ಕಿಂಡಿ ಅಣೆಕಟ್ಟು ಸಮಸ್ಯೆಯ ತಪ್ಪಲು

>>

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
11 ವರ್ಷದ ಹಿಂದೆ 12 ಕೋಟಿ ರೂ. ಸುರಿದು ನಿರ್ಮಿಸಿದ ಕಿಂಡಿ ಅಣೆಕಟ್ಟು ರೈತರಿಗೆ, ಕುಡಿಯುವ ನೀರಿಗೆ, ಕಪ್ಪೆಚಿಪ್ಪು ಆಯುವ ಮಹಿಳೆಯರಿಗೆ ನೆರವು ನಿಡುವ ಬದಲು ಸಮಸ್ಯೆ ತಂದೊಡ್ಡುತ್ತಿದೆ. ಈ ಅಣೆಕಟ್ಟು ಕೃಷಿ ಭೂಮಿಗೆ ನೀರುಣಿಸಲಿಲ್ಲ. ಬಾವಿಯಲ್ಲಿ ನೀರಿನ ಮಟ್ಟ ಏರಿಕೆಯಾದರೂ ನೀರು ಮಾತ್ರ ಉಪ್ಪುಪ್ಪು!
ಜನಸಾಮಾನ್ಯರ ಅನುಕೂಲಕ್ಕೆ ಸರ್ಕಾರಗಳು ಜಾರಿಗೆ ತರುವ ಯೋಜನೆಗಳು ಹೇಗೆ ನಿಷ್ಪ್ರಯೋಜಕ ಆಗುತ್ತವೆ ಎಂಬುದಕ್ಕೆ ತೊಪ್ಲು ಕಿಂಡಿ ಅಣೆಕಟ್ಟು ನಿದರ್ಶನ. ಅಣೆಕಟ್ಟು ಆಗುವುದಕ್ಕೆ ಮೊದಲು ಕೃಷಿ ಭೂಮಿ ಹಾಳಾಗಿರಲಿಲ್ಲ. ಬಾವಿ ನೀರು ಲವಣವಾಗಿರಲಿಲ್ಲ. ಅಣೆಕಟ್ಟು ಆದಂದಿನಿಂದ ಪರಿಸರದ ಜನರಿಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು!

ಕುಡಿಯಲು, ಕೃಷಿಗೆ ಕಿಂಡಿ ಅಣೆಕಟ್ಟು ನೀರು ಕೊಡದಿದ್ದರೂ ಪ್ರತಿವರ್ಷ ಅಣೆಕಟ್ಟಿಗೆ ಹಲಗೆ ಹಾಕಿ ತೆಗೆಯುವ ಕೆಲಸಕ್ಕೆ ಸಣ್ಣ ನೀರಾವರಿ ಇಲಾಖೆ ಲಕ್ಷ ಲಕ್ಷ ಅನುದಾನ ಖರ್ಚು ಮಾಡುತ್ತಿದೆ. ಹಲಗೆ ಹಾಕಿ ತೆಗೆಯುವುದರಲ್ಲೂ ರಾಜಕೀಯ. ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆಯಿಡುವ ಕೋಳಿ.

ಕಿಂಡಿ ಅಣೆಕಟ್ಟು ಒಳಗೆ ಉಪ್ಪು ನೀರು ನುಗ್ಗುವ ಮೊದಲು ಹಲಗೆ ಹಾಕಬೇಕು. ಆದರೆ ಉಪ್ಪು ನೀರು ಮೇಲಕ್ಕೆ ಹೋದ ಅನಂತರ ಹಲಗೆ ಹಾಕಲಾಗುತ್ತಿದೆ. ಹಲಗೆ ಹಾಕಿ ಎರಡೂ ಸಂದಿನಲ್ಲಿ ಮಣ್ಣು ತುಂಬಿ ನೀರು ಮೇಲಕ್ಕೆ ಹೋಗದಂತೆ ತಡೆಯಬೇಕಿದ್ದರೂ ಇಲ್ಲಿ ಸರಾಗ ನೀರು ಮೇಲಕ್ಕೆ ಹೋಗುತ್ತದೆ. ಇದರಿಂದ ಸಿಹಿ ನೀರು ಸಂಗ್ರಹದ ಹೊಳೆ ನೀರೆಲ್ಲ ಉಪ್ಪು. ಹೊಳೆ ನೀರು ಉಪ್ಪಾಗುವುದರಿಂದ ಪರಿಸರದ ಬಾವಿಗಳ ನೀರು ಕೂಡ ಉಪ್ಪಾಗಿ ಕುಡಿಯಲು ಗ್ರಾಮ ಪಂಚಾಯಿತಿ ನೀರು ಪೂರೈಕೆ ಮಾಡುವಂತಾಗಿದೆ. ಒಟ್ಟಾರೆ ಸರ್ಕಾರದ ಯೋಜನೆಗಳು ಜನರು ಸಂಕಷ್ಟ ಪರಿಹರಿಸುವ ಬದಲು ಯಾರನ್ನೋ ಉದ್ಧಾರ ಮಾಡಲು ಬಳಕೆ ಮಾಡುವಂತಿದೆ.

