ಮಂಗಳೂರು/ಕಾಸರಗೋಡು: ಮಂಗಳೂರು- ಕಾಸರಗೋಡು ನಡುವೆ ಸಂಚರಿಸುವವರಿಗೆ ಇದು ಖುಷಿಯ ಸುದ್ದಿ.
ಮಾ.21ರಂದು ತಲಪಾಡಿಯಲ್ಲಿ ಗಡಿ ಬಂದ್ ಆದ ಬಳಿಕ ಇದೇ ಮೊದಲ ಬಾರಿಗೆ ದ.ಕ ಹಾಗೂ ಕಾಸರಗೋಡು ಎರಡೂ ಜಿಲ್ಲಾಡಳಿತಗಳೂ ಉಭಯ ಜಿಲ್ಲೆಗಳ ನಡುವೆ ದೈನಂದಿನ ಕೆಲಸಕ್ಕಾಗಿ ಹೋಗಿ ಬರಲು ಅನುಮತಿ ನೀಡಿವೆ.
ಕಾಸರಗೋಡು ಜಿಲ್ಲಾಡಳಿತ ಈ ಕುರಿತು ಮಂಗಳವಾರವೇ ಪ್ರಕಟಣೆ ನೀಡಿದ್ದರೆ, ಬುಧವಾರ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಕಾಸರಗೋಡಿನಿಂದ ಬರುವವರು ಅಲ್ಲಿನ ಜಿಲ್ಲಾಡಳಿತದ ಆನ್‌ಲೈನ್ ಪಾಸ್ ಹಾಗೂ ಮಂಗಳೂರಿನಿಂದ ಹೋಗುವವರು ದ.ಕ ಜಿಲ್ಲಾಡಳಿತದ ಆನ್‌ಲೈನ್ ಪಾಸ್ ಹೊಂದಿರಬೇಕಾಗುತ್ತದೆ. ಉದ್ಯೋಗಿಗಳು, ವೈದ್ಯಕೀಯ ಹಾಗೂ ಇತರ ವೃತ್ತಿಪರರು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರಿಗಷ್ಟೇ ಸದ್ಯ ದೈನಂದಿನ ಸಂಚಾರಕ್ಕೆ ಅವಕಾಶ. ಕಾಸರಗೋಡಿನಲ್ಲಿರುವ ಗಡಿನಾಡ ಕನ್ನಡಿಗರಿಗೆ ಉದ್ಯೋಗ ನಿಮಿತ್ತ ಮಂಗಳೂರು-ಕಾಸರಗೋಡಿಗೆ ಹೋಗುವುದು ಸಾಧ್ಯವಾಗಲಿದೆ. ಉದ್ಯೋಗ ಹೊರತು ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿತ್ಯ ಥರ್ಮಲ್ ಸ್ಕ್ಯಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯ ಎಂದು ತಿಳಿಸಲಾಗಿದೆ.
ದ.ಕ. ಜಿಲ್ಲೆಯ ಪಾಸ್‌ಗೆ https://bit.ly/dkdpermit ಹಾಗೂ ಕಾಸರಗೋಡು ಜಿಲ್ಲೆಯ ಪಾಸ್‌ಗೆ https://covid19jagratha.kerala.nic.in/ ವೆಬ್‌ಸೈಟ್‌ಗಳಲ್ಲಿ ನೋಂದಣಿ ಮಾಡಬೇಕು. ಕಾಸರಗೋಡಿನ ಪಾಸ್ ಬೇಕಾದವರು ಕಾರಣ ಕಾಲಂನಲ್ಲಿ INTERSTATE TRAVEL ON DAILY BASIS ಎಂದು ನಮೂದಿಸಬೇಕು. ಈ ಪಾಸ್‌ಗಳು ಜೂನ್ 30ರವರೆಗೆ ಮಾತ್ರ ಊರ್ಜಿತವಾಗಿರುತ್ತದೆ.
ತಪ್ಪಿದರೆ ಕ್ರಮ: ಪಾಸ್ ಅರ್ಜಿಯಲ್ಲಿ ಸ್ಪಷ್ಟವಾಗಿ ಹೊರಡುವ ಜಾಗ ಹಾಗೂ ಹೋಗುವ ಜಾಗದ ಬಗ್ಗೆ ತಿಳಿಸಿರಬೇಕು. ದ.ಕ ಜಿಲ್ಲೆಯಲ್ಲಿ ಕೆಲಸ ಮಾಡುವ ಜಾಗದ ಪೂರ್ಣ ವಿಳಾಸ ಇರಬೇಕು. ಆಧಾರ್ ಹಾಗೂ ಉದ್ಯೋಗದ ದಾಖಲೆ (ಉದಾ- ಕ್ಲಿನಿಕ್ ನೋಂದಣಿ, ಉದ್ಯೋಗದಾತರ ಪತ್ರ, ವೃತ್ತಿ ಗುರುತುಚೀಟಿ, ವಿದ್ಯಾರ್ಥಿ ಗುರುತು ಚೀಟಿ ಇತ್ಯಾದಿ) ಹೊಂದಿರಬೇಕು. ಚೆಕ್‌ಪೋಸ್ಟ್‌ನಲ್ಲಿ ಆಗಮನ-ನಿರ್ಗಮನ ವಿವರ ದಾಖಲಿಸಬೇಕು. ತಪ್ಪಿದರೆ ಕ್ವಾರಂಟೈನ್ ಆಗಬೇಕಾಗುತ್ತದೆ ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದೂ ಎಚ್ಚರಿಕೆ ನೀಡಲಾಗಿದೆ.