ಮುಂಡ್ಕೂರು ರಸ್ತೆ ಬದಿ ಅಪಾಯಕಾರಿ ಕೆರೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಮುಂಡ್ಕೂರು-ಇನ್ನಾ ಕ್ರಾಸ್ ಬಳಿ ಮುಖ್ಯರಸ್ತೆಗೆ ತಾಗಿಕೊಂಡಿರುವ ಕೆರೆ ಅಪಾಯಕಾರಿಯಾಗಿದ್ದು ವಾಹನ ಸವಾರರು ಇಲ್ಲಿ ಸ್ವಲ್ಪ ಎಡವಿದರೂ ಅಪಾಯ.
ಮುಂಡ್ಕೂರು ಗ್ರಾಪಂ ವ್ಯಾಪ್ತಿಯ ಇನ್ನಾ ಕ್ರಾಸ್ ಬಳಿಯ ಕೆರೆ ಪ್ರಸ್ತುತ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರ ನಿದ್ದೆಗೆಡಿಸುತ್ತಿದೆ. ಚಾಲಕ ಇಲ್ಲಿ ಸ್ವಲ್ಪ ಆಯ ತಪ್ಪಿದರೂ ವಾಹನಗಳು ಗುಂಡಿಗೆ ಬೀಳುವ ಸಾಧ್ಯತೆಯೇ ಅಧಿಕ. ಬೆಳ್ಮಣ್‌ನಿಂದ ಕಟೀಲು ಮಾರ್ಗವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಹತ್ತಿರದ ರಸ್ತೆಯಾಗಿರುವುದರಿಂದ ಬಹುತೇಕ ವಾಹನಗಳು ಹೆಚ್ಚಾಗಿ ಇದೇ ರಸ್ತೆಯಲ್ಲಿ ಓಡಾಡುತ್ತವೆ. ರಸ್ತೆಗೆ ತಾಗಿಕೊಂಡಿರುವ ಈ ಕೆರೆ ಸಮೀಪ ಎರಡೂ ಬದಿಯಲ್ಲಿ ವಾಹನಗಳಿಗೆ ಸೈಡ್ ಬಿಟ್ಟು ಕೊಡಲು ಜಾಗವಿಲ್ಲದ ಪರಿಣಾಮ ಹಾಗೂ ಇದೇ ಪರಿಸರದಲ್ಲಿ ರಸ್ತೆ ಉಬ್ಬು ಪ್ರದೇಶವಾಗಿದ್ದು ವೇಗವಾಗಿ ಬರುವ ವಾಹನಗಳು ಜಂಪ್ ಆಗುತ್ತಿದ್ದು ಆಯ ತಪ್ಪಿದರೆ ಕೆರೆಯ ಒಳಗೆ ಬೀಳುವುದು ಖಚಿತ.

ಮಳೆಗಾಲದಲ್ಲಿ ಡೇಂಬರ್: ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಕಡಿಮೆ. ಆದರೆ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತದೆ. ಆ ಸಂದರ್ಭ ಕೆರೆ ಸುತ್ತಲೂ ಹುಲ್ಲು ಪೊದೆಗಳಿಂದಲೂ ಆವೃತಗೊಂಡಿರುತ್ತವೆ. ಇದರಿಂದ ಯಾವುದೇ ಕ್ಷಣ ಅವಘಡ ನಡೆಯಬಹುದು. ಮಳೆಗಾಲದಲ್ಲಿ ಅಪಾಯಕಾರಿಯಾಗಿ ಗೋಚರಿಸುವ ಈ ಕೆರೆಗೆ ತಡೆಬೇಲಿ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಳೆಗಾಲ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಈ ಗುಂಡಿ ನೀರಿನಿಂದ ತುಂಬಿ ಗದ್ದೆಯ ಸಮಾನಕ್ಕೆ ನೀರು ನಿಂತು ಗುಂಡಿಯೂ ಗೋಚರಕ್ಕೆ ಬಾರದೆ ವಾಹನ ಸವಾರರು ಗೊಂದಲಕ್ಕೀಡಾಗುವ ಸಾಧ್ಯತೆ ಇದೆ.

ಇಲ್ಲಿ ವಾಹನ ಸವಾರರು ಗೊಂದಲಕ್ಕೀಡಾಗಿ ರಸ್ತೆ ಬದಿಯ ಗುಂಡಿಗೆ ಬೀಳುವ ಸಾಧ್ಯತೆ ಇದೆ. ಕೂಡಲೇ ಸಂಬಂಧಪಟ್ಟವರು ತಡೆಬೇಲಿ ನಿರ್ಮಿಸಿಕೊಟ್ಟು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು.
– ಬಿ.ಪಾಂಡುರಂಗ ಪ್ರಭು ಹಿರಿಯ ನಾಗರಿಕ

ಇಲ್ಲಿನ ಕೆರೆ ರಸ್ತೆ ಬದಿಯಲ್ಲಿದ್ದು ಅಪಾಯಕಾರಿಯಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗುವುದು. ಕೂಡಲೇ ತಡೆಬೇಲಿ ನಿರ್ಮಾಣಕ್ಕೆ ಮನವಿ ಮಾಡಲಾಗುವುದು.
ಶಶಿಧರ್ ಆಚಾರ್ಯ ಪಂಚಾಯಿತಿ ಆಭಿವೃದ್ಧಿ ಅಧಿಕಾರಿ, ಮುಂಡ್ಕೂರು ಗ್ರಾಪಂ

Leave a Reply

Your email address will not be published. Required fields are marked *