ಕಿಟಕಿ ಮುರಿದು ಬ್ಯಾಂಕ್‌ನಲ್ಲಿ ಕಳವಿಗೆ ಯತ್ನ

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಸಾತೇನಹಳ್ಳಿ ಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ಕಳವಿಗೆ ಯತ್ನಿಸಿದ ಮೂವರು ಆರೋಪಿಗಳನ್ನು ಸೆರೆ ಹಿಡಿದ ಗ್ರಾಮಸ್ಥರು, ಕಂಬಕ್ಕೆ ಕಟ್ಟಿ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಿರೀಸಾವೆ ಹೋಬಳಿ ಹುಗ್ಗೇನಹಳ್ಳಿ ಗ್ರಾಮದ ಮನು, ಬಾಗೂರು ಹೋಬಳಿ ಕುಂಬಾರಹಳ್ಳಿ ಗ್ರಾಮದ ರೇವಣ್ಣ ಹಾಗೂ ದಂಡಿಗನಹಳ್ಳಿ ಹೋಬಳಿ ಎನ್.ಬಿಂಡೇನಹಳ್ಳಿ ಗ್ರಾಮದ ನವೀನ ಆರೋಪಿಗಳು.
ಶುಕ್ರವಾರ ಮುಂಜಾನೆ 5 ಗಂಟೆ ಸಮಯದಲ್ಲಿ ಆರೋಪಿಗಳು ಸಾತೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಮೀಪವಿರುವ ಕೆನರಾ ಬ್ಯಾಂಕ್‌ನ ಕಿಟಕಿ ಮುರಿದು ಒಳನುಗ್ಗುವ ಪ್ರಯತ್ನದಲ್ಲಿದ್ದರು. ಆದರೆ, ಆ ವೇಳೆ ಗ್ರಾಮಸ್ಥರೊಬ್ಬರು ಜಮೀನಿಗೆ ತೆರಳಲೆಂದು ಸ್ಥಳಕ್ಕೆ ಬಂದರು. ಅನುಮಾನಗೊಂಡ ಅವರು, ಇನ್ನಷ್ಟು ಗ್ರಾಮಸ್ಥರನ್ನು ಒಟ್ಟುಗೂಡಿಸಿ ಆರೋಪಿಗಳನ್ನು ಹಿಡಿದು ಕಟ್ಟಿಹಾಕಿದರು. ನಂತರ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.
ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಗ್ರಾಮಸ್ಥರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *