ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.40ರಿಂದ 150 ರಷ್ಟು ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ 2009ರಲ್ಲಿ ಗೆಲುವಿನ ಅಂತರ 40,420… ಮೋದಿ ಅಲೆಯ ಪ್ರಾರಂಭದ 2014ರ ಸಂಸತ್ ಚುನಾವಣೆಯಲ್ಲಿನ ಅಂತರ ಹಿಗ್ಗಿದ್ದು 1,43,709… 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳ ಒಟ್ಟು ಮುನ್ನಡೆ ಅದನ್ನೂ ಮೀರಿ 1,50,106ಕ್ಕೆ ಏರಿತು. ಆದರೆ ಅದೆಲ್ಲವನ್ನೂ ಮೀರಿಸಿದಂತೆ ಈ ಬಾರಿ 2,74,621 ಮತಗಳ ಭರ್ಜರಿ ಅಂತರದಲ್ಲಿ ಗೆಲುವು ಬಂದಿದೆ. ಒಟ್ಟಾರೆ ನೋಡಿದರೆ ಜಿಲ್ಲೆಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ಲೀಡ್ ಬಹುತೇಕ ಶೇ.40ರಿಂದ ಶೇ.150ರಷ್ಟು ಏರಿಕೆ ಕಂಡಿದೆ.

ಬೆಳ್ತಂಗಡಿ: ಒಂದೊಮ್ಮೆ ಕಾಂಗ್ರೆಸ್‌ಗೆ ನಿರಂತರ ಮತ ತಂದುಕೊಡುತ್ತಿದ್ದ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ 22,974 ಮತಗಳ ಅಂತರದಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟ ಕ್ಷೇತ್ರವಿದು. 2014ರಲ್ಲಿ ನಳಿನ್‌ಕುಮಾರ್ ಕಟೀಲ್‌ಗೆ 23,123ರಷ್ಟು ಎಂದರೆ ಕೊಂಚ ಹೆಚ್ಚಿನ ಅಂತರದ ಗೆಲುವು ಸಿಕ್ಕಿತ್ತು. ಈ ಬಾರಿ ಇಲ್ಲಿ ಮತಗಳ ಅಂತರ 44,760 ಎಂದರೆ ಬಹುತೇಕ ದ್ವಿಗುಣಗೊಂಡಿದೆ. ಅಸೆಂಬ್ಲಿವಾರು ನೋಡಿದಾಗ ಜಿಲ್ಲೆಯಲ್ಲೇ ಮೂರನೇ ಅತಿದೊಡ್ಡ ಅಂತರವಿದು.

ಮೂಡುಬಿದಿರೆ:  ನಿರಂತರವಾಗಿ ಕಾಂಗ್ರೆಸ್‌ಗೆ ಲೀಡ್ ಕೊಡುತ್ತಿದ್ದ ಮೂಡುಬಿದಿರೆ 2014ರಲ್ಲಿ ಬಿಜೆಪಿಗೆ 19275 ಅಂತರಗಳ ಮುನ್ನಡೆ ಕೊಟ್ಟಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಹಿಂದುತ್ವದ ಪ್ರಾಬಲ್ಯದಲ್ಲಿ ಗೆಲುವು ಸಿಕ್ಕಿತು, ಗೆಲುವಿನ ಅಂತರ 29,799. ಈ ಬಾರಿ ಲೀಡ್ ಅತ್ಯಧಿಕ 37,255ಕ್ಕೆ ತಲುಪಿತು.

ಮಂಗಳೂರು ನಗರ ಉತ್ತರ:  ಹಿಂದೆ ಬಿಜೆಪಿಯೇ ಗೆಲ್ಲುತ್ತಿದ್ದ ಕ್ಷೇತ್ರ ಜಾರಿ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದರೂ 2014ರಲ್ಲಿ ನಳಿನ್‌ಗೆ 23,439 ಮತಗಳ ಲೀಡ್ ಇಲ್ಲಿ ಲಭ್ಯವಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವದ ಅಲೆ ಹಾಗೂ ಮೋದಿ ವರ್ಚಸ್ಸಿನಲ್ಲಿ ಮತ್ತೆ ಬಿಜೆಪಿ 26,648 ಮತಗಳ ಅಂತರದಲ್ಲಿ ಗೆದ್ದುಬಂತು. ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಲೀಡ್ ಜಿಲ್ಲೆಯಲ್ಲೇ ಎರಡನೇ ಅತಿ ಹೆಚ್ಚು, 46,088.

ಮಂಗಳೂರು ನಗರ ದಕ್ಷಿಣ:  ನಿರಂತರ ಬಿಜೆಪಿ ಗೆಲ್ಲುತ್ತಿದ್ದ ವಿಧಾನಸಭಾ ಕ್ಷೇತ್ರ, 2013ರಲ್ಲಿ ಮಾತ್ರ ಕೈ ತಪ್ಪಿ ಕಾಂಗ್ರೆಸ್ ಪಾಲಾಗಿತ್ತು. ಮರುವರ್ಷದ ಲೋಕಸಭಾ ಚುನಾವಣೆಯಲ್ಲಿ ಸಾಮಾನ್ಯ 13,086 ಮತಗಳ ಮುನ್ನಡೆ ಬಂತು. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 16078 ಮತಗಳ ಜಯ ಸಾಧಿಸಿತು, ಈ ಬಾರಿ ಅಂತರ 32835ಕ್ಕೆ ಏರಿಕೆಯಾಯಿತು.

ಮಂಗಳೂರು:  ಮುಸ್ಲಿಂ ಅಲ್ಪಸಂಖ್ಯಾತ ಮತಗಳು ಹೆಚ್ಚಿರುವ ಕ್ಷೇತ್ರ. ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬಲಿಷ್ಠವಾಗಿರುವ ಸ್ಥಳ, 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 13035 ಮತಗಳ ಲೀಡ್ ಕೊಟ್ಟಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದ ಏಕೈಕ ಕ್ಷೇತ್ರವೂ ಹೌದು(ಯು.ಟಿ.ಖಾದರ್ 19739 ಮತಗಳಿಂದ ಗೆದ್ದಿದ್ದರು). ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಲೀಡ್(11392) ಇದ್ದಿದ್ದ ಏಕೈಕ ಅಸೆಂಬ್ಲಿ ಕ್ಷೇತ್ರ.

ಬಂಟ್ವಾಳ:  ಮಾಜಿ ಸಚಿವ ಬಿ.ರಮಾನಾಥ ರೈ ಅವರ ತವರು ಕ್ಷೇತ್ರ. ಕಾಂಗ್ರೆಸ್ ಒಂದೊಮ್ಮೆ ಬಲಿಷ್ಠವಾಗಿದ್ದ ಪ್ರದೇಶ. 2014ರಲ್ಲಿ 14,327 ಮತಗಳ ಲೀಡ್ ಸಿಕ್ಕಿತ್ತು, 2018ರಲ್ಲಿ ಹಿಂದುತ್ವ ಅಲೆ, ಶರತ್ ಮಡಿವಾಳ ಕೊಲೆಯ ವಿವಾದ ಬೆನ್ನಲ್ಲಿ ಬಿಜೆಪಿ 15,971 ಮತಗಳ ಅಂತರದಲ್ಲಿ ಗೆಲುವು ಸಾಧಿಸಿತು. ಈ ಬಾರಿ ಅಂತರ 32063ಕ್ಕೆ ಏರಿಕೆಯಾಗಿದೆ.

ಪುತ್ತೂರು:  ಸಾಂಪ್ರದಾಯಿಕವಾಗಿ ಬಿಜೆಪಿಯ ಮತಗಳು ಭದ್ರವಾಗಿರುವ ಪ್ರದೇಶವಿದು, 2014ರಲ್ಲಿ 29,241 ಮತಗಳ ಲೀಡ್ ನೀಡಿತ್ತು. 2013ರಲ್ಲಿ ಬಿಜೆಪಿಯ ತೆಕ್ಕೆಯಿಂದ ಕಾಂಗ್ರೆಸ್‌ನತ್ತ ಜಾರಿದ್ದ ಕ್ಷೇತ್ರವನ್ನು ಬಿಜೆಪಿ 2018ರಲ್ಲಿ ಮತ್ತೆ 19477 ಮತಗಳ ಅಂತರದ ಗೆಲುವಿನ ಮೂಲಕ ಗಳಿಸಿಕೊಂಡಿತು. ಈ ಬಾರಿಯ ಇಲ್ಲಿ ಬಿಜೆಪಿಯ ಲೀಡ್ 44,599ರಷ್ಟು.

ಸುಳ್ಯ:  ಹಿಂದಿನಿಂದಲೂ ಬಿಜೆಪಿಗೆ ಮಾತ್ರವೇ ಗೆಲುವು ತಂದುಕೊಟ್ಟ, ಯಾವ ಸೋಲಿನ ವೇಳೆಯೂ ಬಿಜೆಪಿಗೆ ಕೈಕೊಡದ ಕ್ಷೇತ್ರವಿದು. 2014ರ ಚುನಾವಣೆಯಲ್ಲಿ 34, 024 ಮತಗಳ ಅತಿದೊಡ್ಡ ಲೀಡ್ ಸಿಕ್ಕಿತ್ತು. 2018ರ ವಿಧಾನಸಭಾ ಚುನಾವಣೆ ವೇಳೆ ಲೀಡ್ ಪ್ರಮಾಣ 26,068ಕ್ಕೆ ಇಳಿಯಿತು. ಈ ಬಾರಿ ಮಾತ್ರ ಜಿಲ್ಲೆಯಲ್ಲೇ ಅತಿ ದೊಡ್ಡ ಎಂದರೆ 47159 ಮತಗಳ ಲೀಡ್ ಪಡೆಯುವ ಮೂಲಕ ಬಿಜೆಪಿಗೆ ಬಲ ನೀಡಿತು.

Leave a Reply

Your email address will not be published. Required fields are marked *