ಬೆಂಗಳೂರು: ಕನ್ನಡದ ‘ಸ್ಪುರದ್ರೂಪಿ’ ನಟ ರಮೇಶ್ ಅರವಿಂದ್ ತಮ್ಮ 106ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ‘ದೈಜಿ’ ಎಂದು ಹೆಸರಿಡಲಾಗಿದ್ದು, ಹಿಂದೆ ಚಿತ್ರದ ಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು. ‘ಶಿವಾಜಿ ಸುರತ್ಕಲ್’ ಖ್ಯಾತಿಯ ನಿರ್ದೇಶಕ ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಮೂಲಕ ರಮೇಶ್ ಹಾಗೂ ಆಕಾಶ್ ಮೂರನೇ ಬಾರಿಗೆ ಒಂದಾಗುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಸಿನಿಮಾಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಹಾಗೆಯೇ ಚಿತ್ರದ ನಾಯಕಿಯನ್ನು ಪರಿಚಯಿಸಲಾಗಿದ್ದು, ‘ದೈಜಿ’ಯಲ್ಲಿ ರಮೇಶ್ ಅರವಿಂದ್‌ಗೆ ರಾಧಿಕಾ ನಾರಾಯಣ್ ಜೋಡಿಯಾಗಿದ್ದಾರೆ. ಈ ಬಗ್ಗೆ ನಿರ್ದೇಶಕ ಆಕಾಶ್ ಶ್ರೀವತ್ಸ, ‘‘ಶಿವಾಜಿ ಸುರತ್ಕಲ್’ ಬಳಿಕ ನಾನು ರಮೇಶ್ ಅರವಿಂದ್, ರಾಧಿಕಾ ನಾರಾಯಣ್ ಮತ್ತೆ ಒಂದಾಗುತ್ತಿದ್ದೇವೆ. ‘ದೈಜಿ’ ಇದೊಂದು ನೈಜ ಘಟನೆಯಾಧಾರಿತ ಹಾರರ್ ಸಿನಿಮಾ. ನಿರ್ಮಾಪಕ ರವಿ ಕಶ್ಯಪ್ ಅಮೆರಿಕದಲ್ಲಿರುವಾಗ ಅವರಿಗೆ ಕೆಲವೊಂದಿಷ್ಟು ಘಟನೆಗಳು ಅನುಭವಕ್ಕೆ ಬಂದಿದ್ದು, ಅದನ್ನೇ ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ದೆವ್ವ ಅನ್ನೋದೇ ಒಂದು ಮನಸ್ಥಿತಿ. ಅದನ್ನು ಇಲ್ಲಿ ನಿರೂಪಿಸಲಾಗುತ್ತಿದೆ. ಒಟ್ಟಿನಲ್ಲಿ ಇದು ‘ಆಪ್ತಮಿತ್ರ’ ಚಿತ್ರವನ್ನು ಮತ್ತೊಮ್ಮೆ ನೆನಪಿಸುವಂತಿದೆ’ ಎಂದು ಭರವಸೆ ನೀಡುತ್ತಾರೆ.
ಬಹುತೇಕ ವಿದೇಶದಲ್ಲಿ ಚಿತ್ರೀಕರಣ: ಚಿತ್ರಕ್ಕೆ ರಮೇಶ್ ಅರವಿಂದ ಆಯ್ಕೆ ಹಾಗೂ ಶೂಟಿಂಗ್ ಶೆಡ್ಯೂಲ್ ಬಗ್ಗೆ ಆಕಾಶ್ ಮಾಹಿತಿ ನೀಡಿ, ‘ಚಿತ್ರಕಥೆಯ ಮೂಲಕ ನಮ್ಮ ನಿರ್ಮಾಪಕ ರವಿ ಕಶ್ಯಪ್ ಅನುಭವಗಳೇ ಆಗಿರುವುದರಿಂದ ಇಲ್ಲಿ ರಮೇಶ್ ಅರವಿಂದ್ ಸರ್ ಅವರ ತರ ಹೋಲಿಕೆ ಕಾಣುತ್ತಾರೆ. ಹಾಗಾಗಿ, ಈ ಚಿತ್ರಕ್ಕೂ ಅವರನ್ನು ಮುಂದುವರಿಸಿದೆವು. ‘ದೈಜಿ’ ಎಂದರೆ ಕೊಂಕಣಿಯಲ್ಲಿ ರಕ್ತ ಸಂಬಂಧಿಗಳು ಎಂದರ್ಥ. ಇನ್ನು ಬಹುತೇಕ ಯುಕೆಯಲ್ಲಿ 40 ದಿನಗಳ ಕಾಲ ಶೂಟಿಂಗ್ ನಡೆಸಲಿದ್ದೇವೆ. ಉಳಿದಂತೆ ಉಡುಪಿ, ಶ್ರೀರಂಗಪಟ್ಟಣದಲ್ಲಿ ಕೆಲವು ಭಾಗದ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ನೀಡುತ್ತಾರೆ. ಚಿತ್ರಕ್ಕೆ ಶ್ರೀಶ ಕೊಡುವಳ್ಳಿ ಛಾಯಾಗ್ರಹಣ ಇರಲಿದೆ. ಉಳಿದ ಕಲಾ ಬಳಗ, ತಾಂತ್ರಿಕ ವರ್ಗವನ್ನು ಸದ್ಯದಲ್ಲೇ ಪರಿಚಯಿಸಲಿದ್ದೇವೆ. ಕನ್ನಡ ಜತೆಗೆ ಬೇರೆ ಭಾಷೆಗೆ ತರುವ ಪ್ರಯತ್ನ ನಡೆಯುತ್ತಿದೆ. ಅಲ್ಲದೇ ವಿದೇಶಿ ಭಾಷೆಯಲ್ಲಿ ಕೂಡ ತರುವ ಬಗ್ಗೆ ಮಾತುಕತೆ ನಡೆಯುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ.
2025ರಲ್ಲಿ ರಮೇಶ್ ಹ್ಯಾಟ್ರಿಕ್: ರಮೇಶ್ ಅರವಿಂದ್, ಸದ್ಯ ‘ಕೆಡಿ: ದ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದ ಡಬ್ಬಿಂಗ್ ಶುರುವಾಗಿದೆ. ಇನ್ನು, ನಟ ಗಣೇಶ್ ಜತೆ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದಲ್ಲಿ ನಟಿಸುತ್ತಿದ್ದು, ಇಬ್ಬರು ತ್ಯಾಗರಾಜರು ಮೊದಲ ಬಾರಿಗೆ ಒಂದಾಗಿದ್ದಾರೆ. ಇನ್ನು, ಸದ್ಯದಲ್ಲೇ ‘ದೈಜಿ’ ಚಿತ್ರೀಕರಣ ಆರಂಭವಾಗಲಿದೆ. ಈ ಮೂರು ಸಿನಿಮಾಗಳು ಇದೇ ವರ್ಷ ತೆರೆ ಕಾಣಲಿವೆ.