ವಿದ್ಯುತ್ ಲೇನ್‌ನಿಂದ ಅಪಾಯ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಕಟ್ಟಿನಮಕ್ಕಿಯ ಸ್ವಲ್ಪ ಭಾಗ ನಾಡಾ ಪಂಚಾಯಿತಿ, ಮತ್ತಷ್ಟು ಪ್ರದೇಶ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ನಾಲ್ಕು ಮನೆ ಆಲೂರು ಗ್ರಾಪಂ ಸೇರಿದರೆ ಕೆಲವು ಮನೆ ನಾಡಾಕ್ಕೆ ಸೇರಿ ಹರಿದು ಹಂಚಿಹೋದಂತೆಯೇ ಕಟ್ಟಿನಮಕ್ಕಿ ಕೃಷಿಕರ ಬದುಕು ಕೂಡ. ಒಂದು ಕಡೆ ಕಾಡುಪ್ರಾಣಿಗಳ ಹಾವಳಿ, ಇನ್ನೊಂದು ಕಡೆ ವಿದ್ಯುತ್ ರೈತರ ಬದುಕಿಗೆ ಸಂಕಷ್ಟ ತಂದಿದೆ.

ಬೈಂದೂರು ತಾಲೂಕು ಕಟ್ಟಿನಮಕ್ಕಿ ಪರಿಸರದಲ್ಲಿ ೧೫ ಮನೆಗಳಿವೆ. ಎಲ್ಲರೂ ಕೃಷಿಯನ್ನೇ ನಂಬಿದ್ದಾರೆ. ಭತ್ತ, ಅಡಕೆ, ತೆಂಗು ಪ್ರಮುಖ ಬೆಳೆಗಳು. ಬೇಸಿಗೆಯಲ್ಲಿ ಕೃಷಿಗೆ ನೀರುಣಿಸುವ ಹೋರಾಟದಲ್ಲಿ ಹೈರಾಣಾದರೆ, ನಿರಂತರ ವಿದ್ಯುತ್ ಇಲ್ಲದಿರುವುದು ಮತ್ತೊಂದು ಸಮಸ್ಯೆ. ಹಿಂದೆ ವೋಲ್ಟೇಜ್ ಇಲ್ಲದೆ ರೈತರ ಪಂಪ್‌ಸೆಟ್ ಚಾಲೂ ಆಗುತ್ತಿರಲಿಲ್ಲ. ಪ್ರಸಕ್ತ ತುಕ್ಕು ಹಿಡಿದ ವಿದ್ಯುತ್ ಲೇನ್ ಕಳಚಿ ಬೀಳುವುದರಿಂದ ವಾರಗಟ್ಟಲೆ ವಿದ್ಯುತ್ ಕಡಿತ. ಸಾಲಾಡಿ ಟಿಸಿ ಮೂಲಕ ಹಾದುಹೋದ ವಿದ್ಯುತ್ ಲೇನ್, ಕಂಬಗಳನ್ನು ಬದಲಾಯಿಸಿದರೆ, ವಿದ್ಯುತ್ ಸಮಸ್ಯೆ ಅಲ್ಲದೆ ಸಂಭವನೀಯ ದುರಂತವನ್ನೂ ತಪ್ಪಿಸಬಹುದು.

ನೀರು ನಂಬಿ ಕೆಟ್ಟರು: ಹಿಂದೆ ಸಾಕಷ್ಟು ಮಳೆ ಆಗುತ್ತಿದ್ದರಿಂದ ಕಟ್ಟಿನಮಕ್ಕಿ ಹೊಳೆ ನೀರು ನಂಬಿ ಎರಡು ಬೆಳೆ ಬೆಳೆಯಲಾಗುತ್ತಿತ್ತು. ಬರಬರುತ್ತ ಮಳೆ ಕಡಿಮೆಯಾಗಿ ಕಟ್ಟಿನಮಕ್ಕಿ ಹೊಳೆ ಹರಿಯುವುದನ್ನು ನಿಲ್ಲಿಸಿದ ಅನಂತರ ಒಂದೇ ಬೆಳೆ. ಸೌಪರ್ಣಿಕಾ ನದಿಗೆ ಮಾವಿನಗುಂಡಿಯಲ್ಲಿ ಅಣೆಕಟ್ಟು ಕಟ್ಟಿ, ಅಲ್ಲಿಂದ ಗುಂಡೂರು ಬಳಿ ಚೆಕ್‌ಡ್ಯಾಂ ಮೂಲಕ ಏತ ನೀರಾವರಿಯಲ್ಲಿ ಕಾಲುವೆಗಳಿಗೆ ನೀರು ಹರಿಸುವುದರಿಂದ ಕಟ್ಟಿನಮಕ್ಕಿ ಹೊಳೆಯಲ್ಲೂ ನೀರು ಹರಿದು, ನಿಂತಿದ್ದ ಭತ್ತದ ಸುಗ್ಗಿ ಕೃಷಿ ಮತ್ತೆ ಆರಂಭಿಸಿದ್ದರು ಇಲ್ಲಿನ ಕೃಷಿಕರು. ಒಂದು ವರ್ಷ ಮಾತ್ರ ನೀರು ಹರಿಯಿತು. ಕಳೆದ ಬಾರಿ ಗುಂಡೂರಿಂದ ನೀರು ಬರುತ್ತದೆ ಎಂದು ಭತ್ತದ ಕೃಷಿಗೆ ಬೀಜ ಹಾಕಿ ಕಾದಿದ್ದ ರೈತರಿಗೆ ಸಿಕ್ಕಿದ್ದು ನಿರಾಸೆ. ನೀರು ಹರಿಸದ ಕಾರಣ ಬೀಜ ಸಸಿಯೊಡೆದು ಗದ್ದೆಯಲ್ಲಿ ಒಣಗಿ ಹೋಯಿತು. ನೀರು, ವಿದ್ಯುತ್ ಸಮಸ್ಯೆ ನೀಗಿಸಿಕೊಂಡು ಕೃಷಿ ಮಾಡಿದರೆ, ಕಾಡುಪ್ರಾಣಿಗಳ ಹಾವಳಿ!

ಸ್ಪಂದಿಸಿದ ಮೆಸ್ಕಾಂ: ಕಟ್ಟಿನಮಕ್ಕಿ ವಿದ್ಯುತ್ ಸಮಸ್ಯೆ ಬಗ್ಗೆ ತಲ್ಲೂರು ಮೆಸ್ಕಾಂ ಸಹಾಯಕ ಇಂಜಿನಿಯರ್ ಹಾಗೂ ನಾಡಾ ಮೆಸ್ಕಾಂ ಕಿರಿಯ ಇಂಜಿನಿಯರ್ ಸೃಜನಾತ್ಮಕವಾಗಿ ಸ್ಪಂದಿಸಿದ್ದಾರೆ. ವಿದ್ಯುತ್ ಸಮಸ್ಯೆ ಬಗ್ಗೆ ವಿಜಯವಾಣಿ ಪ್ರತಿನಿಧಿ ಮೆಸ್ಕಾಂ ಇಂಜಿನಿಯರ್ ಗಮನಕ್ಕೆ ತಂದಿದ್ದು, ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ನಾಡಾ ಕಿರಿಯ ಇಂಜಿನಿಯರ್ ವಿಜಯ ಕಟ್ಟಿನಮಕ್ಕಿ ವ್ಯಾಪ್ತಿ ಲೈನ್‌ಮೆನ್ ಜತೆ ಸ್ಥಳ ಪರಿಶೀಲಿಸಿ, ತಕ್ಷಣ ವಿದ್ಯುತ್ ಲೇನ್ ಬದಲಿಸಿ ಕೊಡುವ ಜತೆಗೆ ಕಂಬ ಕೂಡ ಸ್ಥಳಾಂತರ ಮಾಡುವ ಭರವಸೆ ನೀಡಿದ್ದಾರೆ. ವಿದ್ಯುತ್ ಸಂಪರ್ಕ ಪಡೆದ ಕೃಷಿಕರಿಗೆ ಮನವಿ ಸಲ್ಲಿಸುವಂತೆ ಹೇಳಿದ ಅವರು, ಸಾಲಾಡಿ ಟಿಸಿಯಿಂದ ಕಟ್ಟಿನಮಕ್ಕಿಗೆ ಹಾದುಹೋದ ಲೇನ್ ದುರಸ್ತಿ ಹಾಗೂ ಪದೇಪದೆ ವಿದ್ಯುತ್ ತಂತಿ ತುಂಡಾಗಿ ಬೀಳುವ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ. ಸಮಸ್ಯೆಯಿದ್ದರೂ ಅದನ್ನು ನೀಗಿಸಿ ಕಟ್ಟಿನಮಕ್ಕಿ ವಿದ್ಯುತ್ ಸಮಸ್ಯೆ ಪರಿಹಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಕಟ್ಟಿನಮಕ್ಕಿಗೆ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಸಾಲಾಡಿ ತೋಮನಮುಲ್ಲಿ ಟಿಸಿ ಮೂಲಕ ಹಾದುಹೋಗುವ ವಿದ್ಯುತ್ ಲೇನ್ ದುರಸ್ತಿಗೆ ಸಮ್ಮತಿ ಸಿಕ್ಕಿದ್ದು, ಇನ್ನೊಂದು ತಿಂಗಳಲ್ಲಿ ಸಮಸ್ಯೆ ಪರಿಹಾರ ಆಗಲಿದೆ. ಮನೆ ಹಾಗೂ ತೋಟದೊಳಗೆ ಹಾದುಹೋಗುವ ವಿದ್ಯುತ್ ಲೇನ್‌ನಿಂದ ಆಗುವ ಅನಾಹುತ ತಪ್ಪಿಸಲು ಕೇಬಲ್ ವ್ಯವಸ್ಥೆ ಮಾಡುವ ಬಗ್ಗೆ ಕೂಡ ಚಿಂತನೆ ನಡೆದಿದೆ.
ವಿನಾಯಕ ಕಾಮತ್ ಸಹಾಯಕ ಇಂಜಿನಿಯರ್, ಮೆಸ್ಕಾಂ ತಲ್ಲೂರು

