ದ.ಕ. ಜಿಪಂ ಗಾದಿ ಬದಲು ಚರ್ಚೆ

ವೇಣುವಿನೋದ್ ಕೆ.ಎಸ್. ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಐದು ವರ್ಷದ ಅವಧಿಯನ್ನು ಇಬ್ಬಿಬ್ಬರು ಹಂಚಿಕೊಳ್ಳುವ ಭಾರತೀಯ ಜನತಾ ಪಾರ್ಟಿಯ ತೀರ್ಮಾನ ಇನ್ನೂ ಪಾಲನೆಯಾಗಿಲ್ಲ.

ಮೊದಲ 30 ತಿಂಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರಾಗಿ ಪಾಣಾಜೆಯ ಮೀನಾಕ್ಷಿ ಶಾಂತಿಗೋಡು ಹಾಗೂ ಕಟೀಲಿನ ಕಸ್ತೂರಿ ಪಂಜ ಅವರನ್ನು ಆಯ್ಕೆ ಮಾಡಲಾಗಿತ್ತು. ಪಕ್ಷದ ಹಿರಿಯ ಮುಖಂಡರು ಚರ್ಚೆ ನಡೆಸಿ, ಈ ಆಯ್ಕೆ ಮಾಡಿದ್ದರು. ಅದರಂತೆ ಹಾಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಕಳೆದ 2018ರ ಅಕ್ಟೋಬರ್‌ಗೇ ಮುಗಿಯುತ್ತದೆ.
ಅಧ್ಯಕ್ಷರ ಅವಧಿ ಮುಗಿದು, ಈಗಾಗಲೇ 9 ತಿಂಗಳು ಕಳೆದಿದೆ. ಮುಂದಿನ ಅಧ್ಯಕ್ಷರಿಗೆ 21 ತಿಂಗಳ ಅವಧಿಯಷ್ಟೇ ಉಳಿಯುತ್ತದೆ. ಈ ವಿಚಾರದಲ್ಲಿ ಪಕ್ಷದ ಮುಖಂಡರು ಪ್ರಾರಂಭದಲ್ಲಿ ಸಭೆ ನಡೆಸಿದ್ದರೂ, ಆ ಬಳಿಕ ಸಂಸತ್ ಚುನಾವಣೆ ಬಂದಿದ್ದರಿಂದ ನಿರ್ಧಾರಕ್ಕೆ ಬರಲಾಗಲಿಲ್ಲ.

ಕಳೆದ ಜನವರಿ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆ ಸಂದರ್ಭದಲ್ಲಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಜಿ.ಪಂ.ನಲ್ಲಿ ಬಿಜೆಪಿ ಸದಸ್ಯರಿಂದಲೇ ಧ್ವನಿ ಕೇಳಿಬಂದಿತ್ತು. ಆಗ ಸಭೆಗೆ ಬಿಜೆಪಿ ಸದಸ್ಯರು, ಅಧ್ಯಕ್ಷೆ ತಡವಾಗಿ ಆಗಮಿಸಿದ್ದರು. ಅಧ್ಯಕ್ಷ ಉಪಾಧ್ಯಕ್ಷರ ಬದಲಾವಣೆ ಕುರಿತು ಸದಸ್ಯರ ನಡುವೆ ಸಾಕಷ್ಟು ಮಾತುಕತೆಯೂ ನಡೆದಿತ್ತು.

13ಕ್ಕೆ ದಿನ ನಿಗದಿಯಾಗಿತ್ತು:
ಕೆಲ ದಿನಗಳಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಬಿಜೆಪಿ ನಾಯಕರು ಸಮಾಲೋಚನೆ ನಡೆಸಿದ್ದಾರೆ, ಅದರಂತೆ ಹಾಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಜುಲೈ 13ರಂದೇ ರಾಜೀನಾಮೆ ನೀಡಲು ಸೂಚನೆಯನ್ನೂ ನೀಡಿದ್ದರು. ಆದರೆ ಇಬ್ಬರೂ ಇದುವರೆಗೆ ರಾಜೀನಾಮೆ ನೀಡಿಲ್ಲ.
ಪಕ್ಷದಿಂದ ಬಂದ ಸೂಚನೆಯನ್ನೇ ನಮ್ಮವರು ಪಾಲಿಸಿಲ್ಲ, ಇದೊಂದು ನಾಚಿಕೆಯ ವಿಚಾರ, ಪ್ರಾರಂಭದಲ್ಲೇ ತೀರ್ಮಾನಿಸಿದಂತೆ ಅಧಿಕಾರ ಬಿಟ್ಟುಕೊಡಬೇಕಿತ್ತು, ಮೊದಲು ಹೇಳಿದಂತೆ ಇತರರಿಗೂ ಅವಕಾಶ ಸಿಗಬೇಕಿತ್ತು ಎಂದು ಸದಸ್ಯರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ಹಿಂದಿನ ತೀರ್ಮಾನದಂತೆ ಮೊದಲ 30 ತಿಂಗಳಿಗೆ ಅಧ್ಯಕ್ಷೆಯಾಗಿ ಶಿರ್ತಾಡಿಯ ಸುಜಾತಾ ಅವರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಅಧ್ಯಕ್ಷೆ, ಉಪಾಧ್ಯಕ್ಷೆ(ಕಸ್ತೂರಿ ಪಂಜ) ಇಬ್ಬರೂ ಮೂಡುಬಿದಿರೆ ವಿಧಾನಸಭೆ ಕ್ಷೇತ್ರಕ್ಕೆ ಸೇರಿದವರಾಗುತ್ತಾರೆ ಎಂಬ ಕಾರಣಕ್ಕೆ ಮೀನಾಕ್ಷಿ ಶಾಂತಿಗೋಡು ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿತ್ತು.
ಮೊದಲ 30 ತಿಂಗಳಿಗೆ ಈ ವ್ಯವಸ್ಥೆ, ಆ ಬಳಿಕ ಅಧ್ಯಕ್ಷ ಸ್ಥಾನವನ್ನು ಸುಜಾತಾ ಅವರಿಗೆ ಬಿಟ್ಟುಕೊಡುವುದು, ಉಪಾಧ್ಯಕ್ಷರ ಸ್ಥಾನವನ್ನು ಇನ್ನೋರ್ವ ಸದಸ್ಯರಿಗೆ ನೀಡುವುದೆಂದು ತೀರ್ಮಾನಿಸಲಾಗಿತ್ತು.

ತಾಲೂಕು ಪಂಚಾಯಿತಿ ಹೇಗಿದೆ?
ಸುಳ್ಯ: ಸುಳ್ಯದಲ್ಲಿ ಮೀಸಲಾತಿ ಪ್ರಕಾರ ಅಧ್ಯಕ್ಷತೆಗೆ ಬೇರೆ ಅಭ್ಯರ್ಥಿ ಇಲ್ಲದ ಕಾರಣ ಚನಿಯ ಕಲ್ತಡ್ಕ ಅವರೇ ಐದು ವರ್ಷ ಮುಂದುವರಿದಿದ್ದಾರೆ. ಉಪಾಧ್ಯಕ್ಷೆಯಾಗಿರುವ ಶುಭದಾ ಎಸ್. ರೈ ಅವರನ್ನೂ ಬದಲಾವಣೆ ಮಾಡಿಲ್ಲ.
ಪುತ್ತೂರು: ತಾಪಂ ಅಧ್ಯಕ್ಷರಾಗಿದ್ದ ಭವಾನಿ ಚಿದಾನಂದ ಕಳೆದ ವರ್ಷ ನ.22ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಡಿ.27ರಂದು ಮುಂದಿನ 30 ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ಬೋರ್ಕರ್ ಅಧಿಕಾರ ವಹಿಸಿಕೊಂಡಿದ್ದಾರೆ. ಉಪಾಧ್ಯಕ್ಷರ ಬದಲಾವಣೆಯೂ ಆಗಿದ್ದು, ರಾಜೇಶ್ವರಿ ರಾಜಿನಾಮೆ ಬಳಿಕ ಜುಲೈ 16ರಂದು ಲಲಿತಾ ಈಶ್ವರ್ ಆಯ್ಕೆಯಾದರು.
ಬೆಳ್ತಂಗಡಿ: ಅತ್ಯಧಿಕ ಸ್ಥಾನಗಳನ್ನು ಬಿಜೆಪಿ ಹೊಂದಿದ್ದರೂ ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಜಾತಿ ಮಹಿಳೆಗೆ ಬಂದಿದ್ದು, ಆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ದಿವ್ಯಜ್ಯೋತಿ ಈಗ ಅಧ್ಯಕ್ಷರು.
ಮಂಗಳೂರು, ಬಂಟ್ವಾಳ ಎರಡೂ ಕಡೆ ಕಾಂಗ್ರೆಸ್ ಆಡಳಿತ.

ಸಂಸತ್ ಚುನಾವಣೆಯಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಬದಲಾವಣೆ ಮುಂದೂಡಲ್ಪಟ್ಟಿತ್ತು, ಈಗಾಗಲೇ ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ, ಕೆಲ ದಿನಗಳಲ್ಲೇ ಬದಲಾವಣೆ ನಡೆಯಲಿದೆ. ಇದು ನಿಯಮವೇನಲ್ಲ, ಪಕ್ಷದ ಆಂತರಿಕ ವಿಚಾರವಷ್ಟೇ.
-ಕ್ಯಾ.ಗಣೇಶ್ ಕಾರ್ಣಿಕ್, ಬಿಜೆಪಿ ಮುಖಂಡ

ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಬದಲಾವಣೆ ಬಗ್ಗೆ ಪಕ್ಷದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ ಎಂದಷ್ಟೇ ಹೇಳಬಲ್ಲೆ.
– ಮೀನಾಕ್ಷಿ ಶಾಂತಿಗೋಡು, ದ.ಕ. ಜಿಪಂ ಅಧ್ಯಕ್ಷೆ

Leave a Reply

Your email address will not be published. Required fields are marked *