ದಕ್ಷಿಣ ಕನ್ನಡದಲ್ಲಿ ವಿಜೃಂಭಿಸಿದ ಬಿಜೆಪಿ.. ಕಾಂಗ್ರೆಸ್‌ಗೆ ಹೀನಾಯ ಸೋಲು

ವಿಜಯವಾಣಿ ಸುದ್ದಿಜಾಲ ಮಂಗಳೂರು

ದಕ್ಷಿಣ ಕನ್ನಡದಲ್ಲಿ ಮತ್ತೆ ಬಿಜೆಪಿ ವಿಜೃಂಭಿಸಿದೆ. ನಳಿನ್‌ಕುಮಾರ್ ಕಟೀಲ್ ನಿರೀಕ್ಷೆಗೂ ಮೀರಿ ದಾಖಲೆ ಅಂತರದ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸುವ ಮೂಲಕ ಜಯದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮತ್ತೆ ಧರಾಶಾಯಿಯಾಗಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಮಂಗಳೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

ಬಿಜೆಪಿಗೆ ಭರ್ಜರಿ ಲೀಡ್: 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ 15 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಗೆದ್ದಿತ್ತು. ಮೂಡುಬಿದಿರೆ, ಮಂಗಳೂರು ಉತ್ತರ, ಸುಳ್ಯ ಕ್ಷೇತ್ರಗಳಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿತ್ತು. ಈಗ ವರ್ಷದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಅದಕ್ಕಿಂತಲೂ ಹೆಚ್ಚಿನ ಲೀಡ್ ಸಾಧಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾಂಗ್ರೆಸ್ ಮುನ್ನಡೆ ಸಾಧಿಸಿದ ಏಕೈಕ ಕ್ಷೇತ್ರವಾದ ಮಂಗಳೂರಿನಲ್ಲೂ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಲೀಡ್ ಕುಸಿದಿದೆ.

ಶೇ.57.47 ಮತ ಗಳಿಕೆ: ಸುರತ್ಕಲ್ ಎನ್‌ಐಟಿಕೆಯಲ್ಲಿ ಗುರುವಾರ ಬೆಳಗ್ಗೆ ದ.ಕ ಕ್ಷೇತ್ರದ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ನಳಿನ್ ಜಯ ಸಾಧಿಸುವುದು ನಿಚ್ಚಳವಾಗಿತ್ತು. ಪ್ರಥಮವಾಗಿ ನಡೆದ 9,295 ಮತಗಳ ಎಣಿಕೆಯಲ್ಲಿ ಶೇ.58.38 ಮತ ಬಿಜೆಪಿ ಪಾಲಾಗಿತ್ತು. ಬಳಿಕ ನಿರಂತರ ಮುನ್ನಡೆ ಸಾಧಿಸಿದ ಬಿಜೆಪಿ 6ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ 1.08 ಲಕ್ಷ ಮತಗಳಿಂದ ಮುಂದಿತ್ತು.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಯಾವುದೇ ಹಂತದಲ್ಲಿ ಮುನ್ನಡೆ ಸಾಧಿಸುವುದು ಸಾಧ್ಯವಾಗಲಿಲ್ಲ. 9ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ 1.65 ಲಕ್ಷ ಮತಗಳಿಂದ ಮುಂದಿದ್ದು, ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ 11 ಸುತ್ತಿನ ಅಂತ್ಯಕ್ಕೆ ಅಂತರವನ್ನು 2 ಲಕ್ಷಕ್ಕೆ ಏರಿಸುವಲ್ಲಿ ಯಶಸ್ವಿಯಾದರು. ಅಂತಿಮ ಹಾಗೂ 18ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ 2.74 ಲಕ್ಷ ಮತಗಳ ಅಂತರದಿಂದ ಬಿಜೆಪಿ ಜಯ ಸಾಧಿಸಿತು.

ಅಂಚೆ ಮತದಲ್ಲೂ ಬಿಜೆಪಿ ಲೀಡ್: ದ.ಕ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2134 ಅಂಚೆ ಮತ ಚಲಾವಣೆಯಾಗಿದ್ದು, ಈ ಪೈಕಿ 308 ಮತ ತಿರಸ್ಕೃತಗೊಂಡಿದೆ. ಪ್ರಜ್ಞಾವಂತರ ಜಿಲ್ಲೆ ಎಂದು ಗುರುತಿಸಿ ಕೊಂಡಿರುವಲ್ಲೇ ಸರ್ಕಾರಿ ನೌಕರರೇ ಸರಿಯಾಗಿ ಮತ ಚಲಾಯಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಸಿಂಧುವಾದ 1826 ಮತಗಳ ಪೈಕಿ ಬಿಜೆಪಿಯ ನಳಿನ್ 1,531 ಮತ ಪಡೆದರೆ, ಕಾಂಗ್ರೆಸ್‌ನ ಮಿಥುನ್ ರೈ 277 ಮತ ಪಡೆದರು. ಬಿಎಸ್‌ಪಿ ಅಭ್ಯರ್ಥಿ 4 ಹಾಗೂ ಎಸ್‌ಡಿಪಿಐ ಅಭ್ಯರ್ಥಿ 5 ಪಡೆದರು.

8 ಗಂಟೆ ಮತ ಎಣಿಕೆ: ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಬೆಳಗ್ಗೆ 8ಕ್ಕೆ ಆರಂಭವಾದ ಮತ ಎಣಿಕೆ ಕಾರ್ಯ ಸಾಯಂಕಾಲ 4 ಗಂಟೆಗೆ ಪೂರ್ಣಗೊಂಡಿತು. ಅಂಚೆ ಮತಗಳ ಎಣಿಕೆ ಬಳಿಕ ಇವಿಎಂ ಯಂತ್ರಗಳ ಮತ ಎಣಿಕೆ ಆರಂಭಿಸಲಾಯಿತು. ಪ್ರತಿ ಹಂತದಲ್ಲಿ ಮತಗಳ ವಿವರವನ್ನು ಸಾಫ್ಟ್‌ವೇರ್ ಮೂಲಕ ಮಾಧ್ಯಮ ಕೇಂದ್ರದಲ್ಲಿ ಅಳವಡಿಸಿದ ಬೃಹತ್ ಎಲ್‌ಇಡಿ ಪರದೆ ಮೂಲಕ ಪ್ರದರ್ಶಿಸಲಾಯಿತು. ಮತ ಎಣಿಕೆ ಪೂರ್ಣವಾದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದ 5 ಬೂತ್‌ಗಳ ವಿ.ವಿ.ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಯಿತು.

ಯಾರಿಗೆ ಎಷ್ಟು ಮತ?
1. ನಳಿನ್ ಕುಮಾರ್ ಕಟೀಲ್(ಬಿಜೆಪಿ)–774285
2. ಮಿಥುನ್ ಎಂ.ರೈ(ಕಾಂಗ್ರೆಸ್)–449664
3. ಎಸ್.ಸತೀಶ್ ಸಾಲ್ಯಾನ್(ಬಿಎಸ್‌ಪಿ)–4713
4. ಮೊಹಮ್ಮದ್ ಎಲಿಯಾಸ್(ಎಸ್‌ಡಿಪಿಐ)–46839
5. ವಿಜಯ್ ಶ್ರೀನಿವಾಸ್(ಯುಪಿಜೆಪಿ)–1629
6. ಸುಪ್ರೀತ್ ಕುಮಾರ್ ಪೂಜಾರಿ(ಎಚ್‌ಜೆಪಿ)–948
7. ಅಬ್ದುಲ್ ಹಮೀದ್(ಪಕ್ಷೇತರ)–554
8. ಅಲೆಕ್ಸಾಂಡರ್(ಪಕ್ಷೇತರ)–2752
9. ದೀಪಕ್ ರಾಜೇಶ್ ಕೊಯೆಲ್ಲೊ(ಪಕ್ಷೇತರ)-748
10. ಮೊಹಮ್ಮದ್ ಖಾಲಿದ್(ಪಕ್ಷೇತರ)–602
11. ಮ್ಯಾಕ್ಸಿಂ ಪಿಂಟೊ(ಪಕ್ಷೇತರ)–908
12. ವೆಂಕಟೇಶ್ ಬೆಂಡೆ(ಪಕ್ಷೇತರ)–1702
13. ಎಚ್.ಸುರೇಶ್ ಪೂಜಾರಿ(ಪಕ್ಷೇತರ)–2315

ನೋಟಾ: 7380
ಒಟ್ಟು ಚಲಾವಣೆಯಾದ ಮತಗಳು: 13,45,039

ಎಸ್‌ಡಿಪಿಐಗೆ 46 ಸಾವಿರ ಮತ:  2014ರ ಚುನಾವಣೆಯಲ್ಲಿ ಜೆಡಿಎಸ್‌ನ ಮೈತ್ರಿ ಪಕ್ಷವಾಗಿ ಸ್ಪರ್ಧಿಸಿದ ಎಸ್‌ಡಿಪಿಐ 27,254 ಮತ ಪಡೆದಿತ್ತು. ಈ ಬಾರಿ ಮತ್ತೆ ಕಣಕ್ಕಿಳಿಸಿದ ಎಸ್‌ಡಿಪಿಐ 46,839 ಮತ ಗಳಿಸಿದೆ. ಆದರೆ ಎಸ್‌ಡಿಪಿಐ ಪಡೆದ ಮತ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ದ.ಕ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹೊರತಾಗಿ ಉಳಿದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳಕೊಂಡಿದ್ದಾರೆ.

ಎಣಿಕೆ ಕೇಂದ್ರಕ್ಕೆ ಬಾರದ ಮಿಥುನ್: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಲಿಲ್ಲ. ಬಿಜೆಪಿಯ ನಳಿನ್‌ಕುಮಾರ್ ಕಟೀಲ್ ಸುಮಾರು 1 ಲಕ್ಷ ಮತಗಳ ಅಂತರ ಘೋಷಣೆಯಾದ ಬಳಿಕ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು.

5 ವರ್ಷದಲ್ಲಿ ಏರಿಕೆಯಾದ ಕಾಂಗ್ರೆಸ್ ಮತ ಕೇವಲ 634
* 2014ರಲ್ಲಿ ನಳಿನ್ 6,42,739 ಮತ ಗಳಿಸಿದ್ದರೆ, ಕಾಂಗ್ರೆಸ್‌ನ ಜನಾರ್ದನ ಪೂಜಾರಿ 4,99,030 ಮತ ಗಳಿಸಿದ್ದರು. ಈ ಬಾರಿ ನಳಿನ್ ಪಡೆದ ಮತ 7,74,285ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪಡೆದ ಮತ 4,99,664ಕ್ಕೆ ಸೀಮಿತವಾಗಿದೆ.
* ದ.ಕ ಕ್ಷೇತ್ರ (ಹಿಂದಿನ ಮಂಗಳೂರು )ದಲ್ಲಿ ಬಿಜೆಪಿಗೆ ಸತತ 8ನೇ ಜಯ. ಕಾಂಗ್ರೆಸ್‌ಗೆ ಸತತ 8ನೇ ಸೋಲು.
* ನಳಿನ್‌ಕುಮಾರ್ ದ.ಕ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಹಿಂದಿನ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಮತ್ತು ಬಿಜೆಪಿಯ ಧನಂಜಯಕುಮಾರ್ ಸತತ 4 ಬಾರಿ ಆಯ್ಕೆಯಾಗಿದ್ದರು.
* 1991ರಲ್ಲಿ ಪ್ರಥಮ ಬಾರಿಗೆ ಬಿಜೆಪಿ ಮಂಗಳೂರು ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಸಿದು ಕೊಂಡಿತ್ತು. ಇಂದಿಗೂ ಕ್ಷೇತ್ರ ಕಾಂಗ್ರೆಸ್‌ಗೆ ಮರೀಚಿಕೆಯಾಗಿದೆ.

ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ
ಸಂಸದ ನಳಿನ್ ಕುಮಾರ್ ಕಟೀಲು ಅವರ ಹ್ಯಾಟ್ರಿಕ್ ಗೆಲುವನ್ನು ಬಂಟ್ಸ್‌ಹಾಸ್ಟೆಲ್ ಬಿಜೆಪಿ ಚುನಾವಣಾ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನೂರಾರು ಕಾರ್ಯಕರ್ತರು ಇಲ್ಲಿ ಬೆಳಗ್ಗಿನಿಂದಲೇ ಕುಳಿತು ಟಿವಿ ಪರದೆಯಲ್ಲಿ ಫಲಿತಾಂಶ ವೀಕ್ಷಿಸುತ್ತಿದ್ದರು. ಪ್ರತಿ ಸುತ್ತಿನಲ್ಲಿ ನಳಿನ್ ಮುನ್ನಡೆ ಸಾಧಿಸಿರುವ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಗೆಲುವಿನ ಅಂತರ ಹೆಚ್ಚುತ್ತಿದ್ದಂತೆ ಕಾರ್ಯಕರ್ತರ ಸಂಖ್ಯೆ ಹೆಚ್ಚಿತು. ಸಾಯಂಕಾಲ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಪಕ್ಷದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಕಚೇರಿಗೆ ಆಗಮಿಸಿದ ನಳಿನ್ ಅವರನ್ನು ಎತ್ತಿ ಸಂಭ್ರಮಿಸಿದ ಕಾರ್ಯಕರ್ತರು ಹೂಮಾಲೆ ಹಾಕಿ ಸ್ವಾಗತಿಸಿದರು. ನಾಸಿಕ್ ಬ್ಯಾಂಡ್ ಮತ್ತು ಪಟಾಕಿ ಸದ್ದು ಮೇಳೈಸಿತು. ಜೈ, ಜೈ ಬಿಜೆಪಿ, ಮೋದಿ, ಮೋದಿ ಎಂಬ ಘೋಷಣೆ ಕೂಗಿದರು. ನಾಸಿಕ್ ಬ್ಯಾಂಡ್ ಧ್ವನಿಗೆ ಹೆಜ್ಜೆ ಹಾಕಿದ ಮಹಿಳಾ ಕಾರ್ಯಕರ್ತರು ಮೈ ಭೀ ಚೌಕಿದಾರ್ ಟೀ ಶರ್ಟ್ ಮತ್ತು ಕೆಂಪು ಪೇಟಾ ತೊಟ್ಟು ಸಂಭ್ರಮಕ್ಕೆ ಮೆರುಗು ನೀಡಿದರು. ಜಿಲ್ಲೆಯ ವಿವಿಧೆಡೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ.

ಕ್ಷೇತ್ರದ ಮತದಾರರ ತೀರ್ಪನ್ನು ಸ್ವಾಗತಿಸುತ್ತೇನೆ. ವಿಜೇತ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಅಭಿನಂದಿಸುತ್ತೇನೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಯುವಜನರಿಗೆ ಉದ್ಯೋಗ ಸೃಷ್ಟಿ ವಿಷಯದಲ್ಲಿ ಅವರು ಮಹತ್ವದ ಪಾತ್ರ ವಹಿಸಬೇಕು ಎಂದು ಹಾರೈಸುತ್ತೇನೆ. ಬೆಂಬಲಿಸಿದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆಗಳು.
– ಮಿಥುನ್ ರೈ, ಕಾಂಗ್ರೆಸ್ ಅಭ್ಯರ್ಥಿ, ದಕ್ಷಿಣ ಕನ್ನಡ

ಸುಳ್ಯದ ಮೂವರು ಮತ್ತೆ ಲೋಕಸಭೆಗೆ
ಸುಳ್ಯ: ಮೂಲತಃ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯವರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮೂವರು ನಾಯಕರು ಭರ್ಜರಿ ಗೆಲುವಿನ ಮೂಲಕ ಮತ್ತೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ದ.ಕ. ಕ್ಷೇತ್ರದ ನಳಿನ್ ಕುಮಾರ್ ಕಟೀಲ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಮೂವರು ಮೂಲತಃ ಸುಳ್ಯ ಕ್ಷೇತ್ರದವರು. ಡಿವಿಎಸ್ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದವರಾಗಿದ್ದು, ಮುಖ್ಯಮಂತ್ರಿ, ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಕಡಬ ತಾಲೂಕಿನ ಪಾಲ್ತಾಡಿ ಕುಂಜಾಡಿಯವರಾದ ನಳಿನ್ ಕುಮಾರ್ ಸತತ ಮೂರನೇ ಬಾರಿ ದ.ಕ.ದಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಡಬ ತಾಲೂಕಿನ ಚಾರ್ವಾಕದವರಾದ ಶೋಭಾ ಎರಡನೇ ಬಾರಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆಗಿಳಿದು ಗೆಲುವು ಸಾಧಿಸಿದ್ದಾರೆ. ವಿದ್ಯುತ್, ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದವರು ಇವರಾಗಿದ್ದಾರೆ.

Leave a Reply

Your email address will not be published. Required fields are marked *