ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕರೊನಾ ಸೋಂಕಿಗೆ ನಾಲ್ಕನೇ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆ(ಪಿ-536) ಸಾವನ್ನಪ್ಪಿದ್ದವರು. ಇವರು ನಗರದ ಮೂರನೇ ಕರೊನಾ ಪ್ರಕರಣವಾಗಿ ಏ.30ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
ಮಿದುಳಿನ ಕ್ಷಯರೋಗಕ್ಕಾಗಿ ಫಸ್ಟ್‌ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಮಹಿಳೆಗೆ ಕೂಡಾ ಸೋಂಕು ತಗಲಿದ್ದು ಏ.28ರಂದು ಗೊತ್ತಾಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯ ಆಯಾ(ಪಿ-501) ಸಂಪರ್ಕದಿಂದ ಸೋಂಕು ಹರಡಿತ್ತು. ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಬೋಳೂರಿನ ಮಹಿಳೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲವು ದಿನಗಳಿಂದ ಸ್ಥಿತಿ ಗಂಭೀರ ವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ಮಧ್ಯಾಹ್ನ ಮೃತರಾದರು. ಈವರೆಗೆ ಬಂಟ್ವಾಳ ಪ್ರದೇಶದ ಮೂರು ಸಾವುಗಳು ಕರೊನಾ ಕಾರಣದಿಂದ ಸಂಭವಿಸಿದ್ದರೆ ಮೊದಲ ಬಾರಿಗೆ ಮಂಗಳೂರು ನಗರದ ನಿವಾಸಿ ಬುಧವಾರ ಮೃತರಾದಂತಾಗಿದೆ. ಬೋಳೂರಿನ 58ರ ಮಹಿಳೆ ಮೃತಪಟ್ಟಿದ್ದಾರೆ. ಇದುವರೆಗೆ ಮೃತರಾದ ನಾಲ್ಕು ಮಂದಿಯೂ ಮಹಿಳೆಯರು ಹಾಗೂ 50 ವರ್ಷ ಮೇಲ್ಪಟ್ಟವರು ಎನ್ನುವುದು ಗಮನಾರ್ಹ.
ಮತ್ತೊಂದು ಪಾಸಿಟಿವ್: ಫಸ್ಟ್ ನ್ಯೂರೊ ಆಸ್ಪತ್ರೆ ಸಂಪರ್ಕದಿಂದ ಉಳ್ಳಾಲ ಸೋಮೇಶ್ವರದ 38 ವರ್ಷದ ಮಹಿಳೆ(ಪಿ-947)ಗೆ ಸೋಂಕು ತಗಲಿರುವುದು ಬುಧವಾರ ದೃಢಪಟ್ಟಿದೆ.
ಈ ಆಸ್ಪತ್ರೆಯಲ್ಲಿ ಏ. 20 ಹಾಗೂ 21ರಂದು ಮಹಿಳೆಯ ಪುತ್ರಿ ಇದ್ದು ಚಿಕಿತ್ಸೆ ಪಡೆದಿದ್ದರು. ಮಗಳೊಂದಿಗೆ ತಾಯಿ ಸಹಾಯಕ್ಕೆ ಬಂದಿದ್ದರು. ಮಗಳಿಗೆ ಕರೊನಾ ನೆಗಟಿವ್ ಬಂದಿದ್ದು ತಾಯಿಗೆ ಮಾತ್ರ ದೃಢಪಟ್ಟಿದೆ. ಈ ಮೂಲಕ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಬುಧವಾರ 23 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು ಎನ್‌ಐಟಿಕೆಯಲ್ಲಿ 22 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಸಿಕ್ಕಿರುವ 147 ಲ್ಯಾಬ್ ವರದಿಗಳಲ್ಲಿ ಒಂದು ಪಾಸಿಟಿವ್ ಹಾಗೂ 146 ನೆಗೆಟಿವ್. ಇನ್ನೂ 138 ವರದಿಗಳು ಬರಲು ಬಾಕಿ ಇದೆ.
ಇನ್ನೊಂದೆಡೆ, ಕರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ಆಯಾ, ಬಂಟ್ವಾಳ ನರಿಕೊಂಬು ಮಹಿಳೆ(ಪಿ-501) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪಿಲಾರು ಸೀಲ್‌ಡೌನ್
ಮಹಿಳೆಯ ಮನೆಯಿರುವ ಸೋಮೇಶ್ವರ ಪಿಲಾರು ದಾರಂದಬಾಗಿಲು ಪ್ರದೇಶವನ್ನು ಕಂಟೇನ್ಮೆಂಟ್ ವಲಯವಾಗಿ ಡಿಸಿ ಆದೇಶಿಸಿದ್ದಾರೆ. ಈ ಪ್ರದೇಶವನ್ನು ಪೂರ್ತಿಯಾಗಿ ಸೀಲ್‌ಡೌನ್ ಮಾಡಲಾಗಿದೆ. 95 ಮನೆ ಮತ್ತು 10 ವಾಣಿಜ್ಯ ಮಳಿಗೆಗಳು ಕಂಟೈನ್‌ಮೆಂಟ್ ವಲಯದ ವ್ಯಾಪ್ತಿಗೆ ಬರುತ್ತವೆ. ಮಂಗಳೂರು ತಹಸೀಲ್ದಾರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ. ಪೂರ್ವದಲ್ಲಿ ಅಭಿ ಜನರಲ್ ಸ್ಟೋರ್, ಪಶ್ಚಿಮದಲ್ಲಿ ಪಿಲಾರು ಮಸೀದಿ, ಉತ್ತರದಲ್ಲಿ ಪಂಜದಾಯ ದೈವಸ್ಥಾನ, ದಕ್ಷಿಣದಲ್ಲಿ ನಿತ್ಯಾಧರ್ ಚರ್ಚ್ ವಲಯದ ಗಡಿಯಾಗಿರುತ್ತದೆ. 5 ಕಿ.ಮೀ ವ್ಯಾಪ್ತಿಯನ್ನು ಬಫರ್ ವಲಯವಾಗಿಯೂ ಘೋಷಿಸಲಾಗಿದೆ.
ಉಡುಪಿಯಲ್ಲಿ 70 ವರದಿ ನೆಗಟಿವ್
ಉಡುಪಿ/ಕಾಸರಗೋಡು: ಕರೊನಾ ಶಂಕಿತ 70 ಮಂದಿಯ ಮಾದರಿ ವರದಿ ಬುಧವಾರ ನೆಗೆಟಿವ್ ಬಂದಿದ್ದು, 62ಮಂದಿಯ ವರದಿ ಬರಲು ಬಾಕಿ ಇದೆ. ಈವರೆಗೆ ಒಟ್ಟು 1672 ಮಂದಿ ತಪಾಸಣಾ ವರದಿ ನೆಗೆಟಿವ್ ಬಂದಿದೆ. ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆ ಮೂಲದಿಂದ ಕರೊನಾ ಪಾಸಿಟಿವ್ ಬಂದಿದ್ದ ಕಾರ್ಕಳದ ವ್ಯಕ್ತಿ ಜತೆ ನೇರ ಸಂಪರ್ಕ ಹೊಂದಿದ್ದ 17 ಮಂದಿ ಹಾಗೂ ತಮಿಳುನಾಡಿನ ಸಿಮೆಂಟ್ ಲಾರಿ ಚಾಲಕನ ಜತೆ ಸಂಪರ್ಕದಲ್ಲಿದ್ದ ಐದು ಮಂದಿಯ ವರದಿಯೂ ನೆಗೆಟಿವ್ ಬಂದಿದೆ.
ಬುಧವಾರ 45 ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 2 ಮಂದಿ, ಕೋವಿಡ್ ಸಂಪರ್ಕ 2, ಅನಾರೋಗ್ಯ ಪೀಡಿತ 24, ಹಾಟ್‌ಸ್ಪಾಟ್ ಭೇಟಿ ನೀಡಿದ 17 ಮಂದಿ ಸೇರಿದ್ದಾರೆ. 13 ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದು, 22 ಮಂದಿ ಬಿಡುಗಡೆ ಹೊಂದಿದ್ದಾರೆ. 69 ಮಂದಿ 28 ದಿನದ ನಿಗಾವಣೆ, 35 ಮಂದಿ 14 ದಿನದ ನಿಗಾ ಅವಧಿ ಪೂರೈಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಕೋವಿಡ್-19 ವೈರಸ್‌ನ ಹೊಸ ಪ್ರಕರಣ ದಾಖಲಾಗಿಲ್ಲ. ಕೇರಳದಲ್ಲಿ ಇಬ್ಬರು ಪೊಲೀಸರ ಸಹಿತ ಹತ್ತು ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.