ದಾಖಲೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಗೋಕರ್ಣ: ಉಚ್ಚ ನ್ಯಾಯಾಲಯದ ಆದೇಶದಂತೆ ಮಹಾಬಲೇಶ್ವರ ಮಂದಿರದ ಎಲ್ಲ ಚರ- ಸ್ಥಿರ ಆಸ್ತಿ ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ. ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು.

ಮಹಾಬಲೇಶ್ವರ ಮಂದಿರದಲ್ಲಿನ ದಾಖಲೆಗಳನ್ನು ಗುರುವಾರ ಪುನಃ ಪರಿಶೀಲಿಸಿ ಅವರು ಮಾತನಾಡಿದರು. ನ್ಯಾಯಮೂರ್ತಿ ಶ್ರೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಹೊಸದಾಗಿ ಆಡಳಿತ ಮಂಡಳಿ ರಚಿಸಲಾಗುವುದು. ಇಲ್ಲಿನ ಇಬ್ಬರು ಉಪಾಧಿವಂತರನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಬಗೆಗೆ ಅರ್ಜಿ ಸಲ್ಲಿಸುವ ಕುರಿತು ನೋಟಿಸ್ ಜಾರಿ ಮಾಡಲಾಗುವುದು ಎಂದರು.

ಮಂದಿರದಲ್ಲಿ ನಿತ್ಯ ಬಳಕೆಗೆ ಅಗತ್ಯವಿರುವ ಚಿನ್ನ, ಬೆಳ್ಳಿಯ ವಸ್ತು ಮತ್ತು ಆಭರಣಗಳ ಹೊರತಾಗಿ ಉಳಿದವುಗಳನ್ನು ಖಜಾನೆಯಲ್ಲಿಡುವ ಬಗೆಗೆ ರ್ಚಚಿಸಲಾಯಿತು. ಇದಕ್ಕೆ ಸಹಮತ ವ್ಯಕ್ತಪಡಿಸದ ಮಂದಿರ ಆಡಳಿತ ಮಂಡಳಿ ಇಂತಹ ಯಾವುದೇ ಆದೇಶವನ್ನು ನ್ಯಾಯಾಲಯ ಮಾಡಿಲ್ಲ. ತೀರ್ಪಿನ ಪ್ರಕಾರ ಸೆ. 10ರವರೆಗೆ ಯಥಾಸ್ಥಿತಿಗೆ ಆಸ್ಪದವಿದೆ. ಕಾರಣ ಇವುಗಳನ್ನು ಖಜಾನೆಯಲ್ಲಿ ಇಡಬಾರದು ಎಂದು ಕೇಳಿಕೊಳ್ಳಲಾಯಿತು. ಚಿನ್ನ ಬೆಳ್ಳಿ ಮತ್ತು ಇತರ ವಸ್ತುಗಳನ್ನು ಜಿಲ್ಲಾಧಿಕಾರಿ ಪರೀಕ್ಷಿಸಿದರು.

ಈ ವೇಳೆ ಕೇಂದ್ರ ಸಹಾಯಕ ಸುರೇಶ ಇಟ್ನಾಳ್, ಕುಮಟಾ ಉಪವಿಭಾಗಾಧಿಕಾರಿ ಲಕ್ಷ್ಮೀ ಪ್ರಿಯ, ಆಡಳಿತಾಧಿಕಾರಿ ಜಿ.ಕೆ. ಹೆಗಡೆ, ಕಾರ್ಯದರ್ಶಿ ಜಿ.ಜಿ. ಭಟ್ಟ ಹೊನ್ನಾವರ, ಮುಖ್ಯ ಅರ್ಚಕ ಶಿತಿಕಂಠ ಹಿರೇ, ಉಪಾಧಿವಂತ ಮಂಡಳ ಕಾರ್ಯದರ್ಶಿ ಬಾಲಕೃಷ್ಣ ಜಂಭೆ,ನ್ಯಾಯಾಲಯದ ಅರ್ಜಿದಾರರಾದ ಬಾಲಚಂದ್ರ ದೀಕ್ಷಿತ್, ಚಿಂತಾಮಣಿ ಉಪಾಧ್ಯ, ಗಣಪತಿ ಗಜಾನನ ಹಿರೇ ಮುಂತಾದವರಿದ್ದರು.

ಮಾಜಿ ಟ್ರಸ್ಟಿಗಳಿಗೆ ನೋಟಿಸ್ : 2008ರಲ್ಲಿ ಮಂದಿರ ಆಡಳಿತ ಹೊಣೆಯನ್ನು ರಾಮಚಂದ್ರಾಪುರ ಮಠಕ್ಕೆ ಒಪ್ಪಿಸುವುದಕ್ಕೂ ಮೊದಲು ಕಾರ್ಯ ನಿರ್ವಹಿಸಿದ ಮಂದಿರದ ಆಡಳಿತ ಮಂಡಳಿಯ ಯಾವುದೇ ವಿವರ ಲಭ್ಯವಿಲ್ಲ. ಹಸ್ತಾಂತರ ಸಮಯದಲ್ಲಿ ಯಾವುದೇ ಟ್ರಸ್ಟಿಗಳು ಹಾಜರಿಲ್ಲ. ಅವರ ಬಳಿ ಮಂದಿರಕ್ಕೆ ಸೇರಿದ ವಸ್ತುಗಳು ಇದ್ದವೋ ಇಲ್ಲವೋ ಎನ್ನುವುದೂ ದಾಖಲಿಲ್ಲ. ಕಾರಣ ಆಡಳಿತ ಮಂಡಳಿಯ ಮಾಜಿ ಟ್ರಸ್ಟಿಗಳ ಬಳಿ 2008ರ ಹಸ್ತಾಂತರದ ವೇಳೆ ಒಪ್ಪಿಸದೇ ಹಾಗೇ ಇರುವ ಮಂದಿರಕ್ಕೆ ಸೇರಿದ ಯಾವುದೇ ವಸ್ತುಗಳಿದ್ದರೆ ಅವುಗಳನ್ನು ಈಗಲೂ ಒಪ್ಪಿಸಲು ಅವಕಾಶವಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.