More

    ಸುದರ್ಶನ ಬಿಜೆಪಿ ದ.ಕ ಜಿಲ್ಲಾಧ್ಯಕ್ಷ

    ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಸುದರ್ಶನ ಎಂ.ಅವರನ್ನು ಆಯ್ಕೆ ಮಾಡಲಾಗಿದೆ.
    ರಾಜ್ಯ ಚುನಾವಣಾ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾಣ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕೆ.ಉದಯ ಕುಮಾರ್ ಶೆಟ್ಟಿ ಆಯ್ಕೆ ನಡೆಸಿಕೊಟ್ಟರು.

    ನಿಕಟಪೂರ್ವ ಅಧ್ಯಕ್ಷ ಶಾಸಕ ಸಂಜೀವ ಮಠಂದೂರು, ಶಾಸಕ ಡಾ.ವೈ.ಭರತ್ ಶೆಟ್ಟಿ, ಮುಖಂಡರಾದ ಪ್ರತಾಪ್ ಸಿಂಹ ನಾಯಕ್, ಮಲ್ಲಿಕಾ ಪ್ರಸಾದ್, ಕ್ಯಾ.ಬೃಜೇಶ್ ಚೌಟ, ಕಸ್ತೂರಿ ಪಂಜ, ವಿಜಯ್ ಕುಮಾರ್ ಶೆಟ್ಟಿ, ತಿಲಕ್‌ರಾಜ್, ಕಿಶೋರ್ ಕುಮಾರ್ ರೈ ಮತ್ತಿತರರು ಆಯ್ಕೆ ಸಂದರ್ಭ ಹಾಜರಿದ್ದರು.

    44ರ ಹರೆಯದ ಸುದರ್ಶನ್ ಬಿ.ಕಾಂ.ಪದವೀಧರ. ಮೂಡುಬಿದಿರೆಯ ಧವಳಾ ಕಾಲೇಜಿನ ಹಳೇ ವಿದ್ಯಾರ್ಥಿ. ಬಜರಂಗದಳದ ತಾಲೂಕು ಸಂಚಾಲಕ, ಜಿಲ್ಲಾ ಸಂಚಾಲಕ, ಹಾಗೂ ವಿಶ್ವಹಿಂದು ಪರಿಷತ್ ಸೇವಾ ಪ್ರಮುಖ್ ಆಗಿ ಕಾರ್ಯನಿರ್ವಹಿಸಿ ಬಳಿಕ ಬಿಜೆಪಿಯಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು. ಮೂಡುಬಿದಿರೆ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ, ದ.ಕ ಜಿಲ್ಲಾ ಬಿಜೆಪಿಯ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಅವರು ಮೂರು ವರ್ಷದಿಂದ ದ.ಕ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

    ಕೊಡಗಿಗೆ ರಾಬಿನ್ ದೇವಯ್ಯ: ಮಂಗಳೂರು ವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಯೂ ಮಂಗಳೂರಿನಲ್ಲೇ ನಡೆಯಿತು. ನೂತನ ಜಿಲ್ಲಾಧ್ಯಕ್ಷರಾಗಿ ರಾಬಿನ್ ದೇವಯ್ಯ ಅವರನ್ನು ನಿರ್ಮಲ್ ಕುಮಾರ್ ಸುರಾಣ ಮತ್ತು ಕೊಡಗು ಜಿಲ್ಲಾ ಚುನಾವಣಾ ಸಹಾಯಕ ಅಧಿಕಾರಿ ರವಿಕಾಳಪ್ಪ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ,ಜಿಲ್ಲೆಯ ಶಾಸಕರಾದ ಕೆ.ಜಿ.ಬೋಪಯ್ಯ, ಸುನೀಲ್ ಸುಬ್ರಮಣಿ, ಹಾಲಿ ಜಿಲ್ಲಾಧ್ಯಕ್ಷ ಭಾರತೀಶ್ ಮತ್ತಿತರ ಜಿಲ್ಲಾ ನಾಯಕರು ಹಾಗೂ ನೂತನ ಮಂಡಲ ಅಧ್ಯಕ್ಷರ ಸಮಕ್ಷಮ ರಾಬಿನ್ ದೇವಯ್ಯ ಅವರನ್ನು ಆಯ್ಕೆ ಮಾಡಲಾಯಿತು.

    ಕೇಂದ್ರ, ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ, 8 ವಿಧಾನಸಭಾ ಕ್ಷೇತ್ರದಲ್ಲಿ 7ರಲ್ಲಿ ನಮ್ಮ ಶಾಸಕರಿದ್ದಾರೆ, ನಮ್ಮ ಸಂಸದರೇ ರಾಜ್ಯಾಧ್ಯಕ್ಷರೂ ಆಗಿದ್ದಾರೆ, ಹಾಗಾಗಿ ದಕ್ಷಿಣ ಕನ್ನಡದಲ್ಲಿ ಸಂಘಟನೆ ಕೆಲಸ ಸುಲಭ. ದೊಡ್ಡ ಸಂಘಟನಾತ್ಮಕ ಜಿಲ್ಲೆಯಲ್ಲಿ ಕಿರಿಯನಾದ ನನಗೆ ಸಂಘ ಹಾಗೂ ಪಕ್ಷದ ಹಿರಿಯರು ಜವಾಬ್ದಾರಿ ನೀಡಿದ್ದಾರೆ. ಅವರೆಲ್ಲರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಮುಂಬರುವ ಜಿ.ಪಂ, ತಾಪಂ, ಗ್ರಾಪಂ ಚುನಾವಣೆಗಳಲ್ಲಿ ಪಕ್ಷವನ್ನು ಆಡಳಿತಕ್ಕೆ ತರಲು ಕೆಲಸಗಳು ಆಗಬೇಕಿದೆ.
    – ಸುದರ್ಶನ್, ಜಿಲ್ಲಾಧ್ಯಕ್ಷ, ದ.ಕ.ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts