13 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ

ಭರತ್ ಶೆಟ್ಟಿಗಾರ್ ಮಂಗಳೂರು

ಉಭಯ ಜಿಲ್ಲೆಗಳ ಜಿಲ್ಲಾಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿದ್ದು, ಬಿಗು ಭದ್ರತೆಯೊಂದಿಗೆ ವ್ಯವಸ್ಥಿತವಾಗಿ ನಡೆಯುತ್ತಿದೆ.

ಮಂಗಳೂರಿನ ಏಳು ಶಾಲೆಗಳಲ್ಲಿ ಹಾಗೂ ಉಡುಪಿಯ ಆರು ಶಾಲೆಗಳಲ್ಲಿ ಶಿಕ್ಷಕರು ಮೌಲ್ಯ ಮಾಪನ ಮಾಡುತ್ತಿದ್ದಾರೆ. ಬೆಳಗ್ಗೆ 9.30ಕ್ಕೆ ಆರಂಭವಾಗುವ ಮೌಲ್ಯಮಾಪನ ಕೆಲಸ ಸಾಯಂಕಾಲ 5 ಗಂಟೆವರೆಗೂ ನಡೆಯುತ್ತದೆ. ಭಾಷಾ ವಿಷಯ ಮೌಲ್ಯಮಾಪಕ 26 ಉತ್ತರ ಪತ್ರಿಕೆಯನ್ನು, ಕೋರ್ ಸಬ್ಜೆಕ್ಟ್ ಮೌಲ್ಯಮಾಪಕ 20 ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ನಡೆಸುತ್ತಾರೆ. ಕೆಲವೊಬ್ಬರು ಹೆಚ್ಚಿನ ಉತ್ತರ ಪತ್ರಿಕೆಗಳನ್ನು ತಿದ್ದುತ್ತಾರೆ.

ಮೌಲ್ಯಮಾಪನ ಪರಿಶೀಲನೆ: ಪ್ರತಿ ಆರು ಮೌಲ್ಯಮಾಪಕರಿಗೆ ಒಬ್ಬ ಡೆಪ್ಯುಟಿ ಚೀಫ್ ಅಧಿಕಾರಿ ಇರುತ್ತಾರೆ. ಶಿಕ್ಷಕರು ಮಾಡಿದ ಮೌಲ್ಯ ಮಾಪನವನ್ನು ಡೆಪ್ಯುಟಿ ಚೀಫ್ ಅಧಿಕಾರಿ ಪರಿಶೀಲನೆ ಮಾಡುತ್ತಾರೆ. ಅತೀ ಹೆಚ್ಚು ಅಂಕ ಹಾಗೂ ಕಡಿಮೆ ಅಂಕ ಪಡೆದ ಉತ್ತರ ಪತ್ರಿಕೆಗಳನ್ನು ಪರಿಶೀಲನೆ ನಡೆಸುತ್ತಾರೆ. ಜತೆಗೆ ಆಯ್ದ ಕೆಲವೊಂದು ಉತ್ತರ ಪ್ರತ್ರಿಕೆಗಳನ್ನೂ ನೋಡುತ್ತಾರೆ.

ಪೋರ್ಟಲ್‌ನಲ್ಲಿ ಅಂಕ ಎಂಟ್ರಿ: ಮೌಲ್ಯಮಾಪಕರು ಪ್ರತಿ 10 ಉತ್ತರ ಪತ್ರಿಕೆಗಳನ್ನು ತಿದ್ದಿದ ಬಳಿಕ ಶಿಕ್ಷಣ ಇಲಾಖೆಯ ಪೋರ್ಟಲ್‌ನಲ್ಲಿ ಅಂಕಗಳನ್ನು ಎಂಟ್ರಿ ಮಾಡಬೇಕು. ಪ್ರತಿ ಸಲವೂ ಒಟಿಪಿ ಮೂಲಕ ಲಾಗಿನ್ ಆಗಿ ಒಎಂಆರ್ ಶೀಟ್‌ನಲ್ಲಿರುವ ಅಂಕಗಳನ್ನು ಫೀಡ್ ಮಾಡಬೇಕು. ನಂತರ ಅದೇ ಅಂಕಗಳನ್ನು ಡೆಪ್ಯುಟಿ ಚೀಫ್ ಅಧಿಕಾರಿಯೂ ತಮ್ಮ ಲಾಗಿನ್‌ನಲ್ಲಿ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಪ್ರಕ್ರಿಯೆಯಲ್ಲಿ ಎರಡೂ ಎಂಟ್ರಿಗಳು ಒಂದೇ ರೀತಿ ಇದ್ದರೆ ಅದನ್ನು ಪೋರ್ಟಲ್ ಅದನ್ನು ಸ್ವೀಕರಿಸುತ್ತದೆ. ಒಂದು ವೇಳೆ ತಪ್ಪಾಗಿ ಸ್ವೀಕರಿಸದಿದ್ದರೆ, ಜಾಯಿಂಟ್ ಚೀಫ್ ಆಫೀಸರ್ ಬಳಿಗೆ ಹೋಗಿ ಅವರು ತಮ್ಮ ಲಾಗಿನ್‌ನಲ್ಲಿ ಎಂಟ್ರಿ ಮಾಡಬೇಕು. ಆಗ ತಪ್ಪಾಗಿರುವುದನ್ನು ತೋರಿಸುತ್ತದೆ. ಮೂರು ಹಂತದಲ್ಲಿ ಕ್ರಾಸ್ ಚೆಕ್ ಇರುವುದರಿಂದ ತಪ್ಪಾಗುವುದು ಕಡಿಮೆ.

ಹೊರಜಿಲ್ಲೆಯ ಉತ್ತರ ಪತ್ರಿಕೆಗಳು:
ಒಂದು ಜಿಲ್ಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಅದೇ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಅಕ್ಕ-ಪಕ್ಕದ ಜಿಲ್ಲೆಗಳ ಉತ್ತರ ಪತ್ರಿಕೆಯೂ ಅದಲು-ಬದಲು ಮಾಡಿ ಮೌಲ್ಯಮಾಪನ ಮಾಡುವುದಿಲ್ಲ. ಯಾವುದೋ ಹೊರಜಿಲ್ಲೆಯ ಉತ್ತರ ಪತ್ರಿಕೆಗಳು- ಇನ್ಯಾವುದೋ ಜಿಲ್ಲೆಗೆ ದೊರೆಯುತ್ತದೆ. ಇದರಿಂದ ಯಾರು ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಮಾಡಿದ್ದಾರೆ ಎಂದು ಆಯಾ ಜಿಲ್ಲೆಯವರಿಗೆ ತಿಳಿಯುವುದಿಲ್ಲ.

ಮಲ್ಯಮಾಪನ ನಡೆಯುತ್ತಿರುವ ಕೇಂದ್ರಗಳು

 • ಮಂಗಳೂರು
  -ಲೇಡಿಹಿಲ್ ವಿಕ್ಟೋರಿಯ ಶಾಲೆ- ಗಣಿತ
  -ಲೇಡಿಹಿಲ್ ಸಂತ ಅಲೋಶಿಯಸ್ ಶಾಲೆ-ಪ್ರಥಮ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ
  – ಕೆನರಾ ಶಾಲೆ ಡೊಂಗರಕೇರಿ-ಸಮಾಜ ವಿಜ್ಞಾನ
  – ಕಪಿತಾನಿಯೋ ಶಾಲೆ-ಪ್ರಥಮ ಭಾಷೆ ಕನ್ನಡ
  – ಪಾದುವ ಹೈಸ್ಕೂಲ್- ವಿಜ್ಞಾನ
  – ಸಂತ ಲಾರೆನ್ಸ್ ಬೋಂದೆಲ್-ತೃತೀಯ ಭಾಷೆ-ಹಿಂದಿ, ಕೊಂಕಣಿ, ತುಳು
  – ಸಂತ ಆಗ್ನೆಸ್-ದ್ವಿತೀಯ ಭಾಷೆ ಇಂಗ್ಲಿಷ್
 • ಉಡುಪಿ
  -ಕಡಿಯಾಳಿ ಕಮಲಾಬಾಯಿ ಶಾಲೆ-ಪ್ರಥಮ ಭಾಷೆ ಕನ್ನಡ
  -ಆದಿಉಡುಪಿ ಖಾಸಗಿ ಅನುದಾನಿತ ಶಾಲೆ-ಇಂಗ್ಲಿಷ್
  -ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆ-ಹಿಂದಿ
  -ಹೆಣ್ಮಕ್ಕಳ ಪ್ರೌಢಶಾಲೆ ಉಡುಪಿ-ಸಮಾಜ ವಿಜ್ಞಾನ
  -ಕ್ರಿಶ್ಚಿಯನ್ ಹೈಸ್ಕೂಲ್ ಉಡುಪಿ-ವಿಜ್ಞಾನ
  -ವಳಕಾಡು ಸರ್ಕಾರಿ ಪ್ರೌಢಶಾಲೆ-ಗಣಿತ

ನಗರದ ಆರು ಶಾಲೆಗಳಲ್ಲಿ ಬಿಗು ಭದ್ರತೆಯೊಂದಿಗೆ ಮೌಲ್ಯಮಾಪನ ನಡೆಯುತ್ತಿದೆ. ಏ.16ರೊಳಗೆ ಮೌಲ್ಯಮಾಪನ ಮುಗಿಯುವ ಸಾಧ್ಯತೆಯಿದೆ. ಭಾಷಾ ಪರೀಕ್ಷೆಗಳು 4 ದಿನದಲ್ಲಿ ಮುಗಿಯಲಿದೆ.
|ಶೇಷಶಯನ ಕಾರಿಂಜ ಡಿಡಿಪಿಐ, ಉಡುಪಿ

ಎಷ್ಟುದಿನ ಮೌಲ್ಯಮಾಪನ ನಡೆಯಲಿದೆ ಎಂಬುದು ಉತ್ತರ ಪತ್ರಿಕೆಗಳ ಸಂಖ್ಯೆ ಹಾಗೂ ಮಲ್ಯಮಾಪಕರ ಸಂಖ್ಯೆಯನ್ನು ಅವಲಂಬಿಸಿದೆ. ಮೌಲ್ಯಮಾಪಕರು ಜಾಸ್ತಿಯಿದ್ದರೆ ಬೇಗ ಮುಗಿಯುತ್ತದೆ. ಎಲ್ಲ ಕೆಲಸಗಳು ಪೊಲೀಸ್ ಭದ್ರತೆಯಲ್ಲೇ ನಡೆಯುತ್ತದೆ.
|ವೈ.ಶಿವರಾಮಯ್ಯ ಡಿಡಿಪಿಐ, ಮಂಗಳೂರು