ಹಿಂದೆ ಟಿಸಿ ದೂರವಿದ್ದರಿಂದ ನೀರೆತ್ತುವ ಯಂತ್ರಗಳಿಗೆ ಪವರ್ ಸಾಕಾಗದೆ, ಮೋಟಾರ್ ಚಾಲೂ ಮಾಡಲು ಸಮಸ್ಯೆಯಾಗುವ ಜತೆಗೆ, ಲೈಟ್‌ಗಳೂ ಡಿಮ್ ಆಗಿ ಉರಿಯುತ್ತಿತ್ತು. ಒಂದು ವರ್ಷದ ಹಿಂದೆ ಮೆಸ್ಕಾಂ ಟಿಸಿ ಬದಲಿಸುವ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕೊಟ್ಟಿದ್ದು, ಸಾಲಾಡಿ ಟಿಸಿ ಮೂಲಕ ಹಾದುಹೋಗುವ ಲೇನ್ ಬದಲಾಯಿಸಿ, ಕೇಬಲ್ ಹಾಕಿಕೊಟ್ಟರೆ ಅಪಾಯ ತಪ್ಪಿಸಲು ಸಾಧ್ಯವಿದೆ. ರೈತರ ಸಮಸ್ಯೆಗೆ ಮೆಸ್ಕಾಂ ಸ್ಪಂದಿಸುತ್ತದೆ ಎಂಬ ಭರವಸೆ ಇದೆ.
ಗೋಪಾಲ ಗಾಣಿಗ ಕೃಷಿಕ ಕಟ್ಟಿನಮಕ್ಕಿ

ವಿದ್ಯುತ್ ಲೇನ್ ಗಾಳಿ ಮಳೆ ಜೋರು ಬಂದರೆ ತುಂಡಾಗಿ ಅಂಗಳದಲ್ಲಿ ಬೀಳುತ್ತಿದ್ದು, ಜನ ಜಾನುವಾರುಗಳಿಗೆ ಸಮಸ್ಯೆ ತರುತ್ತಿದೆ. ವಿದ್ಯುತ್ ಲೇನ್ ತುಂಡಾಗಿ ಬಿದ್ದಿರುವುದು ಗೊತ್ತಾಗದೆ ಮಕ್ಕಳು ತುಳಿದರೆ ಅಪಾಯ. ತುಕ್ಕು ಹಿಡಿದ ಲೇನ್ ಬದಲಿಸಿ, ಕೇಬಲ್ ಅಳವಡಿಸುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು. ತೋಟದಲ್ಲಿ ಸಾಗಿ ಹೋದ ಲೇನ್ ಬದಲಿಸಿ ಕೇಬಲ್ ಹಾಕಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಯಶೋದಾ ಟಿ.ಶೆಟ್ಟಿ ಗೃಹಿಣಿ, ಕಟ್ಟಿನಮಕ್ಕಿ

ಗುಂಡೂರು ಸೌಪರ್ಣಿಕಾ ಏತ ನೀರಾವರಿ ನೀರು ಚಾನಲ್ ಮೂಲಕ ಹರಿಬಿಟ್ಟಿದ್ದರಿಂದ ಕಟ್ಟಿನಮಕ್ಕಿ ಹೊಳೆಯಲ್ಲಿ ನೀರು ಬಂದು ಮೋಟಾರ್ ಅಳವಡಿಸಿ ಕೃಷಿ ಮಾಡಲಾಗುತ್ತಿತ್ತು. ಈ ಬಾರಿ ಗುಂಡೂರು ಡ್ಯಾಂನಿಂದ ನೀರು ಬಿಡದಿದ್ದರಿಂದ ಹೊಳೆಯಲ್ಲಿ ನೀರಿಲ್ಲದೆ ಕೃಷಿಗೆ ಸಮಸ್ಯೆ ಸೃಷ್ಟಿಯಾಗಿದೆ. ಜತೆಗೆ ವಿದ್ಯುತ್ ಲೇನ್ ತುಕ್ಕು ಹಿಡಿದಿದ್ದರಿಂದ ಪದೇಪದೆ ತುಂಡಾಗುತ್ತಿದ್ದು, ಕೃಷಿಗೆ ನೀರುಣಿಸಲು ಆಗದೆ ಅಡಕೆ ಸಸಿಗಳು ಹಾಳಾಗಿವೆ. ವಿದ್ಯುತ್ ಲೇನ್ ದುರಸ್ತಿ ಜತೆಗೆ ಗಂಡೂರು ಡ್ಯಾಂ ಮೂಲಕ ನೀರು ಹರಿಸಿದರೆ ಕೃಷಿಕರಿಗೆ ಒಳ್ಳೆಯದಾಗುತ್ತದೆ.
ನರಸಿಂಹ ಗಾಣಿಗ ಕೃಷಿಕ ಕಟ್ಟಿನಮಕ್ಕಿ

Leave a Reply

Your email address will not be published. Required fields are marked *