More

  ರೈತನ ಕೈ ಹಿಡಿಯಲಿದೆ ಹೈನುಗಾರಿಕೆ

  ಅರಕಲಗೂಡು : ಜಾನುವಾರು ಸಾಕಣೆಯಿಂದ ಕೃಷಿ ಭೂಮಿ ಫಲವತ್ತತೆ ಕಾಪಾಡಿಕೊಳ್ಳುವ ಜತೆಗೆ ಲಾಭದಾಯಕ ಉದ್ಯಮವಾಗಿ ರೈತಾಪಿ ವರ್ಗದ ಜನರ ಕೈ ಹಿಡಿಯಲಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

  ತಾಲೂಕಿನ ಸಿದ್ದಾಪುರ ಗೇಟ್‌ನಲ್ಲಿ ಬುಧವಾರ ಪಶುಪಾಲನಾ ಇಲಾಖೆ, ಐಟಿಸಿ ಕಂಪನಿ ಮತ್ತು ಎಂಪಿಸಿಎಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನುವಾರು ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

  ಕೃಷಿಯಲ್ಲಿ ರೈತರು ಒಂದೊಮ್ಮೆ ಆರ್ಥಿಕವಾಗಿ ನಷ್ಟ ಅನುಭವಿಸಿದರೂ ಹೈನುಗಾರಿಕೆಯಲ್ಲಿ ಆದಾಯ ಕಂಡುಕೊಳ್ಳಬಹುದು. ಅಲ್ಲದೇ ಜಾನುವಾರುಗಳನ್ನು ಹೆಚ್ಚು ಸಾಕಣೆ ಮಾಡಿದರೆ ಕೊಟ್ಟಿಗೆ ಗೊಬ್ಬರದಿಂದ ಕೃಷಿ ಭೂಮಿ ಬರಡಾಗುವುದನ್ನು ತಪ್ಪಿ ಬೆಳೆಗೆ ವರದಾನವಾಗಲಿದೆ. ಇದರಿಂದ ಅನ್ನದಾತರು ಆರ್ಥಿಕವಾಗಿ ಉನ್ನತಿ ಹೊಂದಬಹುದು. ಹೀಗಾಗಿ ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

  ಜಾನುವಾರುಗಳು ಆಕಸ್ಮಿಕವಾಗಿ ಸತ್ತರೆ 10 ಸಾವಿರ ರೂ. ಪರಿಹಾರ ಸಿಗಲಿದೆ. ನಾನು ಪಶು ಸಂಗೋಪನೆ ಸಚಿವನಾಗಿದ್ದ ವೇಳೆ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ರಾಷ್ಟ್ರೀಯ ಜಾನುವಾರು ವಿಮೆ ಯೋಜನೆಯಡಿ ನಿರುದ್ಯೋಗಿಗಳಿಗೆ ಕುರಿ, ಹಂದಿ, ಸಾಕಣೆಗೆ ಶೇ. 50ರಷ್ಟು ಸಬ್ಸಿಡಿ ಜತೆಗೆ ಒಂದು ಕೋಟಿ ರೂ. ತನಕ ಸಾಲ ಸಿಗಲಿದೆ ಎಂದರು.

  ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎ.ಡಿ. ಶಿವರಾಂ ಮಾತನಾಡಿ, ರೈತರಲ್ಲಿ ಜಾನುವಾರು ಸಾಕಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

  ಸರಗೂರು ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ಹಾಸನ ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ರಮೇಶ್, ತಾಪಂ ಇಒ ಅಶೋಕ್, ಹಾರಂಗಿ ಮಹಾ ಮಂಡಲ ಅಧ್ಯಕ್ಷ ಚೌಡೇಗೌಡ, ಜಿಪಂ ಮಾಜಿ ಸದಸ್ಯ ಬಿ.ಜೆ. ಅಪ್ಪಣ್ಣ ಇತರರಿದ್ದರು.

  ಶಿಬಿರದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು ಕರೆತಂದಿದ್ದ ಮಿಶ್ರ ತಳಿ ಹಸು ಕರುಗಳು, ನಾಟಿ ಹಸು ಕರುಗಳ ಪ್ರದರ್ಶನ ನಡೆಯಿತು. ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ತಜ್ಞ ಪಶುವೈದ್ಯರು ಬರಗಾಲದಲ್ಲಿ ಜಾನುವಾರು ನಿರ್ವಹಣೆ ಕುರಿತು ಮಾಹಿತಿ ನೀಡಿದರು. ತಜ್ಞ ಪಶು ವೈದ್ಯರಾದ ಡಾ. ಶಂಕರೇಗೌಡ, ಡಾ. ಎಂ. ಶಿವಕುಮಾರ್, ಡಾ. ನಂಜೇಶ್, ಡಾ. ರಾಮು, ಡಾ. ಆದರ್ಶ, ಡಾ. ಚೇತನ್ ಕುಮಾರ್, ಡಾ. ಚಿರಂಜಿವಿ, ಡಾ. ಪವನ್ ಜಾನುವಾರು ಆರೋಗ್ಯ ತಪಾಸಣೆ ನಡೆಸಿ ರಾಸುಗಳಿಗೆ ಲಸಿಕೆ ಹಾಕಿ ಜಂತುನಾಶಕ ಔಷಧ ನೀಡಿದರು.

  ಶಿಬಿರದಲ್ಲಿ ಭಾಗವಹಿಸಿದ್ದ 230 ಜಾನುವಾರುಗಳಿಗೆ ಉತ್ತೇಜನಕರ ಬಹುಮಾನ ಮತ್ತು ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts