ಗೆಲುವಿಗೆ ಪರ್ಸೆಂಟೇಜ್ ಲೆಕ್ಕಾಚಾರ

>

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಚುನಾವಣೆ ಮುಗಿದದ್ದೇ ತಡ ದಕ್ಷಿಣ ಕನ್ನಡದ ರಾಜಕೀಯ ವಲಯದಲ್ಲಿ ಈಗ ಬರೀ ಪರ್ಸೆಂಟೇಜ್‌ನದ್ದೇ ಸುದ್ದಿ. ಎಲ್ಲ ಕ್ಷೇತ್ರಗಳಲ್ಲಿ ವೋಟಿನ ಪರ್ಸೆಂಟೇಜ್ ಜಾಸ್ತಿಯಾಗಿದೆ. ಹಾಗಾಗಿ ಗೆಲ್ಲುವುದು ನಾವೇ ಎಂದು ಬಿಜೆಪಿಯವರು ಬೀಗುತ್ತಿದ್ದಾರೆ. ಪರ್ಸೆಂಟೇಜ್ ಜಾಸ್ತಿಯಾದ ಲಾಭ ನಮಗೆ. ಯಾವ ರೀತಿ ಲೆಕ್ಕ ಹಾಕಿದ್ರೂ ನಾವು ಸೋಲಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್‌ನವರು ವಾದ ಮಂಡಿಸುತಿದ್ದಾರೆ.
ಮತದಾನದ ಪ್ರಮಾಣ ಹೆಚ್ಚಳವಾಗಲು ಸ್ವೀಪ್ ಜತೆಗೆ ರಾಜಕೀಯ ಪಕ್ಷದವರು ಶ್ರಮಿಸಿದ್ದರು. ಮತದಾನದ ಪ್ರಮಾಣ ಹೆಚ್ಚಳವಾದರೆ ಮಾತ್ರ ಗೆಲುವು ಸಾಧ್ಯ ಎನ್ನುವುದು ಕಾಂಗ್ರೆಸ್, ಬಿಜೆಪಿ ನಾಯಕರ ಲೆಕ್ಕಾಚಾರವಾಗಿತ್ತು. ಈಗ ದ.ಕ. ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದ ಮತದಾನವಾಗಿರುವ ಕಾರಣ ಪ್ರಮುಖ ರಾಜಕೀಯ ಪಕ್ಷಗಳ ಚುನಾವಣಾ ಪೂರ್ವ ಲೆಕ್ಕಾಚಾರವೂ ಕೊಂಚ ಏರುಪೇರಾಗಿದೆ.

ದಾಖಲೆ ಪ್ರಮಾಣ: 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಶೇ.0.26ರಷ್ಟು ಮತದಾನದ ಪ್ರಮಾಣ ಹೆಚ್ಚಳವಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 17,24,460 ಮತದಾರರ ಪೈಕಿ 13,43,378 ಮಂದಿ ಮತದಾನ ಮಾಡಿದ್ದು, ಶೇ.77.90 ಮತದಾನವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಶೇ.77.64 ಮತದಾನವಾಗಿತ್ತು. ಜಿಲ್ಲೆಯ 5 ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಅಧಿಕವಾಗಿದ್ದರೆ, ಬಂಟ್ವಾಳ, ಬೆಳ್ತಂಗಡಿ ಮತ್ತು ಮಂಗಳೂರು ಕ್ಷೇತ್ರದಲ್ಲಿ ಕೊಂಚ ಕಡಿಮೆಯಾಗಿದೆ.

ಲಾಭ-ನಷ್ಟ: ಪರ್ಸೆಂಟೇಜ್ ಜಾಸ್ತಿಯಾದ ಬಗ್ಗೆ ಕಾಂಗ್ರೆಸ್-ಬಿಜೆಪಿ ನಾಯಕರು ಬಹಿರಂಗವಾಗಿ ಲಾಭ ನಮಗೆ ಎಂದು ಹೆಮ್ಮೆ ಪಟ್ಟಿದ್ದರೂ ಉಭಯ ಪಾಳಯದಲ್ಲಿ ಆತಂಕ ಇದ್ದೇ ಇದೆ. ಪರ್ಸೆಂಟೇಜ್ ಹೆಚ್ಚಳದಿಂದ ಉಂಟಾಗಲಿರುವ ಲಾಭ-ನಷ್ಟದ ಬಗ್ಗೆ ಮೇ 23ರವರೆಗೆ ಲೆಕ್ಕಾಚಾರಗಳು ನಡೆಯುತ್ತಲೇ ಇರುತ್ತದೆ.

ಕಾಂಗ್ರೆಸ್ ಲೆಕ್ಕಾಚಾರ:  ಅಲ್ಪಸಂಖ್ಯಾತರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಬಿಲ್ಲವರ ಹೆಚ್ಚಿನ ಮತ ಮಿಥುನ್ ರೈ ಅವರತ್ತ ವಾಲಿದೆ. ಬಂಟ ಸಮುದಾಯದ ಮತ ಫಿಫ್ಟಿ-ಫಿಫ್ಟಿಯಾಗಿದೆ. ಯುವಕರ ಮತ ಸೆಳೆಯುವಲ್ಲಿಯೂ ಮಿಥುನ್ ಯಶಸ್ವಿಯಾಗಿದ್ದಾರೆ. ಸುಳ್ಯ, ಪುತ್ತೂರಿನಲ್ಲಿ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗಬಹುದು. ಆದರೆ ಆ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಲೀಡ್ ಕಡಿಮೆ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆದಿದೆ. ಮಂಗಳೂರು ಕ್ಷೇತ್ರದಲ್ಲಿ ಭಾರಿ ಮುನ್ನಡೆ ಸಾಧ್ಯವಾಗಲಿದೆ. ಬಂಟ್ವಾಳ, ಮೂಡುಬಿದಿರೆ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಲೀಡ್ ಬರಬಹುದು. ಇನ್ನು ಬೆಳ್ತಂಗಡಿ, ಮಂಗಳೂರು ನಗರ ಉತ್ತರ ಮತ್ತು ದಕ್ಷಿಣದಲ್ಲಿ ಮೇಲ್ನೋಟಕ್ಕೆ ಸಮಬಲವಿದ್ದರೂ ಮಿಥುನ್ ಅಧಿಕ ಮತ ಪಡೆಯುವುದು ಗ್ಯಾರಂಟಿ. ಹಾಗಾಗಿ ಸೋಲಲು ಸಾಧ್ಯವೇ ಇಲ್ಲ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.

 ಬಿಜೆಪಿ ಲೆಕ್ಕಾಚಾರ: ಸುಳ್ಯ ಮತ್ತು ಪುತ್ತೂರಿನಲ್ಲಿ ದಾಖಲೆ ಮತದಾನವಾಗಿರುವುದು ಭಾರಿ ಪ್ಲಸ್ ಆಗಲಿದೆ. ಸುಳ್ಯದಲ್ಲಂತೂ ನಿರ್ಣಯಕ ಲೀಡ್ ದೊರೆಯಲಿದೆ. ಅಲ್ಪಸಂಖ್ಯಾತರು ನಿರ್ಣಾಯಕ ಸಂಖ್ಯೆಯಲ್ಲಿರುವ ಮಂಗಳೂರು ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು. ಮೂಡುಬಿದಿರೆ, ಬೆಳ್ತಂಗಡಿ ಮತ್ತು ಮಂಗಳೂರು ಉತ್ತರದಲ್ಲಿ ಬಿಜೆಪಿ ಉತ್ತಮ ಲೀಡ್ ಸಾಧಿಸುವುದು ಖಚಿತ. ಬಂಟ್ವಾಳ ಮತ್ತು ಮಂಗಳೂರು ದಕ್ಷಿಣದಲ್ಲೂ ಮೇಲುಗೈ ಸಾಧಿಸುತ್ತೇವೆ. ಮೋದಿ ಪರ ಯುವ ಹಾಗೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ ಕಾರಣ ಮತ ಪ್ರಮಾಣ ಹೆಚ್ಚಳವಾಗಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ನಳಿನ್ ಗೆದ್ದೇ ಗೆಲ್ಲುತ್ತಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರ.

Leave a Reply

Your email address will not be published. Required fields are marked *