ದೇವರ ದಾರಿಯಲ್ಲಿ ರಾಶಿ ಮತ್ತು ರಿಷಿ

ಬೆಂಗಳೂರು: ನಿರ್ದೇಶಕ ಲಿಂಗದೇವರು ಮತ್ತು ನಟ ರಿಷಿ ಕಾಂಬಿನೇಷನ್​ನಲ್ಲಿ ‘ದಾರಿ ತಪ್ಪಿಸು ದೇವರೇ’ ಚಿತ್ರ ಸೆಟ್ಟೇರಲಿದೆ ಎಂದು ಕೆಲವು ದಿನಗಳ ಹಿಂದೆ ಸುದ್ದಿ ಆಗಿತ್ತು. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ಶ್ರುತಿ ಈ ಚಿತ್ರದ ಭಾಗವಾಗಲು ಸಾಧ್ಯವಾಗಲಿಲ್ಲ. ಈಗ ‘ದಾರಿ ತಪ್ಪಿಸು ದೇವರೇ’ ನಾಯಕಿ ಸ್ಥಾನಕ್ಕೆ ನಟಿ ರಾಶಿ ಮಹದೇವ ಆಯ್ಕೆ ಆಗಿದ್ದಾರೆ.

ಈಗಾಗಲೇ ವಿಜಯ್ ರಾಘವೇಂದ್ರ ನಾಯಕತ್ವದ ‘ಪರದೇಸಿ ಕೇರಾಫ್ ಲಂಡನ್’ ಚಿತ್ರದಲ್ಲಿ ನಟಿಸಿರುವ ರಾಶಿಗೆ ಈ ಹೊಸ ಆಫರ್ ಸಿಕ್ಕಿದೆ. ಮಂಜುನಾಥ್ ಕಾಮತ್ ಬರೆದಿರುವ ‘ದಾರಿ ತಪ್ಪಿಸು ದೇವರೇ’ ಎಂಬ ಪುಸ್ತಕವೇ ಲಿಂಗದೇವರು ಅವರಿಗೆ ಸ್ಪೂರ್ತಿ. ಆ ಕೃತಿಯಲ್ಲಿ ಇರುವ ಲೇಖನಗಳನ್ನೇ ಆಧಾರವಾಗಿ ಇಟ್ಟುಕೊಂಡು ಅವರು ಚಿತ್ರಕಥೆ ಹೆಣೆದಿದ್ದಾರೆ. ಕಾರ್ಕಳದಿಂದ ಚಿಕ್ಕಮಗಳೂರಿನವರೆಗೆ ಕಥಾನಾಯಕ ಸವಾರಿ ಹೊರಡುತ್ತಾನೆ. ಆ ವೇಳೆ ನಾಯಕಿ ಜತೆಯಾಗುತ್ತಾಳೆ. ಅವರಿಗೆ ಎದುರಾಗುವ ಸಂಗತಿಗಳೇ ಈ ಕಥೆಯ ಸಾರಾಂಶ. ಮಲೆನಾಡಿನ ಆಧುನಿಕ ಹುಡುಗಿಯಾಗಿ ರಾಶಿ ಕಾಣಿಸಿಕೊಳ್ಳಲಿದ್ದಾರೆ. ‘ಉಡುಗೆ-ತೊಡುಗೆ ಸಂಪ್ರದಾಯಸ್ಥ ಯುವತಿಯಂತೆ ಇದ್ದರೂ ಅವಳ ವ್ಯಕ್ತಿತ್ವ ಬೋಲ್ಡ್ ಆಗಿರುತ್ತದೆ’ ಎಂದು ನಾಯಕಿ ಪಾತ್ರದ ಬಗ್ಗೆ ಸಣ್ಣ ಮಾಹಿತಿ ನೀಡುತ್ತಾರೆ ನಿರ್ದೇಶಕರು.

ಬಹುತೇಕ ಚಿತ್ರೀಕರಣ ಮಲೆನಾಡಿನಲ್ಲೇ ನಡೆಯಲಿದೆ. ಹಾಗಾಗಿ ಆ ಭಾಗದ ಮಾತಿನ ಶೈಲಿಯಲ್ಲೇ ಈ ಚಿತ್ರದ ಸಂಭಾಷಣೆ ಇರಲಿದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಶಿ, ಈಗ ಮಲೆನಾಡಿನ ಹುಡುಗಿಯಾಗಿ ನಟಿಸುವ ಸವಾಲು ಸ್ವೀಕರಿಸಿದ್ದಾರೆ. ಅಂತಿಮ ಸುತ್ತಿನ ಮಾತುಕತೆ ಮುಗಿದಿದ್ದು, ಒಪ್ಪಂದಕ್ಕೆ ಸಹಿ ಹಾಕುವುದು ಮಾತ್ರ ಬಾಕಿ ಇದೆಯಂತೆ. ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ‘ನಾನು ಅವನಲ್ಲ ಅವಳು’ ಚಿತ್ರದ ಬಳಿಕ ಲಿಂಗದೇವರು ಈ ಸಿನಿಮಾ ಕೈಗೆತ್ತಿಕೊಂಡಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಲಿಂಗದೇವರು ನಿರ್ದೇಶಿಸಿದ್ದ ಧಾರಾವಾಹಿಗಳನ್ನು ನೋಡಿ ನಮ್ಮ ತಾಯಿ ಮೆಚ್ಚಿಕೊಂಡಿದ್ದರು. ಈಗ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿರುವುದು ನನ್ನ ಅದೃಷ್ಟ. ಈ ಚಿತ್ರ ಜನಮೆಚ್ಚುಗೆಗೆ ಪಾತ್ರವಾಗಲಿದೆ ಎಂಬ ನಂಬಿಕೆ ನನಗಿದೆ.

| ರಾಶಿ ಮಹದೇವ್ ನಟಿ