Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಎಲ್ಲೆಡೆ ಜಲಾಶಯಗಳು ಭರ್ತಿ, ಕೆಲವೆಡೆ ಪ್ರವಾಹ ಭೀತಿ

Friday, 20.07.2018, 3:03 AM       No Comments

ಬೆಂಗಳೂರು: ಉತ್ತಮ ಮಳೆಯಿಂದಾಗಿ ಈ ಬಾರಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕೆಲ ಡ್ಯಾಂಗಳಿಂದ ಅಪಾರ ಪ್ರಮಾಣದಲ್ಲಿ ನದಿಗಳಿಗೆ ನೀರು ಬಿಡಲಾಗಿದ್ದು, ಅಕ್ಕಪಕ್ಕದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಹಾರಂಗಿ ಜಲಾಶಯಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ದಂಪತಿ ಗುರುವಾರ ಬಾಗಿನ ಅರ್ಪಿಸಿದರು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಾಥ್ ನೀಡಿದರು. ಕೃಷ್ಣರಾಜಸಾಗರ, ಕಬಿನಿ ಅಣೆಕಟ್ಟೆಗಳು ಭರ್ತಿ ಹಿನ್ನೆಲೆಯಲ್ಲಿ ಸಿಎಂ ಶುಕ್ರವಾರ ಬಾಗಿನ ಅರ್ಪಿಸಲಿದ್ದಾರೆ. 124.80 ಅಡಿ ಗರಿಷ್ಠ ಮಟ್ಟದ ಕೆಆರ್​ಎಸ್ ಅಣೆಕಟ್ಟೆಯ ನೀರಿನ ಮಟ್ಟ ಗುರುವಾರ ಸಂಜೆ ವೇಳೆಗೆ 124.30 ಅಡಿ ತಲುಪಿದ್ದು, ಭರ್ತಿಗೆ ಅರ್ಧ ಅಡಿ ಅಷ್ಟೇ ಬಾಕಿ ಉಳಿದಿದೆ. ಯಾದಗಿರಿ ಜಿಲ್ಲೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಹರಿಸಿದ ನೀರು ಕೃಷ್ಣಾ ನದಿಯಲ್ಲಿ ಪ್ರವಾಹ ಸೃಷ್ಟಿಸಿದ್ದು, ಪ್ರವಾಸಿ ಸ್ಥಳ ಶ್ರೀ ಛಾಯಾ ಭಗವತಿ ದೇವಸ್ಥಾನದ ಗರ್ಭಗುಡಿ ಪ್ರವೇಶಕ್ಕೆ ಐದು ಮೆಟ್ಟಲುಗಳಷ್ಟೇ ಬಾಕಿ ಉಳಿದಿವೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಡದರಗಡ್ಡಿ, ಯರಗೋಡಿ, ಹಂಚಿನಾಳ, ಯಳಗುಂದಿ ಗ್ರಾಮಗಳು ನಡುಗಡ್ಡೆಗಳಾಗಿವೆ.

ಆತಂಕದಲ್ಲಿ ಗ್ರಾಮಸ್ಥರು

ಆಲಮಟ್ಟಿ ಜಲಾಶಯದಿಂದ 1,73,718 ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಜಲಾಶಯ ಹಿನ್ನೀರಿನಿಂದ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಮುಂದಿನ ಕೃಷ್ಣಾ ನದಿಯ ಒಡಲು ಸಂಪೂರ್ಣ ತುಂಬಿಕೊಂಡು ಸಂಗಮನಾಥನ ಸನ್ನಿಧಿ ತಲುಪಲು 6 ಮೆಟ್ಟುಲು ಬಾಕಿ ಇವೆ. ಕೃಷ್ಣಾ ಹಾಗೂ ಮಲಪ್ರಭಾ ನದಿಯ ದಡದ ತುರಡಗಿ, ಕಟಗೂರ, ಕೆಂಗಲ್ಲ, ಕಜಗಲ್ಲ, ಹೂವನೂರ, ನಂದನೂರ, ಬಿಸನಾಳಕೊಪ್ಪ ಮತ್ತಿತರ ಗ್ರಾಮದ ಜನರು, ರೈತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ.

