ಅತಿವೃಷ್ಟಿಯಿಂದ ಅಂಗಮಾರಿಗೆ ಚಿಕ್ಕಮಗಳೂರಲ್ಲಿ ಬೆಳೆದ ಆಲೂಗಡ್ಡೆ ನಾಶ

ಚಿಕ್ಕಮಗಳೂರು:ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ವಿವಿಧೆಡೆ ಆಲೂಗಡ್ಡೆಗೆ ಅಂಗಮಾರಿ ರೋಗ ತಗುಲಿ ಬೆಳೆ ನಾಶವಾಗಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮೂರು ತಿಂಗಳ ಹಿಂದೆ ಮುಂಗಾರು ಮಳೆ ಕ್ಷೀಣಿಸಿ ನೀರಿಲ್ಲದೆ ಕೆಲವು ಬೆಳೆಗಳು ಒಣಗಿ ಹೋಗಿದ್ದು. ತಡವಾಗಿ ಹಿಡಿದ ಮಳೆಯಿಂದ ಆಲೂಗೆಡ್ಡೆ ಬೆಳೆ ಶೀತ ಹಿಡಿದು ಗೋಲಿ ಗಾತ್ರದಲ್ಲಿ ಇಳುವರಿ ಬಂದ ಕಾರಣ ಕೆಲವು ರೈತರು ಹೊಲವನ್ನು ಹಾಳು ಬಿಟ್ಟಿದ್ದಾರೆ.

ತಾಲೂಕಿನ ಬೀಕನಹಳ್ಳಿ, ಹಂಪಾಪುರ, ಕುಪ್ಪೇನಹಳ್ಳಿ, ಕೆಂಪನಹಳ್ಳಿ, ಐನಳ್ಳಿ, ರ್ಕಪೇಟೆ, ಬಾಳೆಹಳ್ಳಿ ಸೇರಿ ವಿವಿಧೆಡೆ ಲಕ್ಷಾಂತರ ರೂ. ಸಾಲ ಮಾಡಿ ಬಂಡವಾಳ ಹಾಕಿ ಬೆಳೆ ಬೆಳೆಸಿದ್ದ ರೈತರಿಗೆ ನಿರಂತರ ಮಳೆಯಿಂದ ನಿರಾಸೆಯಾಗಿದೆ. ಬಿ.ಎಚ್.ಕುಮಾರ್, ಪುಟ್ಟಬಸಪ್ಪ, ಸೋಮೇಗೌಡ, ಗುರುಬಸಪ್ಪ, ಆನಂದ್, ರುದ್ರಪ್ಪ, ಈಶಣ್ಣ ಸೇರಿ ನೂರಾರು ರೈತರು ಆಲೂಗೆಡ್ಡೆ ಬೆಳೆದಿದ್ದಾರೆ.

ಮೇ, ಜೂನ್​ನಲ್ಲಿ ಮುಂಗಾರು ಆರಂಭದ ಭರವಸೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿ ತಿಂಗಳು ಕಳೆದರೂ ಬಾರದ ಮಳೆ ನಂತರ ಫಸಲು ಬರುವ ಸಂದರ್ಭದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಅಂಗಮಾರಿ ರೋಗಕ್ಕೆ ಗುರಿಯಾಗಿದೆ. ಶೀತ ಹೆಚ್ಚಾಗಿದ್ದರಿಂದ ಆಲೂಗೆಡ್ಡೆಗಳು ಗೋಲಿ ಗಾತ್ರಕ್ಕೆ ಇಳಿದಿವೆ.

ರೈತರು ಹೇಳುವಂತೆ ಐವತ್ತು ಕೆ.ಜಿ. ಆಲೂಗಡ್ಡೆ, ಐದು ಚೀಲ ಗೊಬ್ಬರ, ಸ್ಪ್ರೇಯರ್, ಆಳುಗಳು ಸೇರಿ ಎಕರೆಗೆ 15 ಸಾವಿರ ರೂ. ಬಂಡವಾಳ ಹೂಡಲಾಗಿತ್ತು. ಒಂದು ಎಕರೆಯಿಂದ ಐದಾರು ಎಕರೆವರೆಗೆ ರೈತರು ಆಲೂಗೆಡ್ಡೆ ಬೆಳೆದು ಫಸಲಿಗೆ ಕಾದಿದ್ದವರಿಗೆ ನಿರಾಸೆ ಕಾಡುತ್ತಿದೆ.

ಹಲವರಿಗೆ ಹಾಕಿದ ಬಂಡವಾಳವೂ ದಕ್ಕದ ರೀತಿಯಲ್ಲಿ ಶೀತಕ್ಕೆ ಬೆಳೆ ನೆಲಕಚ್ಚಿದೆ. ಬೀಜ, ಗೊಬ್ಬರದ ಹಣ ಸಹ ಹಿಂತಿರುಗಿ ಬಾರದೆ ಗುಣಮಟ್ಟವೂ ಇಲ್ಲದೆ ಬೆಳೆ ಬಂದಿದೆ. ಪ್ರತಿ ಎಕರೆಗೆ ಐವತ್ತು ಕ್ವಿಂಟಾಲ್ ಆಲೂಗೆಡ್ಡೆ ಬೆಳೆ ನಿರೀಕ್ಷಿಸಿ ಬಂಡವಾಳ ಹೂಡಿದ್ದ ರೈತರಿಗೆ ಹತ್ತು ಕ್ವಿಂಟಾಲ್ ಬೆಳೆ ಕೈಸೇರಿ ಉಳಿದಂತೆ ಶೇ.90 ರಷ್ಟು ಬೆಳೆ ಹಾನಿಯಾಗಿದೆ. ಗೋಲಿ ಗಾತ್ರದ ಆಲೂ ಗೆಡ್ಡೆ ಚೀಲಕ್ಕೆ 50 ರೂ. ಬೆಲೆ ಬಾಳುತ್ತಿದ್ದು, ರೈತರು ಬೆಳೆಹಾನಿಯ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಬೆಳೆದಿರುವುದು ಪಾರ್ಥೇನಿಯಂ: ಬೀಕನಹಳ್ಳಿ, ಕೆಂಪನಹಳ್ಳಿಯ ಭಾಗದ ಕೆಲವು ಹೊಲಗಳಲ್ಲಿ ಆಲೂಗಡ್ಡೆ ಅಂಗಮಾರಿ ರೋಗಕ್ಕೆ ತುತ್ತಾಗಿರುವುದರಿಂದ ಪಾರ್ಥೇನಿಯಂ ಗಿಡಗಳು ಹೊಲದ ತುಂಬೆಲ್ಲ ಆವರಿಸಿವೆೆ. ಆಲೂಗಡ್ಡೆ ಸೇರಿದಂತೆ ಬೀನ್ಸ್ ಮತ್ತು ಬಟಾಣಿ ಬೆಳೆದವರು ಸಹ ನಿರಾಸೆಗೊಂಡಿದ್ದು ಹೊಲದಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದೇ ತೋಚದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕೈಕೊಟ್ಟ ಬೀನ್ಸ್, ಹೀರೇಕಾಯಿ: ದಂಟರಮಕ್ಕಿ ಕೆರೆಗೆ ಹೊಂದಿಕೊಂಡಿರುವ ಈಶಣ್ಣ ಅವರ ಹೊಲದಲ್ಲಿ ಆರು ತಿಂಗಳ ಹಿಂದೆ ಸಹಸ್ರಾರು ರೂ. ಬಂಡವಾಳ ಹಾಕಿ ಬೆಳೆದಿದ್ದ ಹೀರೇಕಾಯಿ ಮಳೆ ಇಲ್ಲದೆ ಒಣಗಿದೆ. ಬಳಿಕ ಅದೇ ಚಳೆಗಳಿಗೆ ಹಬ್ಬಲು ಬೀನ್ಸ್ ಬೆಳೆಯಲಾಗಿತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಬೀನ್ಸ್ ಕೂಡ ನೆಲಕಚ್ಚಿದೆ.

Leave a Reply

Your email address will not be published. Required fields are marked *