ಗೆಲುವಿನ ಅಂತರ ಹೆಚ್ಚಳಕ್ಕೆ ಕಾರ್ಯರೂಪ

ದಾವಣಗೆರೆ: ಸ್ಥಳೀಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜಿ.ಎಂ.ಸಿದ್ದೇಶ್ವರ ಶೀಘ್ರವೇ ಘೋಷಣೆಯಾಗಲಿದ್ದು, ಜಿಲ್ಲೆಯಲ್ಲಿ 1 ಲಕ್ಷ , ದಾವಣಗೆರೆ ದಕ್ಷಿಣ ಕ್ಷೇತ್ರದಿಂದ 50 ಸಾವಿರ ಮತಗಳ ಅಂತರದ ಗೆಲುವು ತರಲು ಪಕ್ಷದ ಕಾರ್ಯಕರ್ತರು ಸಂಕಲ್ಪ ಮಾಡಿದರು.

ಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ, ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸುವ ಇರಾದೆ ವ್ಯಕ್ತವಾಯಿತು.

ಲೋಕಸಭಾ ಕ್ಷೇತ್ರದ ಉಸ್ತುವಾರಿ ಆಯನೂರು ಮಂಜುನಾಥ್ ಮಾತನಾಡಿ, ಈಗಿನದು ಅಧಿಕಾರದ ಚುನಾವಣೆಯಲ್ಲ, ಭಾರತದ ರಕ್ಷಣೆ, ಸೈನಿಕರ ಸುರಕ್ಷತೆ, ಬಡಜನರ ಯೋಜನೆಗಳಿಗಾಗಿ ನಡೆಯುವ ಪ್ರತಿಷ್ಠಿತ ಚುನಾವಣೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯದ 22-23 ಲೋಕಸಭಾ ಸ್ಥಾನ ಗೆಲ್ಲುವ ಗುರಿ ಪೈಕಿ ದಾವಣಗೆರೆ ಮೊದಲ ಸ್ಥಾನವಾಗಬೇಕು ಎಂದರು.

ಆಸ್ತಿ ರಕ್ಷಣೆಗಾಗಿ ಕಾಂಗ್ರೆಸ್ಸಿಗರು ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದಾರೆ. ಆ ಪಕ್ಷದ ಇತಿಹಾಸವೇ ಅಂಥದ್ದು, ಹಿರಿಯರನ್ನು ಕೈಹಿಡಿದು ಕರೆದೊಯ್ಯುವಷ್ಟರ ಮಟ್ಟಿಗೆ ಕಾಂಗ್ರೆಸ್ ದುರ್ಬಲವಾಗುತ್ತಿದೆ ಎಂದು ಟೀಕಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದಿದ್ದೇನೆ. ಅಶೋಕ ಥಿಯೇಟರ್ ಬಳಿ ರೈಲ್ವೆ ಮೇಲ್ಸೇತುವೆಗಾಗಿ 35 ಕೋಟಿ ರೂ. ಹಣ ಮಂಜೂರಾತಿ ಕೊಡಿಸಿದರೂ, 10-15 ಸಭೆ ನಡೆಸಿದರೂ ಕಾಂಗ್ರೆಸ್ ನಾಯಕರು ಸ್ಪಂದಿಸಲಿಲ್ಲ ಎಂದು ದೂರಿದರು.

ವಿಮಾನ ಇಳಿದಾಣ ನಿರ್ಮಾಣಕ್ಕೆ 500 ಎಕರೆ ಜಾಗ ಕೇಳಿದರೂ, ಇದರಿಂದ ಸಂಸದರಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅಭಿವೃದ್ಧಿಗೆ ಸಹಕರಿಸಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದೆ ಕಾಂಗ್ರೆಸ್ಸಿಗರು ಟೀಕಿಸಬಾರದು. ನೀವು ನಿಮ್ಮ ಸಾಧನೆ ಹೇಳಿಕೊಳ್ಳಿ. ನಾವು ನಮ್ಮ ಅಭಿವೃದ್ಧಿ ಕಾರ್ಯ ಹೇಳುತ್ತೇವೆ ಎಂದು ಉತ್ತರಿಸಿದರು. ಕೇಂದ್ರ ಸರ್ಕಾರದ ಯೋಜನೆಗಳ ಪಟ್ಟಿಯನ್ನೇ ಮಂಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಬಿಜೆಪಿ ಮಹಾನ್ ನಾಯಕರ ಪಕ್ಷ. ಇಲ್ಲಿ ಯಾರಿಗೋ ಹೆದರಿಕೊಳ್ಳುವ ಮನಸ್ಸುಗಳಿಲ್ಲ ಎಂದು ಉತ್ತರಿಸಿದರು.

