ಬೆಳಗಾವಿ: ಡಾನ್ಸ್ ಕಾರ್ಯಕ್ರಮದಲ್ಲಿ ಮಾರಾಮಾರಿ

ಬೆಳಗಾವಿ: ಗೋಕಾಕ ತಾಲೂಕಿನ ಶಿಂಕುರಬೇಟ ಗ್ರಾಮದಲ್ಲಿ ಮಿಠ್ಠೇವಾಲಿ ಉರುಸ್ ಪ್ರಯುಕ್ತ ಗುರುವಾರ ಮಧ್ಯರಾತ್ರಿ ಏರ್ಪಡಿಸಿದ್ದ ಅಶ್ಲೀಲ ನೃತ್ಯ ನೋಡಲು ಬಂದಿದ್ದ ಯುವಕರ ಮಧ್ಯೆ ಮಾರಾಮಾರಿ ನಡೆದಿದ್ದು, ಹರಿತವಾದ ಆಯುಧದಿಂದ ಹಲ್ಲೆ ನಡೆದು ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಪ್ರತಿವರ್ಷ ನೃತ್ಯ ನಡೆಯುತ್ತಿದ್ದು, ತೃತೀಯ ಲಿಂಗಿಗಳ ಡಾನ್ಸ್ ಸಹ ಇಲ್ಲಿ ನಡೆಯುತ್ತದೆ. ನೃತ್ಯ ನೋಡಲು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ. ಈ ವರ್ಷವೂ ನೃತ್ಯ ಏರ್ಪಡಿಸಲಾಗಿತ್ತು. ರಾತ್ರಿ 12 ಗಂಟೆಗೆ ಆರಂಭವಾಗುವ ನೃತ್ಯ ಬೆಳಗಿನ ಜಾವ 3 ಗಂಟೆವರೆಗೆ ನಡೆಯುತ್ತದೆ. ಇಲ್ಲಿ ಪೊಲೀಸರು ಉಪಸ್ಥಿತರಿರುತ್ತಾರೆ. ಮದ್ಯ ಸರಬರಾಜು ಸುತ್ತಲಿನ ಬಾರ್‌ಗಳಲ್ಲಿ ಯಥೇಚ್ಛವಾಗಿರುತ್ತದೆ.

ಶುಕ್ರವಾರ ಬೆಳಗಿನ ಜಾವ ನೃತ್ಯ ತಾರಕಕ್ಕೇರಿ ಯುವಕರ ಮಧ್ಯೆ ವಾಗ್ವಾದ ನಡೆದು ಮಾರಕಾಸದಿಂದ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಓರ್ವ ಯುವಕನ ತಲೆಗೆ ಪೆಟ್ಟಾಗಿದೆ. ಪೊಲೀಸರು ಅಲ್ಲೇ ಇದ್ದರೂ ಆರೋಪಿಗಳು ಅವರಿಗೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಯ ದೃಶ್ಯಗಳು ಹರಿದಾಡುತ್ತಿವೆ.

ಗೋಕಾಕ ತಾಪಂ ಸಭಾಭವನದಲ್ಲಿ ಬುಧವಾರವಷ್ಟೇ ಡಿಎಸ್‌ಪಿ ಡಿ.ಟಿ.ಪ್ರಭು ಅವರು, ಗಣೇಶ ಹಬ್ಬ ಸರಳವಾಗಿ ಆಚರಿಸುವ ಕುರಿತು ಭಾಷಣ ಮಾಡಿ ನೆರೆ ಸಂತ್ರಸ್ತರಿಗೆ ನೆರವಾಗೋಣ ಎಂದಿದ್ದರು. ಆದರೆ, ಮರುದಿನವೇ ಈ ರೀತಿ ಕಾನೂನುಬಾಹಿರ ಕೃತ್ಯ ಬಹಿರಂಗವಾಗಿದೆ. ಘಟಪ್ರಭಾ ಪೊಲೀಸರ ಉಪಸ್ಥಿತಿ ಇದ್ದರೂ ಅಶ್ಲೀಲ ನೃತ್ಯ, ಯುವಕರ ಗುಂಪುಗಳ ಮಾರಾಮಾರಿ ನಡೆದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಷ್ಟೆಲ್ಲ ಆದರೂ ಪ್ರಕರಣ ದಾಖಲಾಗಿಲ್ಲ.

ರಾಗ ಬದಲಿಸಿದ ಪಿಎಸ್‌ಐ: ಶಿಂಕುರಬೇಟ ಗ್ರಾಮದಲ್ಲಿ ನಡೆದಿರುವ ಅಶ್ಲೀಲ ನೃತ್ಯಕ್ಕೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಗೂ ಪಿಎಸ್‌ಐ ಸಾಕ್ಷಿಯಾಗಿದ್ದರು. ತಡರಾತ್ರಿ ನಡೆದ ಗಲಾಟೆಯಲ್ಲಿ ಓರ್ವ ಇರಿತದಿಂದಾಗಿ ಗಾಯಗೊಂಡಿದ್ದರೂ ಪೊಲೀಸರಿಗೆ ಹೇಗೆ ಗೊತ್ತಾಗಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಪೊಲೀಸರ ಸರ್ಪಗಾವಲಿನಲ್ಲಿಯೆ ಈ ಗಲಾಟೆ ನಡೆದಿದ್ದರೂ ಪ್ರಕರಣ ಮುಚ್ಚಿ ಹಾಕಲು ಪಿಎಸ್‌ಐ ರಾಗ ಬದಲಿಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ಪಡೆಯಲು ಪಿಎಸ್‌ಐ ಅವರನ್ನು ಸಂಪರ್ಕಿಸಿದಾಗ, ಅದು ದನದ ರಕ್ತವೋ ಅಥವಾ ಮನುಷ್ಯರ ರಕ್ತವೋ ಎಂಬುವುದು ಗೊತ್ತಾಗುತ್ತಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಲಕ್ಷ್ಮಣ ನಿಂಬರಗಿ ಅವರನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *