ಮೈಸೂರು: ರಾಜ್ಯದಲ್ಲಿ ಇದುವರೆಗೆ ಒಬ್ಬ ದಲಿತ ಸಹ ಮುಖ್ಯಮಂತ್ರಿಯಾಗದೆ ಇರುವುದು ಬೇಸರದ ವಿಚಾರ ಸಾಹಿತಿ ಕೆ.ಎಸ್. ಭಗವಾನ್ ಹೇಳಿದರು.
ಇನ್‌ಸ್ಪೈರ್ ಸಂಸ್ಥೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್. ಚಿಕ್ಕಸಾವಕ್ಕ ರಚನೆಯ ‘ಸಂವಿಧಾನ ಸಭೆ ವರ್ಸಸ್ ಅಂಬೇಡ್ಕರ್’ ನಾಲ್ಕು ಸಂಪುಟಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
‘ದೇಶದಲ್ಲಿ ನಾಲ್ಕು ವರ್ಣಗಳು ಪ್ರಸ್ತುತ ಅಸ್ತಿತ್ವದಲ್ಲಿ ಇಲ್ಲ. ಪ್ರಸ್ತುತ ಇರುವುದು ಬ್ರಾಹ್ಮಣ ಹಾಗೂ ಶೂದ್ರರು ಮಾತ್ರ. ಮುಂದೆ ಆಳ್ವಿಕೆ ನಡೆಸುವುದೇ ಶೂದ್ರರು’ ಎಂದು ಸ್ವಾಮಿ ವಿವೇಕಾನಂದರು ಭವಿಷ್ಯ ನುಡಿದಿದ್ದರು. ಅವರ ಮಾತಿನ ಪ್ರಕಾರ ದೇಶದ ಎಲ್ಲ ರಾಜ್ಯಗಳಲ್ಲೂ ಅಬ್ರಾಹ್ಮಣರು ಆಳ್ವಿಕೆ ನಡೆಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಇದುವರೆಗೆ ದಲಿತ ಮುಖ್ಯಮಂತ್ರಿಯಾಗದೆ ಇರುವ ಕೊರತೆ ಇದೆ. ರಾಜ್ಯದಲ್ಲಿ ಅನೇಕ ಸಮರ್ಥ ದಲಿತ ನಾಯಕರು ಇದ್ದರು, ಈಗಲೂ ಇದ್ದಾರೆ. ಆದರೆ, ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮನುಷ್ಯರೆಲ್ಲರೂ ಒಂದೇ ಎಂದು ಪ್ರಪಂಚದಲ್ಲಿ ಪ್ರಥಮ ಬಾರಿಗೆ ಹೇಳಿದವರು ಗೌತಮ ಬುದ್ಧ. ಅದನ್ನು ಆಚರಣೆಗೆ ತಂದವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್. ಅಂಬೇಡ್ಕರ್ ಕೇವಲ ದಲಿತರ ಪರವಾಗಿ ಮಾತ್ರ ಇರಲಿಲ್ಲ. ಅವರು ಸಂವಿಧಾನದ ಮೂಲಕ ಎಲ್ಲರಿಗೂ ನ್ಯಾಯ ಕೊಡಿಸಿದ್ದಾರೆ. ಮಹಿಳೆಯರಿಗೆ ಆಸ್ತಿ ಹಕ್ಕು ದೊರೆಯಲು ಅವರು ಹೋರಾಟ ನಡೆಸಿದ್ದರು ಎಂದು ಹೇಳಿದರು.
ಗಾಂಧೀಜಿ ಅವರನ್ನು ನಾನು ಒಪ್ಪುತ್ತೇನೆ, ಗೌರವಿಸುತ್ತೇನೆ. ಆದರೆ, ಅವರ ಎಲ್ಲ ವಿಚಾರಧಾರೆಗಳನ್ನು ಒಪ್ಪುವುದಿಲ್ಲ. ಗಾಂಧೀಜಿಗಿಂತ ಅಂಬೇಡ್ಕರ್ ದೊಡ್ಡವರು ಎಂದು ಲೇಖಕ ಎಸ್. ಚಿಕ್ಕಸಾವಕ್ಕ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ನಾನು ಸಹ ಈ ಮಾತನ್ನು ಒಪ್ಪುತ್ತೇನೆ. ಸ್ವಾತಂತ್ರೃ ಹೋರಾಟಕ್ಕೆ ಗಾಂಧೀಜಿ ಅವರ ಕೊಡುಗೆ ಅಪಾರವಾದದ್ದು. ಆದರೆ, ಅವರು ಸನಾತನ ಧರ್ಮವನ್ನು ಅನುಸರಿಸುತ್ತಿದ್ದರು. ರಾಮ ಹಾಗೂ ಭಗವದ್ಗೀತೆಯನ್ನು ಗಾಂಧಿ ಒಪ್ಪಿಕೊಂಡಿದ್ದರು. ಹೀಗಾಗಿ ಅವರ ಎಲ್ಲ ವಿಚಾರಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಲೇಖಕ ಎಸ್. ಚಿಕ್ಕಸಾವಕ್ಕ, ವಕೀಲ ಬಿ.ಆರ್. ರಂಗಸ್ವಾಮಿ, ರಂಗಕರ್ಮಿ ಸಿ.ಬಸವಲಿಂಗಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಮೇಯರ್ ಪುರುಷೋತ್ತಮ್, ಪತ್ರಕರ್ತ ಡಾ.ಆರ್. ಮೋಹನ್‌ರಾಜ್, ಸಾಹಿತಿ ಹೊರೆಯಾಲ ದೊರೆಸ್ವಾಮಿ ಇದ್ದರು.