ದ.ಕ.ಕ್ಷೇತ್ರದಿಂದ ಸ್ಪರ್ಧಿಸದ ಜೆಡಿಎಸ್!

>

– ಪಿ.ಬಿ.ಹರೀಶ್ ರೈ ಮಂಗಳೂರು
ಕ್ಷೇತ್ರ ಪುನರ್ ವಿಂಗಡಣೆಯಾಗಿ ದ.ಕ.ಲೋಕಸಭಾ ಕ್ಷೇತ್ರ ಅಸ್ವಿತ್ವಕ್ಕೆ ಬಂದ ಬಳಿಕ ಜೆಡಿಎಸ್ ಅಭ್ಯರ್ಥಿ ಇಲ್ಲಿ ಕಣಕ್ಕೆ ಇಳಿದಿಲ್ಲ. ಚುನಾವಣೆೆ ಬಂದಾಗ ಜೆಡಿಎಸ್ ಸ್ಪರ್ಧೆ ಕೇವಲ ಮೈತ್ರಿಗೆ ಸೀಮಿತವಾಗಿದೆ.
2014ರ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಯನ್ನು ಬೆಂಬಲಿಸಿದ ಜೆಡಿಎಸ್ ಈಗ ಕಾಂಗ್ರೆಸ್ ಜತೆ ಮೈತ್ರಿ ಸಾಧಿಸಿದೆ. 2009ರ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಬೆಂಬಲಿಸಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 5 ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. ಎಲ್ಲ ಅಭ್ಯರ್ಥಿಗಳಿಗೆ ಠೇವಣಿ ನಷ್ಟ. ಒಟ್ಟು ದೊರೆತದ್ದು ಕೇವಲ 9 ಸಾವಿರ ಮತ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಾಬಲ್ಯ, ಪಕ್ಷ ಸಂಘಟನೆ ಕೊರತೆ ಪರಿಣಾಮ ದ.ಕ.ಜಿಲ್ಲೆಯಲ್ಲಿ ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಕುಸಿಯುತ್ತಲೇ ಇದೆ. ಲೋಕಸಭೆ ಚುನಾವಣೆಯಲ್ಲಂತೂ ತೆನೆ ಹೊತ್ತ ಮಹಿಳೆಯ ಚಿಹ್ನೆ ಮತಯಂತ್ರದಲ್ಲಿ ಕಾಣುವುದೇ ಇಲ್ಲ.!

ಪರಿಣಾಮ ಬೀರದ ಮೈತ್ರಿ:  2014ರ ಚುನಾವಣೆಯಲ್ಲಿ ಜೆಡಿಎಸ್-ಎಸ್‌ಡಿಪಿಐ ಮೈತ್ರಿ ಅಭ್ಯರ್ಥಿ 27,254 ಮತ ಪಡೆದಿದ್ದರೆ, 2009ರ ಚುನಾವಣೆಯಲ್ಲಿ ಜೆಡಿಎಸ್-ಸಿಪಿಎಂ ಮೈತ್ರಿ ಅಭ್ಯರ್ಥಿ ಪಡೆದದ್ದು ಕೇವಲ 18,328 ಮತ. ಜೆಡಿಎಸ್ ಜತೆ ಮೈತ್ರಿ ಸಾಧಿಸಿದ ಪಕ್ಷದ ಅಭ್ಯರ್ಥಿಗಳು ಪಡೆದ ಮತ ಒಟ್ಟು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದು ಕೂಡಾ ಸಾಧ್ಯವಾಗಿರಲಿಲ್ಲ.

ನಿರ್ಣಾಯಕ ಮತ: ಹಿಂದಿನ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಗಳನ್ನು ಕೂಡ ಜಿಲ್ಲೆಯ ಜೆಡಿಎಸ್ ನಾಯಕರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ 1999ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತ ನಿರ್ಣಾಯಕ ಪಾತ್ರ ವಹಿಸಿತ್ತು. ಕಾಂಗ್ರೆಸ್ ಟಿಕೆಟ್ ನೀಡಿಲ್ಲ ಎಂದು ಬಂಡಾಯ ಎದ್ದ ಲೋಕೇಶ್ವರಿ ವಿನಯಚಂದ್ರ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ 20, 980 ಮತ ಪಡೆದರು. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರು ಬಿಜೆಪಿಯ ಧನಂಜಯ ಕುಮಾರ್ ವಿರುದ್ಧ ಕೇವಲ 8,469 ಮತಗಳ ಅಂತರದ ಸೋಲು ಕಂಡರು. 2004ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎ.ಕೆ.ಸುಬ್ಬಯ್ಯ 39, 774 ಮತ ಪಡೆದಿದ್ದರು. ಈ ಪೈಕಿ ಹೆಚ್ಚಿನ ಮತಗಳು ಕೊಡಗು ಜಿಲ್ಲೆಯಿಂದ ಬಿದ್ದಿತ್ತು.

ಕಳಪೆ ಸಾಧನೆ: 90ರ ದಶಕದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಜನತಾ ದಳ ಕೊಂಚ ಬಲಿಷ್ಠವಾಗಿತ್ತು. 1989ರ ಚುನಾವಣೆಯಲ್ಲಿ ಜನತಾದಳದ ಅಭ್ಯ ರ್ಥಿ ಮಹಮ್ಮದ್ ಹುಸೇನ್ 1.33 ಲಕ್ಷ ಮತ ಹಾಗೂ 1996 ಚುನಾವಣೆಯಲ್ಲಿ ಬಿ.ಎ.ಜೀವಿಜಯ 1.80 ಲಕ್ಷ ಮತ ಪಡೆದು ಗಮನ ಸೆಳೆದಿದ್ದರು. ಕೇವಲ ಎರಡು ವರ್ಷದ ಬಳಿಕ 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾದಳ ಮತ ತೀವ್ರವಾಗಿ ಕುಸಿದು ಅಭ್ಯರ್ಥಿ ಮಾತಂಡ ರಮೇಶ್ ಕೇವಲ 28 ಸಾವಿರ ಮತ ಪಡೆದಿದ್ದರು. ಜನತಾ ದಳ ಒಡೆದು ಜೆಡಿಎಸ್ ರಚನೆ ಬಳಿಕವೂ ದಳಪತಿಗಳ ಕಳಪೆ ಸಾಧನೆ ಮುಂದುವರಿಯಿತು.

ಸ್ಪರ್ಧಿಸಿದವರು ಪಕ್ಷ ತೊರೆದರು:  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಜೆಡಿಎಸ್ ಗಮನಾರ್ಹ ಸಾಧನೆ ಮಾಡಿಲ್ಲ. 2014ರ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಸಂಸದ ಧನಂಜಯಕುಮಾರ್ ಜೆಡಿಎಸ್‌ನಿಂದ ಸ್ಪರ್ಧಿಸಿ ಕೇವಲ 14 ಸಾವಿರ ಮತ ಪಡೆದಿದ್ದರು. ಹಿಂದಿನ ಉಡುಪಿ ಕ್ಷೇತ್ರದಲ್ಲಿ ಜನತಾದಳ ಕೊಂಚ ಪ್ರಬಲವಾಗಿತ್ತು. 91ರ ಚುನಾವಣೆಯಲ್ಲಿ ಯು.ಆರ್.ಸಭಾಪತಿ 1.04 ಲಕ್ಷ , 96ರಲ್ಲಿ ವಸಂತ ಬಂಗೇರ 1.47ಲಕ್ಷ ಮತ ಪಡೆದಿದ್ದರು. ಇವರಿಬ್ಬರು ಬಳಿಕ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. 98ರ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿದ್ದ ಮಟ್ಟಾರು ರತ್ನಾಕರ ಹೆಗ್ಡೆ ಈಗ ಬಿಜೆಪಿಯಲ್ಲಿದ್ದಾರೆ. ಈ ಬಾರಿ ಕಾಂಗ್ರೆಸ್‌ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೆಡಿಎಸ್ ಅಭ್ಯರ್ಥಿ.