತೇಕ ಎಟಿಎಂಗಳು ಔಟ್ ಆಫ್ ಸರ್ವಿಸ್ ಆಗಿವೆ. ಇದು ಕಳೆದ ಹಲವು ದಿನಗಳಿಂದ ಗ್ರಾಹಕರು ಅನುಭವಿಸುತ್ತಿರುವ ಯಾತನೆ. ಮನೆ, ಕಚೇರಿ ಪಕ್ಕದಲ್ಲೇ ಎಟಿಎಂಗಳಿದ್ದರೂ ಕೆಲಸಕ್ಕೆ ಬಾರದಂತಾಗಿವೆ.

ಮೈಸೂರಿನ ಬಹುತೇಕ ಎಟಿಎಂಗಳಲ್ಲಿ ನಗದು ದೊರೆಯುತ್ತಿದೆ. ಶೇ.90ರಷ್ಟು ಎಟಿಎಂ ಕೌಂಟರ್​ಗಳ ಮುಂದೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಭದ್ರತಾ ಸಿಬ್ಬಂದಿ ಬರೀ ದೊಣ್ಣೆ, ಕೋಲು ಹಿಡಿದುಕೊಂಡು ಕಾವಲು ಕಾಯುವ ಸ್ಥಿತಿ ಎಲ್ಲೆಡೆ ಸಾಮಾನ್ಯವಾಗಿದೆ.

ಮಂಗಳೂರಿನಲ್ಲಿ ಶೇ.90 ಕಡೆ ಸೆಕ್ಯೂರಿಟಿ ಗಾರ್ಡ್​ಗಳಿದ್ದರೂ ವೃದ್ಧರು, ಅಶಕ್ತರು, ಕೆಲವೆಡೆ ಕುಡುಕರೂ ಕರ್ತವ್ಯದಲ್ಲಿರುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ನೋ ಸರ್ವಿಸ್ ಬೋರ್ಡಗಳೇ ಹೆಚ್ಚು ಕಾಣುತ್ತದೆ.

ಉಡುಪಿಯಲ್ಲಿ ಎಟಿಎಂಗಳು ಸುವ್ಯವಸ್ಥಿತವಾಗಿದ್ದು, ಸೆಕ್ಯುರಿಟಿ ಗಾರ್ಡ್​ಗಳು ಇರುವುದಿಲ್ಲ. ದಾವಣಗೆರೆ ನಗರದಲ್ಲಿ ಅಂದಾಜು 70 ಎಟಿಎಂ ಕೇಂದ್ರಗಳಿವೆ. ಬೆಳಗ್ಗೆ 9ರಿಂದ ಸಂಜೆ ಆರು ಗಂಟೆವರೆಗೆ ಕೆಲವೆಡೆ ಸೆಕ್ಯೂರಿಟಿ ನೇಮಿಸಲಾಗಿದೆ. ಸಂಜೆ 6ರ ನಂತರ ಬಹುತೇಕ ಎಟಿಎಂಗಳು ಬಂದ್ ಆಗಿರುತ್ತವೆ.

ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ 585 ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಭದ್ರತಾ ವ್ಯವಸ್ಥೆ ಸಮಾಧಾನಕರವಾಗಿದ್ದು, ನಗದು ಕೊರತೆ ಇಲ್ಲ.