ಶಾಸಕ ಎಸ್.ಎ.ರವೀಂದ್ರನಾಥ್, ಮುಖಂಡರಾದ ಎಚ್.ಎಸ್.ನಾಗರಾಜ್, ಅಣಬೇರು ಜೀವನಮೂರ್ತಿ, ವೈ,ಮಲ್ಲೇಶ್, ರಾಜನಹಳ್ಳಿ ಶಿವಕುಮಾರ್, ಕೊಳೇನಹಳ್ಳಿ ಸತೀಶ್, ಎನ್.ರಾಜಶೇಖರ್, ರಮೇಶನಾಯ್ಕ, ರುದ್ರಮುನಿಸ್ವಾಮಿ, ಗೋಣೆಪ್ಪ, ಪ್ರಭು ಕಲ್ಬುರ್ಗಿ, ಪಿ.ಸಿ.ಶ್ರೀನಿವಾಸ್ ಮತ್ತಿತರರಿದ್ದರು.

ಗೌಡ್ರ ಫ್ಯಾಮಿಲೀಲಿ ಕಣ್ಣೀರು ಬತ್ತೋಲ್ಲ!: 60 ವರ್ಷ ಹಾಸನದಲ್ಲಿ ರಾಜಕೀಯ ಮಾಡಿದ ದೇವೇಗೌಡರು ಕೇವಲ ತಮ್ಮ ಮಗ, ಮೊಮ್ಮಕ್ಕಳನ್ನೇ ರಾಜಕೀಯಕ್ಕೆ ತಂದರೆ ವಿನಃ ಪಕ್ಷದ ಒಬ್ಬೇ ಒಬ್ಬ ನಾಯಕರನ್ನು ಬೆಳೆಸುವ ಕೆಲಸ ಮಾಡಲಿಲ್ಲ. ಕಾರ್ಯಕ್ರಮವೊಂದರಲ್ಲಿ ದೇವೇಗೌಡರ ಕುಟುಂಬ ಹೋಲ್‌ಸೇಲ್ ಆಗಿ ಕಣ್ಣೀರಧಾರೆ ಹಾಕಿತು. ಕಾವೇರಿಯಲ್ಲಿ ನೀರು ಬತ್ತಬಹುದು. ಆದರೆ, ದೇವೇಗೌಡರ ಫ್ಯಾಮಿಲಿಯಲ್ಲಿ ಎಂದೂ ಕಣ್ಣೀರು ಬತ್ತೋದಿಲ್ಲ. ಕಾಂಗ್ರೆಸ್ ಮುಕ್ತ ದೇಶ ಮಾತ್ರವಲ್ಲ. ಕರ್ನಾಟಕವನ್ನು ಕಣ್ಣೀರು ಮುಕ್ತ ರಾಜ್ಯವಾಗಿಸಬೇಕು ಎಂದು ಲೋಕಸಭಾ ಜಿಲ್ಲಾ ಉಸ್ತುವಾರಿ ಆಯನೂರು ಮಂಜುನಾಥ್ ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರ ಈವರೆಗೆ ಬಿಜೆಪಿ ಶಾಸಕರನ್ನು ನೀಡಿಲ್ಲ. ಈ ಭಾಗದಿಂದ ಹೆಚ್ಚು ಅಂತರದ ಗೆಲುವು ತಂದುಕೊಡಬೇಕು. ನಾನು ನಿಮ್ಮ ಮನೆಯ ಮಗ. ನನಗೆ ನೀವೇ ಮಾಲೀಕರು. ನಾನು ನಿಮ್ಮ ಸೇವಕ. ಮೋದಿ ಸರ್ಕಾರಕ್ಕಾಗಿ ಮತ್ತೊಮ್ಮೆ ಆಶೀರ್ವದಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಹಿಂದುಳಿದ ನಾಯಕ ಸಿದ್ದು ಅಲ್ಲ, ಮೋದಿ: ಹಿಂದುಳಿದ ನಾಯಕ ಸಿದ್ದರಾಮಯ್ಯ ಅಲ್ಲ. ಹಿಂದುಳಿದವರಲ್ಲೇ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ವರ್ಗದ ನಾಯಕ ಮೋದಿ ನಿಜ ನಾಯಕ. ಹಣ-ಜಾತಿ ಬಲವಿಲ್ಲದೆ ಕೇವಲ ಸಾಮರ್ಥ್ಯದಿಂದ ಪ್ರಧಾನಿಯಾಗಿದ್ದಾರೆ. ಮೋದಿ, ದಿನದ 20 ತಾಸು ಕೆಲಸ ಮಾಡುತ್ತಾರೆ. ಕಾಂಗ್ರೆಸ್ ನಾಯಕರು ಮಧ್ಯಾಹ್ನ 12 ಗಂಟೆಗೆ ಕಣ್ಣೊರೆಸಿಕೊಳ್ಳುತ್ತಾ ವೇದಿಕೆಗೆ ಬರುತ್ತಾರೆ ಎಂದು ಆಯನೂರು ಮಂಜುನಾಥ್ ಲೇವಡಿ ಮಾಡಿದರು.