‘ಭಾರತೀಯ ಚಿತ್ರರಂಗದ ಜನಕ’ ಎಂದು ಪ್ರಸಿದ್ಧರಾಗಿರುವ ದಾದಾ ಸಾಹೇಬ್ ಫಾಲ್ಕೆ ಅವರ ಜೀವನ-ಸಾಧನೆಯನ್ನು ತೆರೆ ಮೇಲೆ ತರಲು ಹಲವರು ಉತ್ಸುಕರಾಗಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಆರಂಭದ ದಿಕ್ಕು ತೋರಿಸಿದ ಈ ಸಿನಿದಿಗ್ಗಜನ ಕುರಿತು ಸಿನಿಮಾ ಮಾಡಲು ಇಬ್ಬರು ಖ್ಯಾತ ನಿರ್ದೇಶಕರು ಮುಂದೆ ಬಂದಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್‌ಗಾಗಿ ಖ್ಯಾತ ನಿರ್ದೇಶಕರಾದ ರಾಜ್‌ಕುಮಾರ್ ಹಿರಾನಿ ಹಾಗೂ ಎಸ್.ಎಸ್.ರಾಜಮೌಳಿ ನಡುವೆ ಜಟಾಪಟಿ ಆರಂಭವಾಗಿದೆ. ಎರಡು ತಂಡಗಳು ಚಿತ್ರದ ಬರವಣಿಗೆಯನ್ನು ಪೂರ್ಣಗೊಳಿಸಿ, ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ. ಆದರೆ, ಯಾರು ಮೊದಲು ಸಿನಿಮಾ ಆರಂಭಿಸಲಿದ್ದಾರೆ ಎಂಬುದೇ ಸದ್ಯಕ್ಕೆ ಅಸ್ಪಷ್ಟವಾಗಿದೆ.

ಎರಡು ವರ್ಷಗಳ ಹಿಂದೆಯೇ ನಿರ್ದೇಶಕ ಎಸ್.ಎಸ್.ರಾಜಮೌಳಿ ‘ಮೇಡ್ ಇನ್ ಇಂಡಿಯಾ’ ಮೂಲಕ ದಾದಾ ಸಾಹೇಬ್ ಸಿನಿಮಾ ಮಾಡುವುದಾಗಿ ಬಹಿರಂಗಪಡಿಸಿದ್ದರು. ಪುತ್ರ ಎಸ್.ಎಸ್.ಕಾರ್ತಿಕೇಯ ಜತೆಗೆ ವರುಣ್ ಗುಪ್ತ ಸಿನಿಮಾ ಸಾರಥ್ಯ ವಹಿಸಲಿದ್ದಾರೆ ಎಂದು ತಿಳಿದುಬಂದಿತ್ತು. ಈಗಾಗಲೇ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದ್ದು, ಇತೀಚೆಗೆ ತಂಡವು ನಟ ಜೂ.ಎನ್‌ಟಿಆರ್‌ರನ್ನು ಭೇಟಿ ಮಾಡಿ, ಮಾತುಕತೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ದಾದಾ ಸಾಹೇಬ್ ಫಾಲ್ಕೆ ಪಾತ್ರದಲ್ಲಿ ಜೂ.ಎನ್‌ಟಿಆರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಬಾಲಿವುಡ್‌ನ ಇನ್ನೊಂದು ತಂಡ ದಾದಾ ಸಾಹೇಬ್ ಬಯೋಪಿಕ್ ಮಾಡಲು ಸದ್ದಿಲ್ಲದೇ ಸಿದ್ಧತೆ ನಡೆಸಿದೆ. ನಿರ್ದೇಶಕ ರಾಜಕುಮಾರ್ ಹಿರಾನಿ ಹಾಗೂ ನಟ ಆಮಿರ್ ಖಾನ್ ಕಾಂಬಿನೇಷನ್‌ನಲ್ಲಿ ‘ದಾದಾ ಸಾಹೇಬ್’ ಮೂಲಕ ಒಂದಾಗುತ್ತಿದ್ದು, ಗುರುವಾರ ಸಿನಿಮಾವನ್ನು ಘೋಷಿಸಿದ್ದಾರೆ. ಇದಕ್ಕಾಗಿ ಹಿರಾನಿ ನಾಲ್ಕು ವರ್ಷಗಳ ಕಾಲ ಬರವಣಿಗೆ ಮಾಡಿ, ಸ್ಕ್ರಿಪ್ಟ್ ಪೂರ್ಣಗೊಳಿಸಿದ್ದಾರೆ. ಸದ್ಯ ಆಮಿರ್ ‘ಸೀತಾರೆ ಜಮೀನ್ ಪರ್’ ಚಿತ್ರದ ಪ್ರಚಾರದಲ್ಲಿದ್ದು, ಅದರ ರಿಲೀಸ್ ಬಳಿಕ ಅಕ್ಟೋಬರ್‌ನಲ್ಲಿ ಬಯೋಪಿಕ್ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಈ ಎರಡು ತಂಡಗಳು ಒಬ್ಬ ವ್ಯಕ್ತಿಯ ಬಗ್ಗೆ ಸಿನಿಮಾ ಮಾಡಲು ಮುಂದಾಗಿರುವುದು ಸದ್ಯಕ್ಕೆ ಪ್ರೇಕ್ಷಕರಲ್ಲಿ ದ್ವಂದ್ವ ಮೂಡಿಸಿದೆ. –ಏಜೆನ್ಸೀಸ್