ಕೃಷಿ ಭೂಮಿಗೆ ಗಂಡಾಂತರ!

ಶ್ರೀಪತಿ ಹೆಗಡೆ ಹಕ್ಲಾಡಿ ಕೆಳಾಕಳಿ
ಕಿಂಡಿ ಅಣೆಕಟ್ಟು ವೈರುಧ್ಯಕ್ಕೆ ಹತ್ತಾರು ಹೆಕ್ಟೇರ್ ಭತ್ತದ ಕೃಷಿ ಭೂಮಿ ನಂಜೇರಿ ಬೇಸಾಯ ಕೈಬಿಡುವ ಸ್ಥಿತಿ ಉದ್ಭವಿಸಿದೆ. ಉಪ್ಪು ನೀರಿನ ಪ್ರಭಾವದಿಂದ ಬಾವಿ ನೀರು ಉಪ್ಪಾಗಿ ಕುಡಿಯುವ ನೀರಿಗೂ ತತ್ವಾರ ಬಂದಿದೆ. ಸಿಗಡಿ ಕೆರೆ ತ್ಯಾಜ್ಯವೆಲ್ಲ ನದಿಗೆ ಬಿಡುವ ಮೂಲಕ ಜಲಚರಗಳಿಗೂ ಬಂದಿದೆ ಆಪತ್ತು.

ಬೈಂದೂರು ತಾಲೂಕು, ಹಕ್ಲಾಡಿ ಗ್ರಾಮ ಕೆಳಾಕಳಿ ನಲವತ್ತಾಣಿ ಕಿಂಡಿ ಅಣೆಕಟ್ಟು ಸೃಷ್ಟಿಸಿದ ಅವಾಂತರವಿದು. ಕೂಲಿ ಕಾರ್ಮಿಕರ ಕೊರತೆ, ದುಬಾರಿ ಕೂಲಿ ಕಷ್ಟ ನೀಗಿಕೊಂಡು ಭತ್ತದ ಕೃಷಿ ಮೂಡುತ್ತಿದ್ದ ರೈತರು ಈ ವರ್ಷ ಕೃಷಿ ಕೈಬಿಡಬೇಕಾದ ಸ್ಥಿತಿ. ಎಲ್ಲೆಲ್ಲೂ ಕುಡಿಯುವ ನೀರಿಗೆ ಹಾಹಾಕಾರವಿದ್ದರೂ ಕೆಳಾಕಳಿ ಪರಿಸರದ ಬಾವಿಗಳಲ್ಲಿ ಸಾಕಷ್ಟು ನೀರಿದೆ. ಆದರೆ ಉಪ್ಪು ನೀರು ಧಾಂಗುಡಿಯಿಂದ ಟ್ಯಾಂಕರ್ ನೀರು ಕಾಯುವ ಪರಿಸ್ಥಿತಿ.
10 ವರ್ಷದ ಹಿಂದೆ ರಾಜ್ಯಸಭಾ ಸದಸ್ಯರ ನಿಧಿಯಿಂದ ಸೌಪರ್ಣಿಕಾ ನದಿಗೆ ನಲವತ್ತಾಣಿ ಎಂಬಲ್ಲಿ 10 ಸಾವಿರ ರೂ. ವೆಚ್ಚದ ಕಿರು ಕಿಂಡಿ ಅಣೆಕಟ್ಟು ನಿರ್ಮಿಸಿ, ಪರಿಸರದ ಜಮೀನಿಗೆ ಉಪ್ಪು ನೀರು ನುಗ್ಗದಂತೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಕಿಂಡಿ ಅಣೆಕಟ್ಟು ನಿರ್ವಹಣೆ ಕಳಪೆ ಕಾಮಗಾರಿಗೆ ಇದ್ದೂ ಇಲ್ಲದಂತೆ ಆಗಿದೆ. ಹಲಗೆ ಹಾಕುವ ಸಂಧುಗಳು ಎದ್ದು, ಹಲಗೆ ಹಾಕದ ಸ್ಥಿತಿ ನಿರ್ಮಾಣವಾಗಿದೆ. ಕಿಂಡಿ ಅಣೆಕಟ್ಟು ಎರಡೂ ಬದಿಯಲ್ಲೂ ಬದು ಕಟ್ಟದೆ ಹಿನ್ನೀರ ರಭಸಕ್ಕೆ ಕಟ್ಟಿನ ಬದು ಒಡೆದು ನೀರು ನುಗ್ಗುತ್ತಿದೆ. ಎರಡೂ ಬದಿ ಹಲಗೆ ಹಾಕಲಾಗದೆ ಸಿಂಗಲ್ ಹಲಗೆ ಹಾಕಿದ್ದು, ಹಲಗೆ ಹಾಗೂ ಅಣೆಕಟ್ಟು ಕೊರೆದ ಸ್ಥಳದಿಂದ ಸರಾಗವಾಗಿ ನೀರು ನುಗ್ಗಿ ಫಲವತ್ತಾದ ಭೂಮಿ ಬರಡಾಗುತ್ತಿದೆ.