ಮಹಿಳೆಯರು ಬದುಕೂ ಕಷ್ಟ
ತೊಪ್ಲು ಕಿಂಡಿ ಅಣೆಕಟ್ಟಿಂದ ಕಪ್ಪೆಚಿಪ್ಪು (ಮಳಿ) ಆಯ್ದು ಬದುಕು ಕಟ್ಟಿಕೊಳ್ಳುತ್ತಿದ ಮಹಿಳೆಯರ ಬದುಕೂ ಕಷ್ಟವಾಗಿದೆ. ಹಕ್ಲಾಡಿ ಹಾಗೂ ಇತರ ಗ್ರಾಮಗಳ ಮೀನುಗಾರ ಮಹಿಳೆಯರು ಚಕ್ರಾ ನದಿ ಇಳಿತ ಸಂದರ್ಭ ಮಳಿ ಆಯ್ದು ಅದರಿಂದ ಆದಾಯ ಕಂಡುಕೊಳ್ಳುತ್ತಿದ್ದರು. ಕಿಂಡಿ ಅಣೆಕಟ್ಟು ನಿರ್ಮಾಣ ಅನಂತರ ಮಳಿ ಆಯುವವರೇ ಹೊಳೆಯಲ್ಲಿ ಕಾಣಸಿಗುವುದಿಲ್ಲ. ಅಣೆಕಟ್ಟಿನ ಮೇಲ್ಭಾಗ ನೀರಿನ ಇಳಿತವಿಲ್ಲದಿರುವುದು ಮಳಿ ಆಯಲು ಆಗದ ಪರಿಸ್ಥಿತಿ. ಈ ಸ್ಥಿತಿ ಕೇವಲ ತೊಪ್ಲು ಕಿಂಡಿ ಅಣೆಕಟ್ಟಿಗೆ ಸೀಮಿತವಾಗಿಲ್ಲ. ಬಂಟ್ವಾಡಿ ಕಿಂಡಿ ಅಣೆಕಟ್ಟಿನಲ್ಲೂ ಇಂಥದ್ದೇ ಸ್ಥಿತಿ ಇದೆ. ಒಟ್ಟಾರೆ ಕಿಂಡಿ ಅಣೆಕಟ್ಟು ಸಾಂಪ್ರದಾಯಕವಾಗಿ ಮಳಿ ಹೆಕ್ಕುತ್ತಿದ್ದ ಮಹಿಳೆಯರ ಜೀವನವನ್ನೇ ಕಿತ್ತುಕೊಂಡಿದೆ.

ಸಣ್ಣ ನೀರಾವರಿ ಇಲಾಖೆಗೆ ರೈತರ ಹಿತಾಸಕ್ತಿಗಿಂತ ಗುತ್ತಿಗೆದಾರರ ಹಿತಾಸಕ್ತಿಯೇ ಮುಖ್ಯವಾದಂತಿದೆ. ಈ ಪ್ರದೇಶಕ್ಕೆ ಭೇಟಿ ಕೂಡ ನೀಡುವುದಿಲ್ಲ. ಸಂಪೂರ್ಣ ಹಲಗೆ ವ್ಯವಸ್ಥೆ ಮಾಡಿ, ಅನಂತರ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಬೇಕಿತ್ತು. ಸಣ್ಣ ನೀರಾವರಿ ಇಲಾಖೆ ಕಿಂಡಿ ಅಣೆಕಟ್ಟು ಸಮಸ್ಯೆ ಸರಿಪಡಿಸಿಕೊಡುವುದು ಎಂದು? ಮೀನು ಹಿಡಿಯುವವರು ಹಲಗೆ ತೆಗೆದು ಮೀನು ಹಿಡಿಯುವ ಚಟ ಬಿಡದಿದ್ದರೆ, ಕೃಷಕರನ್ನು ದೇವರೂ ಕಾಪಾಡುವುದಿಲ್ಲ.
– ಸುರೇಂದ್ರ ಪೂಜಾರಿ, ಆರ್‌ಟಿಐ ಕಾರ್ಯಕರ್ತ, ತೊಪ್ಲು

ತೊಪ್ಲು ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನೂರಾರು ಎಕರೆ ಕೃಷಿ ಭೂಮಿಗೆ ನೀರು ಪೂರೈಕೆ ಆಗುವ ಜತೆಗೆ ಪರಿಸರದ ಬಾವಿಗಳಲ್ಲಿ ಜಲಮಟ್ಟ ಏರಿಕೆಯಾಗಿ ಸಮಸ್ಯೆ ಪರಿಹಾರ ಆಗಲಿದೆ ಎಂದು ಕೇಳಿ ಖುಷಿಪಟ್ಟಿದ್ದು, ಈಗ ಅದೆಲ್ಲವೂ ನೀರಿನ ಮೇಲಿನ ಗುಳ್ಳೆಯಂತೆ ಒಡೆದು ಹೋಗಿದೆ. ಮನೆ ಪಕ್ಕದಲ್ಲಿ ಚಕ್ರಾ ನದಿ ಹರಿಯುತ್ತಿದ್ದು, ಹೊಳೆಯಲ್ಲಿ ಯಥೆಚ್ಛ ನೀರಿದ್ದರೂ ಕುಡಿಯಲು ಸಾಧ್ಯವಾಗದು. ಸಮಸ್ಯೆ ಬಗ್ಗೆ ಸಣ್ಣ ನೀರಾವರಿ ಇಲಾಖೆ, ಜನಪ್ರತಿನಿಧಿಗಳಿಗೆ, ಗ್ರಾಮ ಪಂಚಾಯಿತಿಗೂ ಮನವಿ ಮಾಡಿದ್ದರೂ ಪ್ರಯೋಜನವಿಲ್ಲ.
– ನಾಗೇಶ್, ತೊಪ್ಲು ನಿವಾಸಿ

ಉಪ್ಪು ನೀರು ಮೇಲೆ ಬರುವ ಮೊದಲು ಹಲಗೆ ಹಾಕಿದರೆ ಈ ಸಮಸ್ಯೆ ಬರುತ್ತಿರಲಿಲ್ಲವೋ ಏನೋ.. ಉಪ್ಪು ನೀರು ಮೇಲೆ ನುಗ್ಗಿದ ಅನಂತರ ಹಲಗೆ ಹಾಕುವುದರಿಂದ ಇಡೀ ಹೊಳೆ ನೀರು ಉಪ್ಪಾಗಿ ಬಾವಿ ನೀರು ಕೂಡ ಹಾಳಾಗಿ ಬಟ್ಟೆ ತೊಳೆಯಲೂ ಆಗುತ್ತಿಲ್ಲ. ಕಿಂಡಿ ಅಣೆಕಟ್ಟು ಕಟ್ಟುವ ಮೊದಲು ನಮ್ಮ ಬಾವಿಗಳಲ್ಲಿ ನೀರು ಕಡಿಮೆ ಇದ್ದರೂ ಕುಡಿಯುವುದಕ್ಕೆ ಸಿಗುತ್ತಿತ್ತು. ಈಗ ಬಾವಿ ನೀರಿನ ಮಟ್ಟ ಏರಿಕೆಯಾದರೂ ನೀರು ಮಾತ್ರ ಲವಣ ಮಿಶ್ರಿತ. ನಾವೀಗ ಕುಡಿಯುವ ನೀರಿಗಾಗಿ ಅಲೆಯಬೇಕು.
– ಸರೋಜಾ, ಗೃಹಿಣಿ, ತೊಪ್ಲು

Leave a Reply

Your email address will not be published. Required fields are marked *