ಬೆಂಗಳೂರು: ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ದಲಿತರನ್ನು ವೋಟ್ ಬ್ಯಾಂಕ್ನಂತೆ ಬಳಸಿಕೊಂಡು ವಂಚಿಸುತ್ತಲೇ ಬಂದಿದೆ. ಈಗಲೂ ಅಷ್ಟೇ ದಲಿತ ಮುಖ್ಯಮಂತ್ರಿ ಎನ್ನುವುದು ಚರ್ಚೆಗೆ ಸೀಮಿತವೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಸಿಎಂ ಆಗುವ ಅವಕಾಶವಿದ್ದಾಗ ಡಾ.ಜಿ.ಪರಮೇಶ್ವರರನ್ನು ಸೋಲಿಸಿ ಮೂಲೆಗುಂಪು ಮಾಡಿದರು. ಈಗ ಕಾಲಾವಧಿ ಇದೆಯಲ್ಲ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲೆಸೆದರು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಆಗಲಿ ಎಂಬ ಘೊಷಣೆಗಳು ಮೊಳಗಿವೆ. ಈ ವೇಳೆ ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯರನ್ನು ಅಪಮಾನಿಸಲಾಗಿದೆ. ಇದನ್ನು ಸಹಿಸಿಕೊಂಡು ಸಿದ್ದರಾಮಯ್ಯ ಹೇಗೆ ಸುಮ್ಮನಿದ್ದಾರೋ ತಿಳಿಯದು. ನಾನಾಗಿದ್ದರೆ ಒಂದು ಕ್ಷಣವೂ ಇರದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೆ ಎಂದು ಕಾಲೆಳೆದರು. ಸಿಎಂ ಆಗುವುದಕ್ಕೆ ಯೋಗದ ಜತೆಗೆ ಯೋಗ್ಯತೆಯು ಅಷ್ಟೇ ಮುಖ್ಯವೆಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಕುಟುಕಿದರು.