ಮತ ಎಣಿಕೆ ಕೇಂದ್ರ ಬದಲು

ಹರೀಶ್ ಮೋಟುಕಾನ ಮಂಗಳೂರು

ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳನ್ನು ಈ ಬಾರಿ ಬದಲಾವಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರವನ್ನು ಮೊದಲ ಬಾರಿಗೆ ನಗರದಿಂದ ಹೊರ ವಲಯಕ್ಕೆ ಸ್ಥಳಾಂತರಿಸಲಾಗಿದೆ. ಈ ಬಾರಿ ಸುರತ್ಕಲ್ ಎನ್‌ಐಟಿಕೆ ಆವರಣದಲ್ಲಿ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಅಧಿಕಾರಿಗಳು ಅವಶ್ಯ ಪೂರ್ವ ಸಿದ್ಧತೆ ಕೈಗೊಳ್ಳುತ್ತಿದ್ದಾರೆ.

ಮತ ಎಣಿಕೆಯನ್ನು ವಿವಿಧ ರೀತಿಯಲ್ಲಿ ಸುಗಮ ಮತ್ತು ಸುವ್ಯವಸ್ಥಿತವಾಗಿಸಲು ಎನ್‌ಐಟಿಕೆ ಆವರಣದಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕೇಂದ್ರವನ್ನು ಅಂತಿಮಗೊಳಿಸಿದ್ದಾರೆ.
2009ರ ಲೋಕಸಭಾ ಚುನಾವಣೆ ಮತ ಎಣಿಕೆ ಕೆನರಾ ಕಾಲೇಜು ಆವರಣದಲ್ಲಿ, 2014ರಲ್ಲಿ ಬೋಂದೆಲ್ ಮಹಾತ್ಮ ಗಾಂಧಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣಾ ಮತ ಎಣಿಕೆಯೂ ಬೋಂದೆಲ್ ಎಂಜಿಸಿಯಲ್ಲಿ ನಡೆದಿತ್ತು.

ನಗರದ ಕಾಲೇಜು ಆವರಣದಲ್ಲಿ ಮತ ಎಣಿಕೆ ನಡೆಸಿದರೆ ರಾಜಕೀಯ ಪಕ್ಷಗಳ ಸಹಸ್ರಾರು ಬೆಂಬಲಿಗರು ಜಮಾಯಿಸುವುದರಿಂದ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತದೆ. ಕಾರ್ಯಕರ್ತರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ಬೋಂದೆಲ್ ಎಂಜಿಸಿಯಲ್ಲಿ ಮತ ಎಣಿಕೆ ಮಾಡುವ ಸಂದರ್ಭ ವಿಮಾನ ನಿಲ್ದಾಣ ರಸ್ತೆಯನ್ನು ಬೋಂದೆಲ್ ಚರ್ಚ್ ಬಳಿಯಿಂದ ಬೋಂದೆಲ್ ವೃತ್ತದ ತನಕ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಬಂದ್ ಮಾಡಬೇಕಾಗುತ್ತದೆ. ಇದರಿಂದ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ತೊಂದರೆಯಾಗುತ್ತದೆ. ಕಳೆದ ಎರಡು ಬಾರಿಯೂ ಈ ಸಮಸ್ಯೆ ಎದುರಾಗಿದೆ. ಈ ಎಲ್ಲ ಉದ್ದೇಶಗಳಿಂದ ಮತ ಎಣಿಕೆ ಕೇಂದ್ರವನ್ನು ನಗರದಿಂದ ಹೊರ ವಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಡುಪಿಯ ಮತ ಎಣಿಕೆ ಕೇಂದ್ರ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಮತ ಎಣಿಕೆ ಈ ಬಾರಿ ಅಜ್ಜರಕಾಡು ಸೇಂಟ್ ಸಿಸಿಲಿ ಸ್ಕೂಲ್‌ನಲ್ಲಿ ನಡೆಯಲಿದೆ. ಕಳೆದ ಬಾರಿ ಕುಂಜುಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿತ್ತು. ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆಯನ್ನು ಬಿಟ್ಟು ಒಳ ಪ್ರದೇಶದಲ್ಲಿರುವ ಶಾಲೆಯಲ್ಲಿ ಈ ಬಾರಿ ಮತ ಎಣಿಕೆ ನಡೆಯಲಿದೆ. ಈಗಾಗಲೇ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಟಿ ಹಾಗೂ ಎಸ್ಪಿ ನಿಶಾ ಜೇಮ್ಸ್ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರವನ್ನು ಪರಿಶೀಲನೆ ನಡೆಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಈ ಬಾರಿಯ ಮತ ಎಣಿಕೆ ಎನ್‌ಐಟಿಕೆ ಸುರತ್ಕಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪೊಲೀಸ್ ಆಯುಕ್ತರು ಹಾಗೂ ಇತರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
|ಶಶಿಕಾಂತ್ ಸೆಂಥಿಲ್, ಚುನಾವಣಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