ಅಭಿವೃದ್ಧಿ, ಜನಸೇವೆಗೆ ಪೂರ್ಣ ಸಮಯ: ನಳಿನ್‌ಕುಮಾರ್ ಕಟೀಲ್

1. ನಿಮ್ಮ ಗೆಲುವನ್ನು ಯಾವ ರೀತಿ ವಿಶ್ಲೇಷಿಸುತ್ತೀರಿ?
ಗೆಲುವು ನಿರೀಕ್ಷಿತವಾಗಿತ್ತು. ಕೇಂದ್ರ ಸರ್ಕಾರದ ಸಾಧನೆ ಮತ್ತು ಬಿಜೆಪಿ ಕಾರ್ಯಕರ್ತರ ಅವಿರತ ಶ್ರಮ ಈ ಗೆಲುವಿನ ಹಿಂದಿದೆ. ಶಾಸಕರು, ಜಿಲ್ಲಾ ಬಿಜೆಪಿ ಸಮಿತಿಯಿಂದ ಹಿಡಿದು ಬೂತ್ ಮಟ್ಟದ ಸಮಿತಿವರೆಗೆ ಪಕ್ಷದ ಎಲ್ಲ ನಾಯಕರು ವ್ಯವಸ್ಥಿತ ಪ್ರಚಾರ ಕಾರ್ಯ ನಡೆಸಿದ್ದರು. 2009ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಪಕ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಎರಡು ಅವಧಿಗೆ ಸಂಸದನಾಗಿ ಸಜ್ಜನಿಕೆಯ ರಾಜಕೀಯ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ.

2. ಇದು ಮೋದಿ ಅಲೆಯ ವಿಜಯ ಎಂದು ಒಪ್ಪಿಕೊಳ್ಳುತ್ತೀರಾ?
ಇದು ಖಂಡಿತವಾಗಿಯೂ ಮೋದಿ ಅಲೆಯ ವಿಜಯ. ಕೇಂದ್ರ ಸರ್ಕಾರದ ಸಾಧನೆಯ ವಿಜಯ. ಕರಾವಳಿಯಲ್ಲಿ ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆಯಾಗಿತ್ತು. ಮಂಗಳೂರಿನಲ್ಲಿ ನಡೆದ ಮೋದಿ ಅವರ ಸಮಾವೇಶಕ್ಕೆ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮವಾಗಿ ದಾಖಲೆಯ ಜನಸ್ತೋಮ ಸೇರಿದ್ದು ಇದಕ್ಕೆ ಸಾಕ್ಷಿಯಾಗಿದೆ.

3. ಮೈತ್ರಿ ಪಕ್ಷಗಳ ಕಚ್ಚಾಟದಿಂದ ನಿಮ್ಮ ಗೆಲುವು ಸುಲಭವಾಯಿತೇ?
ಜೆಡಿಎಸ್‌ಗೆ ಕರಾವಳಿಯಲ್ಲಿ ಅಸ್ತಿತ್ವ ಇಲ್ಲ. ಕಾಂಗ್ರೆಸ್ ಪಕ್ಷವನ್ನು ಇಲ್ಲಿನ ಜನತೆ ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಈ ಪಕ್ಷಗಳ ಮೈತ್ರಿ ಬಗ್ಗೆ ಜನರಲ್ಲಿ ಆಕ್ರೋಶವಿತ್ತು. ಮೈತ್ರಿ ಪಕ್ಷದ ಕಚ್ಚಾಟ ಮಾತ್ರವಲ್ಲ ಕೆಲವು ನಾಯಕರ ದುರಂಹಕಾರದ ಮಾತುಗಳನ್ನು ಕೂಡಾ ಇಲ್ಲಿಯ ಜನತೆ ಸಹಿಸಿಲ್ಲ. ಅಂತಹ ಮತಗಳು ಬಿಜೆಪಿ ಪಾಲಾಗಿದೆ.

4. ಸಂಸದರಾಗಿ ನಿಮ್ಮ ಕ್ಷೇತ್ರದ ಜನರಿಗೆ ಯಾವ ಭರವಸೆ ನೀಡಲು ಬಯಸುತ್ತೀರಿ?
ಅಭಿವೃದ್ದಿ ಒಂದು ನಿರಂತರ ಪ್ರಕ್ರಿಯೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇರುವ ಕಾರಣ ಸಹಜವಾಗಿ ಜನತೆಯ ನಿರೀಕ್ಷೆ ಹೆಚ್ಚಿರುತ್ತದೆ. ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಸೇವೆಗಾಗಿ ನನ್ನ ಪೂರ್ಣ ಸಮಯವನ್ನು ಮೀಸಲಿರಿಸಿದ್ದೇನೆ. ಫ್ಲೈ ಓವರ್‌ಗಳು , ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ಸಹಿತ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ . ಇದನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಪ್ರಥಮ ಆದ್ಯತೆ ನೀಡಲಿದ್ದೇನೆ.

Leave a Reply

Your email address will not be published. Required fields are marked *