ಪ್ರಾಮಾಣಿಕ ಸೇವೆಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ: ‘ವಿಜಯವಾಣಿ’ ಸಂದರ್ಶನದಲ್ಲಿ ನಳಿನ್‌ಕುಮಾರ್ ಕಟೀಲ್

ಮಂಗಳೂರು: ದ.ಕ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸಾಗಿದೆ. ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಅವರೇ ಏ.13ರಂದು ಮಂಗಳೂರಿಗೆ ಆಗಮಿಸಿ ಪ್ರಚಾರ ಭಾಷಣ ಮಾಡಲಿದ್ದಾರೆ. ಹಿಂದಿನ ಎರಡು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಹಾಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರನ್ನು ಬಿಜೆಪಿ ಮತ್ತೆ ಕಣಕ್ಕಿಳಿಸಿದೆ. ಮೋದಿ ಅಲೆ, ಕ್ಷೇತ್ರದ ಅಭಿವೃದ್ಧಿಗೆ ದಾಖಲೆಯ ಅನುದಾನ, ನಿರಂತರ ಜನಸಂಪರ್ಕ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದೊರೆತ ಅಭೂತಪೂರ್ವ ಯಶಸ್ಸಿನಿಂದ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ನಳಿನ್‌ಕುಮಾರ್ ಕ್ಷೇತ್ರಾದ್ಯಂತ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಚಾರದ ಸಂದರ್ಭ ‘ವಿಜಯವಾಣಿ’ ಜತೆ ನಳಿನ್ ಮಾತನಾಡಿದ್ದಾರೆ.

ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯ ಹೇಗೆ ನಡೆದಿದೆ?
ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಸುತ್ತಿನ ಪ್ರಚಾರ ಕಾರ್ಯ ಪೂರ್ಣಗೊಂಡಿದೆ. ಎಲ್ಲ ಬೂತ್‌ಗಳಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆ ಸಂಪರ್ಕ ನಡೆಸುತ್ತಿದ್ದಾರೆ. ಮಹಾ ಅಭಿಯಾನ ಮೂಲಕ ಕ್ಷೇತ್ರದ ಎಲ್ಲ ಮನೆಗಳನ್ನು ಸಂಪರ್ಕಿಸುವ ಕಾರ್ಯವೂ ನಡೆದಿದೆ. ಜನರೇ ಸ್ವಯಂಪ್ರೇರಿತರಾಗಿ ಮೋದಿ ಪರ ಪ್ರಚಾರ ನಡೆಸುತ್ತಿರುವುದು ಈ ಬಾರಿಯ ವಿಶೇಷತೆ. ಕ್ಷೇತ್ರದಲ್ಲಿ ಮೋದಿ ಅಲೆ ಇನ್ನಷ್ಟು ಪ್ರಬಲವಾಗಿದೆ.

ನಿಮ್ಮ ಅವಧಿಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ?
ರಾಜಕೀಯ ವಿರೋಧಿಗಳು ಟೀಕಿಸುವುದು ಸಹಜ. ಆದರೆ ಕಾಂಗ್ರೆಸ್‌ನವರು ವಾಸ್ತವಾಂಶ ಮರೆಮಾಚಿ ಅಪಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಥಮ ಬಾರಿಗೆ ಸಂಸದನಾದ ಸಂದರ್ಭ ಕಾಂಗ್ರೆಸ್ ಸರ್ಕಾರವಿತ್ತು. ಆಗ ನನ್ನ ಪ್ರಯತ್ನದ ಲವಾಗಿ 4000 ಕೋಟಿ ರೂ. ಅನುದಾನ ತಂದಿದ್ದೆ. ಈ ಬಾರಿ ಆಡಳಿತ ಪಕ್ಷದ ಸಂಸದನಾಗಿ 16,200 ಕೋಟಿ ರೂ. ಅನುದಾನ ತರಲು ಯಶಸ್ವಿಯಾಗಿದ್ದೇನೆ. ರಾಜ್ಯದಲ್ಲೇ ಒಂದು ಕ್ಷೇತ್ರಕ್ಕೆ ಬಂದಿರುವ ಅತೀ ಹೆಚ್ಚು ಅನುದಾನ ಇದು. ಕ್ಷೇತ್ರಕ್ಕೆ ತಂದ ಅನುದಾನ ಮತ್ತು ಅಭಿವೃದ್ಧಿ ಕಾರ್ಯಗಳ ವಿವರ ನನ್ನಲ್ಲಿದೆ. ಕ್ಷೇತ್ರದ ಜನತೆಗೆ ಇದು ತಿಳಿದಿದೆ. ಕಾಂಗ್ರೆಸ್‌ನವರು ಮಾತ್ರ ಇದನ್ನು ಒಪ್ಪುವುದಿಲ್ಲ.

ನೀವು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದೀರಿ ಎನ್ನುವ ಟೀಕೆಯೂ ಇದೆ?
ಮೋದಿ ದಕ್ಷ ಆಡಳಿತ ನೀಡಿದ್ದಾರೆ. ಇಂದು ವಿಶ್ವವೇ ಅವರ ನಾಯಕತ್ವವನ್ನು ಕೊಂಡಾಡುತ್ತಿದೆ. ಮೋದಿ ಹೆಸರಿನಲ್ಲಿ ಹೆಮ್ಮೆಯಿಂದ ಮತ ಕೇಳುತ್ತಿದ್ದೇವೆ. ಅದರಲ್ಲಿ ತಪ್ಪೇನಿದೆ. ಕಾಂಗ್ರೆಸ್‌ನವರಿಗೆ ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಟೀಕೆ ಮಾಡುತ್ತಿದ್ದಾರೆ.

ನಿಮಗೆ ಪಕ್ಷ ಮೂರನೇ ಬಾರಿಗೆ ಸ್ಪರ್ಧೆಗೆ ಅವಕಾಶ ನೀಡಿರುವ ಬಗ್ಗೆ?
ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಕಳೆದ ಎರಡು ಅವಧಿಯಲ್ಲಿ ಸಂಸದನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ ಎನ್ನುವ ಆತ್ಮವಿಶ್ವಾಸ ನನಗಿದೆ. ಭ್ರಷ್ಟಾಚಾರ ರಹಿತ ರಾಜಕೀಯ ನಡೆಸಿದ್ದೇನೆ. ಪಕ್ಷದ ಕಾರ್ಯಕರ್ತರ ಘನತೆಗೆ ಯಾವುದೇ ಚ್ಯುತಿಯಾಗದಂತೆ ಕರ್ತವ್ಯ ನಿರ್ವಹಿಸಿದ್ದೇನೆ. ‘ವಿಜಯವಾಣಿ’ ನಡೆಸಿದ ಸಮೀಕ್ಷೆ ನನ್ನನ್ನು ರಾಜ್ಯದ ನಂ.1 ಸಂಸದನಾಗಿ ಗುರುತಿಸಿತು. ಪಕ್ಷ ಸಂಘಟನೆಗೂ ನಿರಂತರ ಓಡಾಟ ನಡೆಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ದುಡಿದು 7 ಕ್ಷೇತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ನನ್ನ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಪಕ್ಷ ಮತ್ತೆ ಸ್ಪರ್ಧೆಗೆ ಅವಕಾಶ ನೀಡಿದೆ ಎಂದು ನಂಬಿದ್ದೇನೆ.

ವಿಜಯ ಬ್ಯಾಂಕ್ ವಿಲೀನ ಬಗ್ಗೆ ಕಾಂಗ್ರೆಸ್‌ನವರು ಪ್ರಶ್ನಿಸುತ್ತಿದ್ದಾರೆ?
ವಿಜಯ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು ಕಾಂಗ್ರೆಸ್. ವಿಜಯ ಬ್ಯಾಂಕ್ ವಿಲೀನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇ ಕಾಂಗ್ರೆಸ್ ಸರ್ಕಾರ. ಈಗ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಬ್ಯಾಂಕ್‌ಗಳ ವಿಲೀನದ ಆಶ್ವಾಸನೆ ಇದೆ. ವಿಜಯ ಬ್ಯಾಂಕ್ ಅಭಿವೃದ್ಧಿ ರೂವಾರಿ ಸುಂದರರಾಮ ಶೆಟ್ಟಿ ಅವರ ಹೆಸರು ರಸ್ತೆಗೆ ಇರಿಸಲು ಬಹಿರಂಗವಾಗಿ ವಿರೋಧಿಸಿದ ಕಾಂಗ್ರೆಸ್ ನಾಯಕರು ಈಗ ರಾಜಕೀಯ ಲಾಭ ಪಡೆಯಲು ನಾಟಕವಾಡುತ್ತಿದ್ದಾರೆ.

ಕರಾವಳಿಗೆ ನೀವು ಯಾವುದೇ ಕೊಡುಗೆ ನೀಡಿಲ್ಲ ಎಂದು ರಮಾನಾಥ ರೈ ಆರೋಪಿಸಿದ್ದಾರೆ?
ಮಾಜಿ ಉಸ್ತುವಾರಿ ಸಚಿವರು ಜಿಲ್ಲೆಗೆ ನೀಡಿದ ಕೊಡುಗೆ ಏನೆಂದು ಮೊದಲು ಹೇಳಲಿ? ಕಾಂಗ್ರೆಸ್ ಆಡಳಿತದಲ್ಲಿ ಅಮಾಯಕ ಹಿಂದು ಯುವಕರ ಕಗ್ಗೊಲೆ ಮತ್ತು ದನಗಳ್ಳರಿಗೆ ರಕ್ಷಣೆ ನೀಡಿದ್ದೇ ಅವರ ಸಾಧನೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕವೂ ಅವರು ಪಾಠ ಕಲಿತಿಲ್ಲ. ನಾನು ಅಭಿವೃದ್ಧಿ ಕಾರ್ಯಗಳ ಮೂಲಕ ಮತ ಯಾಚಿಸುತ್ತಿದ್ದೇನೆ. ನನ್ನ ಪ್ರಾಮಾಣಿಕ ಸೇವೆಯೇ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ.

ಮತದಾರರಿಗೆ ನಿಮ್ಮ ಭರವಸೆ ಏನು?
ಅಭಿವೃದ್ಧಿ ಒಂದು ನಿರಂತರ ಪ್ರಕ್ರಿಯೆ. ಈ ಅವಧಿಯಲ್ಲಿ ರೈಲ್ವೆ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1243.93 ಕೋಟಿ ರೂ. ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 7,318 ಕೋಟಿ ರೂ. ತಂದಿದ್ದೇನೆ. ಅನುಷ್ಠಾನ ಹಂತದಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರೈಸಲಾಗುವುದು. ಕೃಷಿ ಆಧಾರಿತ ವಿತ್ತ ವಲಯ, ಪ್ರವಾಸೋದ್ಯಮ ಮತ್ತು ಐಟಿ ಪಾರ್ಕ್ ಅಭಿವೃದ್ಧಿ ಜತೆಗೆ ಹಲವು ಯೋಜನೆ ನನ್ನ ಮುಂದಿದೆ.