ಗುರುಪುರ: ಗುರುಪುರ ಮಾಣಿಬೆಟ್ಟು ಶ್ರೀ ಕೋರ‌್ದಬ್ಬು ಪರಿವಾರ ದೈವಸ್ಥಾನ ಬಳಿಯ ಮೂಲ ಸಾನ್ನಿಧ್ಯವಿದ್ದ ಜಾಗದಲ್ಲಿ ಉತ್ಖನನ ಮಾಡಿದಾಗ ಸುಮಾರು 300 ವರ್ಷಗಳಷ್ಟು ಹಳೆಯ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ.
ದೈವಸ್ಥಾನದಲ್ಲಿ ಇಡಲಾಗಿದ್ದ ತಾಂಬೂಲ ಪ್ರಶ್ನೆ ವೇಳೆ ಶಶಿಕುಮಾರ್ ಪಂಡಿತ್ ಅವರು ಹಳೆ ದೈವಸ್ಥಾನವಿದ್ದ ಜಾಗದಲ್ಲಿ ದೈವದ ಸೊತ್ತುಗಳಿರುವ ಬಗ್ಗೆ ಸೂಚನೆ ನೀಡಿದ್ದರು. ಅಂತೆಯೇ ಬುಧವಾರ ಸ್ಥಳದಲ್ಲಿ ಉತ್ಖನನ ಮಾಡಲಾಯಿತು.
ಉತ್ಖನನದ ವೇಳೆ ಸುಮಾರು 300 ವರ್ಷಗಳಷ್ಟು ಹಳೆಯ ಕೋರ‌್ದಬ್ಬು ಅಥವಾ ಪಂಜುರ್ಲಿ ದೈವದ ಮೂರ್ತಿ, ಕಂಚಿನ ಮೊಲ, ಖಡ್ಸಲೆ, ಗೋಣ(ಕೋಣ), ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ತಂದೇಲ್, ದೀಪ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. ಇವುಗಳಲ್ಲಿ ದೀಪ ಮಣ್ಣಿದ್ದಾಗಿದ್ದರೆ, ಉಳಿದ ಸೊತ್ತುಗಳು ಪಂಚಲೋಹ, ಕಂಚು, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ.
ಉತ್ಖನನಕ್ಕೆ ಮುಂಚೆ ಕಾವೂರಿನ ವಿನಾಯಕ ಕಾರಂತ ಅವರು ಸಂಕೋಚ ನೆರವೇರಿಸಿದರು. ವಾಸುದೇವ ಭಟ್, ಗಂಗಾಧರ ಸಪಲಿಗ, ಲಕ್ಷ್ಮಣ ಸಾಲ್ಯಾನ್, ಶ್ರೀನಿವಾಸ ಆಳ್ವ ಕಾರಮೊಗರುಗುತ್ತು, ದೀಪಕ್ ಬಂಗೇರ, ಸುಶೀಲ್ ಸಪಲಿಗ, ಜಗದೀಶ ಶೆಟ್ಟಿ, ಪ್ರಭಾಕರ ಶೆಟ್ಟಿ, ನಳಿನಿ ಶೆಟ್ಟಿ, ಪ್ರಜ್ವಲ್ ಬರ್ಕೆ, ಸಾಲ್ಯಾನ್ ಕುಟುಂಬಿಕರು, ಭಕ್ತರು ಹಾಗೂ ಕುತೂಹಲಿಗರು ಇದ್ದರು.
ಪತ್ತೆಯಾಗಿರುವ ಸೊತ್ತುಗಳು ಸುಮಾರು 300 ವರ್ಷ ಪ್ರಾಚೀನದ್ದಾಗಿರಬಹುದು. ಸದ್ಯ ಇವುಗಳನ್ನು ದೈವಸ್ಥಾನದಲ್ಲಿಡಲಾಗಿದೆ. ಇಲ್ಲಿನ ಶ್ರೀ ಕೋರ‌್ದಬ್ಬು ಕಾರಣಿಕದ ದೈವ ಎಂಬುದಕ್ಕೆ ಈಗ ಸಿಕ್ಕಿರುವ ಪುರಾತನ ಸೊತ್ತುಗಳು ಸಾಕ್ಷ್ಯವಾಗಿವೆ. ತುಳುನಾಡ ಜಾನಪದ ಅಧ್ಯಯನಕ್ಕೆ ಇದು ಪೂರಕ ಸೊತ್ತುಗಳಾಗಬಹುದು.
ವಿನಯಕುಮಾರ್ ಶೆಟ್ಟಿ, ಮಾಣಿಬೆಟ್ಟುಗುತ್ತು