ಹಂಪಿ ಸ್ಮಾರಕಗಳು ಮುಳುಗಡೆ

ತುಂಗಭದ್ರಾ ಜಲಾಶಯದಿಂದ 21 ಕ್ರಸ್ಟ್​ಗೇಟ್​ಗಳ ಮೂಲಕ 43 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದ್ದು, ಬಳ್ಳಾರಿಯ ಹಂಪಿಯ ಪಿತೃಪ್ರಧಾನ ಮಂಟಪ ಮತ್ತು ಪುರಂದರದಾಸರ ಮಂಟಪ ನೀರಲ್ಲಿ ಸಂಪೂರ್ಣ ಮುಳುಗಿವೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಸೇರಿ ಇತರ ಊರುಗಳಿಗೆ ತೆರಳುವವರಿಗೆ ಆಸರೆಯಾಗಿದ್ದ ಬೋಟ್​ಗಳ ಸಂಚಾರ ಸ್ಥಗಿತೊಳಿಸಿದ್ದರಿಂದ ಸಂಪರ್ಕ ಕಡಿತವಾಗಿದೆ. ಆನೆಗೊಂದಿ ಬಳಿ 64 ಕಂಬಗಳ ಶಿಲಾಮಂಟಪ ಭಾಗಶಃ ಜಲಾವೃತಗೊಂಡಿದೆ. ರೆಸ್ಟೋರೆಂಟ್​ನಲ್ಲಿ ವಾಸವಿರುವ ವಿದೇಶಿಗರು ಅತಂತ್ರರಾಗಿದ್ದಾರೆ.

ಮಹಾ ಡ್ಯಾಂಗಳು ಭರ್ತಿ: ಮಹಾರಾಷ್ಟ್ರದ ಪ್ರಮುಖ ಜಲಾಶಯಗಳು ಭರ್ತಿಯಾಗಲು ಕ್ಷಣ ಗಣನೆ ಆರಂಭವಾಗಿದ್ದು, ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕಿನ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಕುಡಚಿ ಮುಖ್ಯ ಸೇತುವೆ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ.

ಸಿಎಂ ಜತೆ ಫತಾಹ್ ಚರ್ಚೆ

ಕೊಡಗಿನ ಸಂಕಷ್ಟದ ಕುರಿತು ವಿಡಿಯೋ ಮಾಡಿ ಗಮನ ಸೆಳೆದಿದ್ದ ಎಮ್ಮೆಮಾಡು ಗ್ರಾಮದ 8ನೇ ತರಗತಿ ವಿದ್ಯಾರ್ಥಿ ಫತಾಹ್ ಗುರುವಾರ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ. ನಿನ್ನ ಜಿಲ್ಲೆಗೆ ಏನು ಬೇಕು ಕೇಳು, ಎಲ್ಲವನ್ನೂ ಈಡೇರಿಸುತ್ತೇನೆ ಎಂದು ಸಿಎಂ ಕೇಳಿದರು. ಭಾಗಮಂಡಲಕ್ಕೆ ಶುಕ್ರವಾರ ಭೇಟಿ ನೀಡುವಾಗ ನಮ್ಮೂರಿಗೆ ಆಗಮಿಸಿ ಎಂದು ಆಹ್ವಾನ ನೀಡಿದ. ಅಲ್ಲದೆ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸಿದ.

ಮಳೆಯಿಂದ ಹಾನಿಗೀಡಾಗಿರುವ ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ಮೊದಲ ಕಂತಿನಲ್ಲಿ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದೆಂದು ಸಿಎಂ ಘೊಷಿಸಿದರು.

ತುಂಗಭದ್ರೆಗೆ ಸಿಎಂರಿಂದ ಬಾಗಿನ ಭಾಗ್ಯವಿಲ್ಲ

ಕಾವೇರಿ ಕಣಿವೆಯ ಜಲಾಶಯಗಳು ಭರ್ತಿಯಾದಾಗ ರಾಜ್ಯದ ಬಹುತೇಕ ಸಿಎಂಗಳು ಬಾಗಿನ ಸಮರ್ಪಿಸಿದ್ದಾರೆ. ಆದರೆ, ತುಂಗಭದ್ರಾ ಜಲಾಶಯಕ್ಕೆ ಈವರೆಗೆ ಯಾವೊಬ್ಬ ಮುಖ್ಯಮಂತ್ರಿಯೂ ಬಾಗಿನ ಅರ್ಪಿಸಿಲ್ಲ. ಬಳ್ಳಾರಿ ಜಿಲ್ಲೆಯವರೇ ಆದ ಎಂ.ಪಿ.ಪ್ರಕಾಶ್ ಡಿಸಿಎಂ ಆಗಿದ್ದಾಗ ಬಾಗಿನ ಅರ್ಪಿಸಿದ್ದರು.

Leave a Reply

Your email address will not be published. Required fields are marked *

Back To Top