ಬಿಸಿಲಿಗೆ ಡ್ಯಾಂ ನೀರ ಮಟ್ಟ ಇಳಿಕೆ

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆಯೇ ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆಯಾಗಲಾರಂಭಿಸಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ತಲೆದೋರದಂತೆ ಜಿಲ್ಲಾಡಳಿತ ತಕ್ಷಣದಂತೆ ಮುನ್ನೆಚ್ಚರಿಕೆ ವಹಿಸ ಬೇಕಾಗಿದೆ.

ಈ ಬಾರಿ ಡ್ಯಾಂನಲ್ಲಿ 6 ಮೀಟರ್ ಎತ್ತರಕ್ಕೆ ನೀರು ಸಂಗ್ರಹಣೆ ಮಾಡಲಾಗಿತ್ತು. ಫೆ.23ರಿಂದ ನೀರಿನ ಮಟ್ಟ ಇಳಿಕೆಯಾಗಲಾರಂಭಿಸಿದ್ದು, ಮಂಗಳವಾರ 5.6 ಮೀಟರ್ ದಾಖಲಾಗಿತ್ತು. ಇದೇ ವೇಳೆ ಶಂಭೂರಿನ ಎಎಂಆರ್ ಡ್ಯಾಂನಲ್ಲಿ 18.87 ಮೀಟರ್ ನೀರು ಸಂಗ್ರಹವಿದೆ. 2018ರ ಮಾ.5ರಂದು ತುಂಬೆ ಡ್ಯಾಂನಲ್ಲಿ 5.91 ಮೀಟರ್ ನೀರು ಸಂಗ್ರಹವಿದ್ದರೆ ಎಎಂಆರ್ ಡ್ಯಾಂನಲ್ಲಿ 18.62 ಮೀಟರ್ ನೀರು ಸಂಗ್ರಹಣೆ ಇತ್ತು.
2017ರಲ್ಲಿ ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ನೀರಿನ ಸಂಗ್ರಹ ಮಾಡಲಾಗಿತ್ತಾದರೂ ಮಾರ್ಚ್ 31ರಿಂದ ನೀರಿನ ಮಟ್ಟದಲ್ಲಿ ಇಳಿಕೆಯಾಗತೊಡಗಿತ್ತು. ಏಪ್ರಿಲ್ 24ಕ್ಕೆ 4.10 ಮೀಟರಿಗೆ ಇಳಿದಾಗ ಆತಂಕಗೊಂಡ ಮಂಗಳೂರು ಮಹಾನಗರ ಪಾಲಿಕೆ ರೇಷನಿಂಗ್ ವ್ಯವಸ್ಥೆ ಮೂಲಕ ಎರಡು ದಿನಕ್ಕೊಮ್ಮೆ ಮಂಗಳೂರಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಿ ಪರಿಸ್ಥಿತಿ ನಿಭಾಯಿಸಿತ್ತು. ಕಳೆದ ವರ್ಷ ಡ್ಯಾಂನಲ್ಲಿ 6 ಮೀಟರ್ ನೀರು ಸಂಗ್ರಹಣೆ ಮಾಡಲಾಗಿತ್ತು. ಏಪ್ರಿಲ್ 10ಕ್ಕೆ 4.48 ಮೀಟರ್ ನೀರಿನ ಸಂಗ್ರಹಣೆಯಿದ್ದು, ಅದುವೇ ಕನಿಷ್ಠ ಮಟ್ಟದ ನೀರಿನ ಸಂಗ್ರಹವಾಗಿತ್ತು.

ಮುಂಗಾರು ಪೂರ್ವ ಮಳೆಯಿಂದ ತುಂಬಿದ ನೀರು: ಅಚ್ಚರಿಯೆಂದರೆ, ಕಳೆದ ವರ್ಷ ಮುಂಗಾರು ಪೂರ್ವ ಮಳೆಯಿಂದಾಗಿ ಮಳೆಗಾಲಕ್ಕಿಂತಲೂ ಮೊದಲೇ ನದಿ ಭರ್ತಿಯಾಗಿ ಮೇ 21ಕ್ಕೆ ಮತ್ತೆ 6 ಮೀಟರ್ ನೀರು ಸಂಗ್ರಹಗೊಂಡು ಹೆಚ್ಚುವರಿ ನೀರು ಹೊರಗೆ ಬಿಡಲಾಗಿತ್ತು. ಇದರಿಂದ ಕುಡಿಯುವ ನೀರಿಗೆ ತತ್ವಾರ ಬಾರದೇ ಜನ ನೆಮ್ಮದಿಯಿಂದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಜಾಸ್ತಿ ನೀರಿನ ಮಟ್ಟ ಇಳಿಕೆಯಾಗಿದೆ. ಮೇಲ್ನೋಟಕ್ಕೆ ನದಿಯಲ್ಲಿ ನೀರು ತುಂಬಿ ಸಮೃದ್ಧವಾಗಿದ್ದರೂ ಬಿಸಿಲಿನ ತಾಪಕ್ಕೆ ಹಂತಹಂತವಾಗಿ ನೀರು ಕಡಿಮೆಯಾಗುತ್ತಿದೆ. ತಾಪಮಾನ ಏರಿಕೆಯಾದಂತೆ ನದಿಗೆ ಒಳ ಹರಿವು ನಿಲ್ಲಲಿದೆ. ಅಲ್ಲದೆ ತಾಲೂಕಿನಲ್ಲಿ ನೇತ್ರಾವತಿ ನದಿ ನೀರು ಅವಲಂಬಿಸಿಕೊಂಡು ಸಾಕಷ್ಟು ಯೋಜನೆಗಳು, ಕೈಗಾರಿಕೆಗಳು ಇರುವುದರಿಂದ ಎಷ್ಟು ನೀರು ಇದ್ದರೂ ಮುಂಗಾರು ಪೂರ್ವ ಮಳೆ ಬಾರದೇ ಹೋದರೆ ಬೇಸಿಗೆಯ ಕೊನೆ ಹಂತದಲ್ಲಿ ನೀರಿಗಾಗಿ ಪರಿತಪಿಸುವ ಸ್ಥಿತಿ ಒದಗಿ ಬರುವುದರಲ್ಲಿ ಸಂಶಯವಿಲ್ಲ.

ನೇತ್ರಾವತಿ ಅವಲಂಬಿಸಿರುವ ಯೋಜನೆಗಳು: ಮಂಗಳೂರು ನಗರದ ಜನ ನೀರಿಗಾಗಿ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯನ್ನು ಅವಲಂಬಿಸಿದರೆ ಈ ಜೀವನದಿಯನ್ನು ನಂಬಿಕೊಂಡು ಸಾಕಷ್ಟು ಯೋಜನೆಗಳು ಇಲ್ಲಿ ಕಾರ್ಯಗತಗೊಂಡಿವೆ. ಏತ ನೀರಾವರಿ ಯೋಜನೆಗೆ ನೇತ್ರಾವತಿ ಆಸರೆಯಾದರೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೇತ್ರಾವತಿಯೇ ದಿಕ್ಕು. ಶಂಭೂರಿನಲ್ಲಿರುವ ಎಎಂಆರ್ ಜಲ ವಿದ್ಯುತ್ ಉತ್ಪಾದನಾ ಕಂ ಪನಿಗೆ ನೇತ್ರಾವತಿಯೇ ಮೂಲ, ಸರಪಾಡಿಯಲ್ಲಿರುವ ಎಂಆರ್‌ಪಿಎಲ್, ಎಸ್‌ಈಝೆಡ್ ಕಂಪನಿಗಳು ನೇತ್ರಾವತಿಯನ್ನೇ ಆಶ್ರಯಿಸಿಕೊಂಡಿದೆ. ಜತೆಗೆ ನೇತ್ರಾವತಿ ನದಿ ಇಕ್ಕೆಲಗಳಲ್ಲಿರುವ ಹೆಕ್ಟೇರ್‌ಗಟ್ಟಲೆ ಕೃಷಿ ಭೂಮಿಗೆ ನೇತ್ರಾವತಿಯೇ ಜೀವನದಿ ನೇತ್ರಾವತಿ ಬರಿದಾದದರೆ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಅದನ್ನು ಅವಲಂಬಿಸಿರುವ ಈ ಎಲ್ಲ ಯೋಜನೆಗಳು, ಕಂಪನಿಗಳು ಕಾರ್ಯ ಸ್ಥಗಿತಗೊಳಿಸಬೇಕಾಗುತ್ತದೆ.