ಸಂಬಂಧಿತ ಇಲಾಖೆಗೆ ಮಾಹಿತಿ ನೀಡಿದರೂ ಈ ಕಡೆ ಯಾರೂ ಮುಖ ಕೂಡ ಹಾಕಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸಣ್ಣ ನೀರಾವರಿ ಇಲಾಖೆ ಲೆಕ್ಕಕ್ಕುಂಟು ಆಟಕ್ಕಿಲ್ಲವೆಂಬಂತಾಗಿದೆ. ಜನರ ಸಮಸ್ಯೆಗೆ ಪರಿಹಾರವೇ ಇಲ್ಲ. ಇದು ಕಿಂಡಿ ಅಣೆಕಟ್ಟು ಅವಾಂತರವಾದರೆ, ಸಿಗಡಿ ಕೆರೆ ತ್ಯಾಜ್ಯ ನದಿಗೆ ಬಿಡುವ ಮೂಲಕ ಜಲಜರಗಳ ಪ್ರಾಣಕ್ಕೂ ಆಪತ್ತು ತರುವ ಜತೆಗೆ ನದಿ ನೀರನ್ನೂ ಕಲುಷಿತಗೊಳಿಸಲಾಗುತ್ತಿದೆ.

ಯಾರ ಅನುಕೂಲಕ್ಕೆ ಕಿಂಡಿ ಅಣೆಕಟ್ಟು?: ಕೆಳಾಕಳಿ ಕಿಂಡಿ ಅಣೆಕಟ್ಟು ಸಮಸ್ಯೆ ಪರಿಹಾರಕ್ಕೆ ವಾರಾಹಿ ನೀರಾವರಿ ಇಲಾಖೆ ಇಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲಿಸಿ ಹಿಂದೆ ಹೋಗಿದ್ದಾರೆ. ಪ್ರಸಕ್ತ ಈಗಿರುವ ಜಾಗದ ಕಿಂಡಿ ಅಣೆಕಟ್ಟು ಶಿಥಿಲಾವಸ್ಥೆ ತಲುಪಿದ್ದು, ಅದನ್ನು ತೆರವು ಮಾಡಿ ಅಲ್ಲೇ ಕಿಂಡಿ ಅಣೆಕಟ್ಟು ಮಾಡುವಂತೆ ಸ್ಥಳೀಯರು ನೀಡಿದ ಸಲಹೆಗೆ ವಾರಾಹಿ ಇಲಾಖೆ ಇಂಜಿನಿಯರ್ ಒಪ್ಪಿಕೊಂಡಿಲ್ಲ. ಸೌಪರ್ಣಿಕಾ ನದಿ ಹತ್ತಿರ ಕಿಂಡಿ ಅಣೆಕಟ್ಟು ಮಾಡುವುದು ಬಿಟ್ಟು 100 ಮೀಟರ್ ಅಂತರದಲ್ಲಿ ಮಾಡಿದರೆ, ಅದರಿಂದ ರೈತರಿಗೆ ಏನೂ ಪ್ರಯೋಜನವಿಲ್ಲ ಎಂದು ಸ್ಥಳೀಯರು ನೀಡಿದ ಸಲಹೆ ಇಂಜಿನಿಯರ್‌ಗೆ ಪಥ್ಯವಾಗಿಲ್ಲ. 100 ಮೀ. ಅಂತರದಲ್ಲಿ ಕಿಂಡಿ ಅಣೆಕಟ್ಟು ಮಾಡುವುದರಿಂದ ಗುತ್ತಿಗೆದಾರರಿಗೆ ಪರಿಕರ ಪೂರೈಕೆ ಅನುಕೂಲವಾಗುತ್ತದೆ. ಹೊಳೆ ಹತ್ತಿರ ಮಾಡಿದರೆ ಸಾಮಗ್ರಿ ಸಾಗಾಟಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶ ಅಧಿಕಾರಿಗಳದ್ದು. ನಾವು ವಾಹನ ಹೋಗಲು ಸ್ಥಳಾವಕಾಶ ಮಾಡಿಕೊಡುತ್ತೇವೆ ಎಂದರೂ ಅವರು ಒಪ್ಪುತ್ತಿಲ್ಲ. ರೈತರ ಅನುಕೂಲಕ್ಕೆ ಕಿಂಡಿ ಅಣೆಕಟ್ಟು ಮಾಡುವುದಾ, ಅಧಿಕಾರಿಗಳ ಇಷ್ಟದಂತೆ ಮಾಡುವುದಾ ಎಂದು ಸ್ಥಳೀಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕಿಂಡಿ ಅಣೆಕಟ್ಟು ಸಂಗತಿಯನ್ನು ಸ್ಥಳೀಯ ಗ್ರಾಪಂ ಗಮನಕ್ಕೆ ತಂದಿದ್ದೇವೆ. ಹಲಗೆ ಹಾಗೂ ಕಿಂಡಿ ಅಣೆಕಟ್ಟು ನಿರ್ವಹಣೆ ಇಲ್ಲದೆ ಸೊರಗಿದ್ದು, ಪ್ರಸಕ್ತ ಸಂಪೂರ್ಣ ಹದಗೆಟ್ಟಿದೆ. ಕಿಂಡಿ ಅಣೆಕಟ್ಟು ಬುಡ ಹಾಗೂ ಬದಿಯಿಂದ ನೀರು ನುಗ್ಗುತ್ತಿದೆ. ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿದ್ದರಿಂದ ಈ ಬಾರಿ ಬೇಸಾಯ ಕೈಬಿಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಬಾವಿಯಲ್ಲಿ ಸಾಕಷ್ಟು ನೀರಿದ್ದರೂ ಉಪ್ಪು ನೀರಿಂದಾಗಿ ಅದನ್ನು ಕುಡಿಯದಂತಾಗಿದೆ. ಕಿಂಡಿ ಅಣೆಕಟ್ಟು ಅವಾಂತರದಿಂದ ಕುಡಿಯುವ ನೀರಿಗೂ ಸಂಕಷ್ಟ ಬಂದಿದೆ.
ಅನಿಕೇತ್ ಹೆಬ್ಬಾರ್ ಕೆಳಾಕಳಿ ನಿವಾಸಿ.

ಸ್ಥಳಕ್ಕೆ ಹಕ್ಲಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕಳುಹಿಸಿ ಪರಿಶೀಲನೆ ಮಾಡುವಂತೆ ಸೂಚಿಸಲಾಗುವುದು. ಕಿಂಡಿ ಅಣೆಕಟ್ಟು ತಾತ್ಕಾಲಿಕ ದುರಸ್ತಿ ಮಾಡಿ ಪರಿಹಾರ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಮಳೆಗಾಲದ ಅನಂತರ ಸಣ್ಣ ನೀರಾವರಿ ಇಲಾಖೆ ಗಮನ ಸೆಳೆದು ಬೇರೆ ಕಿಂಡಿ ಅಣೆಕಟ್ಟು ನಿರ್ಮಿಸುವ ಬಗ್ಗೆ ಪ್ರಯತ್ನ ಮಾಡಲಾಗುವುದು.
ಸುಭಾಷ್ ಶೆಟ್ಟಿ ಹೊಳ್ಮೆಗೆ ಉಪಾಧ್ಯಕ್ಷ, ಗ್ರಾಪಂ ಹಕ್ಲಾಡಿ

Leave a Reply

Your email address will not be published. Required fields are marked *